ಕುಮಾರಸ್ವಾಮಿ ಗದ್ದೆ ನಾಟಿ ಮಾಡಿದ್ದು ನಾಟಕವಾದ್ರೆ, ಯಡಿಯೂರಪ್ಪ ದಲಿತರ ಮನೆಯಲ್ಲಿ ಉಂಡದ್ದು..?!

ಸಮರ ಮತ್ತು ಪ್ರೀತಿಯಲ್ಲಿ ಎಲ್ಲವೂ ಸಹ್ಯ ಅನ್ನುವ ಮಾತಿದೆ. ಆದರೆ ರಾಜಕಾರಣದಲ್ಲಿ ಮಾತ್ರ ಏನೂ ಸಹ್ಯವಲ್ಲ. ಒಬ್ಬನ ಕೈಯಲ್ಲಿ ಹೂವಾಗಿ ಕಂಡದ್ದು, ಮತ್ತೊಬ್ಬನ ಕೈಯಲ್ಲಿ ಹಾವಾಗಿ ಕಾಣುತ್ತದೆ. ಹೋಗಲಿ ಇಲ್ಲಿ ಹೂವು, ಅಲ್ಲಿ ಹಾವು ಇದೆಯೇ, ಅದನ್ನು ನಿಜ ಎಂದುಕೊಳ್ಳೋಣ ಎಂದರೆ ಹಾಗೇನೂ ಇರುವುದಿಲ್ಲ. ಇಬ್ಬರ ಕೈಯಲ್ಲೂ ಹೂವೇ ಇರುತ್ತದೆ. ಆದರೆ ಒಬ್ಬ ತನ್ನ ಕೈಯಲ್ಲಿರುವುದು ಹೂವು ಎಂದು ನಂಬುತ್ತಾನೆ, ಎದುರಾಳಿ ಕೈಯಲ್ಲಿರುವುದನ್ನು ಹಾವು ಎಂದು ತಿವಿಯುತ್ತಾನೆ. ಸಹಿಷ್ಣುತೆ, ಅಸಹಿಷ್ಣುತೆಯನ್ನು ಕಾಲಾನುಕೂಲಕ್ಕೆ ಬೇರ್ಪಡಿಸಿ ನೋಡುವ ರಾಜಕಾರಣದ ಗುಣಧರ್ಮವೇ ಹೀಗೆ. ತನಗೆ ಸಹ್ಯವಾದದ್ದು, ಬೇರೆಯವರಲ್ಲಿ ಅಸಹ್ಯವಾಗಿ ಕಾಣುತ್ತದೆ.

ಕುಮಾರಸ್ವಾಮಿ ಗದ್ದೆಗಿಳಿದು ನಾಟಿ ಮಾಡಿದ್ದೂ ಸಹ ಅದೇ ರೂಪ ಪಡೆದಿದೆ. ಮಣ್ಣಿನ ಮಗನ ಮಗ ಎನ್ನಿಸಿಕೊಂಡ ಕುಮಾರಸ್ವಾಮಿ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಅರಳಕುಪ್ಪೆ-ಸೀತಾಪುರ ಗ್ರಾಮದ ರೈತರ ಗದ್ದೆಗಿಳಿದು ಭತ್ತದ ನಾಟಿ ಮಾಡಿದ್ದು, ಅವರನ್ನು ಕಂಡರಾಗದವರ ಅದರಲ್ಲೂ ಬಿಜೆಪಿ ಮುಖಂಡರ ಮಂಡೆ ಮೇಲೆ ಕುದಿನೀರು ಸುರುವಿದಂತಾಗಿದೆ. ಹೊಟ್ಟೆಗೆ ಕಳ್ಳಿಹಾಲು ಇಳಿದವರಂತೆ ಸಂಕಟ ಹತ್ತಿಕ್ಕಲಾಗದೆ ಕುಮಾರಸ್ವಾಮಿ ಅವರನ್ನು ಮಾತಿನ ಕೂರಂಬುಗಳಿಂದ ಇರಿಯುತ್ತಿದ್ದಾರೆ. ‘ಕುಮಾರಸ್ವಾಮಿ ಆಡ್ತಿರೋದೆಲ್ಲ ಬರೀ ನಾಟಕ. ರೈತರ ಬಗ್ಗೆ ಅವರಿಗೆ ಯಾವುದೇ ಕಾಳಜಿ ಇಲ್ಲ. ಆದರೂ ಕಾಳಜಿ ಇರೋರ ಥರಾ ಸದಾರಮೆ ನಾಟಕ ಆಡುತ್ತಿದ್ದಾರೆ. ಹಿಂದೆ ಗ್ರಾಮವಾಸ್ತವ್ಯದ ‘‘ಡವ್’’ ಮಾಡಿದ್ದರು. ಈಗ ಗದ್ದೆ ನಾಟಿ ‘‘ಡವ್’’ ಮಾಡುತ್ತಿದ್ದಾರೆ’ – ಇವೇ ಮೊದಲಾದವು ಎದಾರಿಳಿಗಳ ಬತ್ತಳಿಕೆಯಿಂದ ಪ್ರಯೋಗ ಆಗುತ್ತಿರುವ ಅಸ್ತ್ರಗಳು!

ಹಾಗಾದರೆ ಕುಮಾರಸ್ವಾಮಿ ಗದ್ದೆಗಿಳಿದು ನಾಟಿ ಮಾಡಿದ್ದು ನಾಟಕವೇ? ಅವರು ನಾಟಿ ಮಾಡಬಾರದಿತ್ತೇ? ಅವರು ನಾಟಿ ಮಾಡಿದ್ದರಿಂದ ಆದ ನಷ್ಟ ಏನು? ಯಾರಿಗೆ ನಷ್ಟವಾಯಿತು? ಮುಖ್ಯಮಂತ್ರಿ ಆದವರು ಗದ್ದೆಗಿಳಿಯಬಾರದೇ? ಅವರು ಗದ್ದೆಗಿಳಿದಿದ್ದರಿಂದ ಮುಖ್ಯಮಂತ್ರಿ ಪಟ್ಟದ ಗೌರವಕ್ಕೆ ಕುಂದುಂಟಾಯಿತೇ? – ಹೀಗೆ ಟೀಕಾಕಾರರ ಅಪಸ್ವರಗಳನ್ನು ಪ್ರಶ್ನಾರ್ಥಕ ಚಿಹ್ನೆಯಲ್ಲಿ ನೋಡುತ್ತಾ ಹೋದರೆ ಸಿಗುವ ಉತ್ತರಗಳು, ಸೃಷ್ಟಿಯಾಗುವ ಮರುಪ್ರಶ್ನೆಗಳು ಮತ್ತದೇ ದೂರುದಾರರ ಬುಡಕ್ಕೇ ಬಂದು ನಿಲ್ಲುತ್ತದೆ. ಏಕೆಂದರೆ ರಾಜಕಾರಣ ಅನ್ನುವುದು ನೋಡುವ ಕಣ್ಣಲ್ಲಿ, ಬಣ್ಣದಲ್ಲಿ ತೆರೆದುಕೊಳ್ಳುತ್ತದೆ. ನೀವು ಹಳದಿ ಕಣ್ಣಿಂದ ನೋಡಿದರೆ ಹಳದಿ, ಬಿಳಿ ಕಣ್ಣುಗಳಿಂದ ನೋಡಿದರೆ ಬಿಳಿ – ಹೀಗೆ ಸರ್ವ ಬಣ್ಣವೂ ಅದರಲ್ಲಿ ಮಿಳಿತವಾಗಿರುತ್ತದೆ. ರಾಜಕಾರಣ ಯಾರೊಬ್ಬರ ಸ್ವತ್ತೂ ಅಲ್ಲದಿರುವುದರಿಂದ, ಅದನ್ನಪ್ಪಿಕೊಂಡಿರುವವರು ಜನರನ್ನು ಒಪ್ಪಿಟ್ಟುಕೊಳ್ಳಲು ಒಂದಲ್ಲ ಒಂದು ರೀತಿಯ ತಂತ್ರ ಬಳಸುತ್ತಲೇ ಇರುತ್ತಿರುತ್ತಾರೆ. ಅದನ್ನು ‘ಗಿಮಿಕ್’ ಎಂದಾದರೂ ಕರೆಯಿರಿ, ‘ಮ್ಯಾಜಿಕ್’ ಎಂದಾದರೂ ಕರೆಯಿರಿ, ‘ನಾಟಕ’ ಅಂತಾದರೂ ಹಂಗಿಸಿರಿ, ‘ಪ್ರಭಾವಪ್ರೇರಕ ಸಂದೇಶವಾಹಕ’ ಅಂತಾದರೂ ಬಣ್ಣಿಸಿರಿ. ಯಾರೂ ಇದಕ್ಕೆ ಹೊರತಾಗಿರುವುದಿಲ್ಲ. ಆದರೆ ಮತ್ತೊಬ್ಬರ ಕ್ರಿಯೆಯನ್ನು ಜರಿಯುವಾಗ ಹಿಂದೆ ತಾವು ಮಾಡಿದ್ದನ್ನು ಮರೆತು ಹೋಗುವುದಿದೆಯಲ್ಲ ಅದೇ ರಾಜಕಾರಣದ ಕುತಂತ್ರಬುತ್ತಿ! ಹೀಗಾಗಿ ಕುಮಾರಸ್ವಾಮಿ ಗದ್ದೆ ನಾಟಿ ಬಗ್ಗೆ ಚಾಟಿ ಬೀಸುತ್ತಿರುವವರಿಗೆ ಹಿಂದೆ ತಾವು ಆಡಿದ್ದ ಆಟಗಳೆಲ್ಲವೂ ಶ್ರೀಕೃಷ್ಣನ ತಾತ್ಕಾಲಿಕ ಶಾಪಕ್ಕೆ ತುತ್ತಾದ ಅರ್ಜುನ ಗಾಂಧರ್ವ ವಿವಾಹವಾಗಿದ್ದ ಚಿತ್ರಾಂಗದೆ, ಉಲೂಪಿಯನ್ನು ಮರೆತು ಹೋದಂತೆ ಆಗಿದೆ.

ರಾಜ್ಯ ಬಿಜೆಪಿ ಪರಮೋಚ್ಚ ನಾಯಕ ಯಡಿಯೂರಪ್ಪನವರು, ‘ಕುಮಾರಸ್ವಾಮಿ ಭತ್ತದ ನಾಟಿ ಮಾಡಿರೋದು ಹಾಸ್ಪಾಸ್ಪದ, ಇಂಥ ಶೋಗಳಿಂದ ರೈತರಿಗೇನು ಪ್ರಯೋಜನ, ಇದೆಲ್ಲ ಬರೀ ನಾಟಕ’ ಎಂದು ವ್ಯಂಗ್ಯವಾಡಿದ್ದಾರೆ. ಬಿಜೆಪಿಯ ಮತ್ತೊಬ್ಬ ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರು, ‘ಕೇವಲ ಒಂದು ದಿನ ನಾಟಿ ಮಾಡಿದರೆ ರೈತನಾಗಲು ಸಾಧ್ಯವಿಲ್ಲ. ಇದು ರೈತರ ನಿತ್ಯದ ಕಸುಬು. ವಾರದಲ್ಲಿ ಕನಿಷ್ಟ ಮೂರು ದಿನವಾದರೂ ಹೊಲದಲ್ಲಿ ಉಳುಮೆ ಮಾಡಬೇಕು’ ಎಂದು ಹೇಳಿದ್ದಾರೆ.

ಇವರೀರ್ವರ ಮಾತುಗಳು ಎಷ್ಟು ಸಮಂಜಸ, ಸಮರ್ಥನೀಯ ಎಂಬುದು ಈಗಿರುವ ಪ್ರಶ್ನೆ. ಕುಮಾರಸ್ವಾಮಿ ಗದ್ದೆಗಿಳಿದು ನಾಟಿ ಮಾಡಿದ್ದು ನಾಟಕವಾದರೆ ಯಡಿಯೂರಪ್ಪನವರು ಕಳೆದ ವಿಧಾನಸಭೆ ಚುನಾವಣೆಗೆ ಮೊದಲು ದಲಿತರ ಮನೆಗಳಿಗೆ ಭೇಟಿ ಕೊಟ್ಟು ತಿಂಡಿ ತಿಂದಿದ್ದರಲ್ಲಾ, ಅದೇನ್ನೆನಂತ ಕರೆಯಬೇಕು? ಚುನಾವಣೆ ಗಿಮಿಕ್ ಅಂತಲೇ, ದಲಿತ ಮತಗಳನ್ನು ಸೆಳೆಯುವ ನಾಟಕವೆಂತಲೇ? ಕುಮಾರಸ್ವಾಮಿ ಅವರದು ನಾಟಕವಾದರೆ ಯಡಿಯೂರಪ್ಪನವರದೂ ನಾಟಕವಲ್ಲವೇ? ಅದೂ ಅಲ್ಲದೇ ಅವರೇನೂ ದಲಿತರ ಮನೆಗೆ ಹೋಗಿ ದಲಿತರು ಮಾಡಿಟ್ಟ ತಿಂಡಿ ತಿಂದರೇ? ಅವರ ಮನೆಯ ತಟ್ಟೆ-ಲೋಟಗಳನ್ನು ಬಳಸಿದರೆ? ಇಲ್ಲ! ಹೋಟೆಲ್‌ನಿಂದ ತರಿಸಿಕೊಂಡಿದ್ದ ತಿಂಡಿಯನ್ನು ಪೇಪರ್ ಪ್ಲೇಟಲಿಟ್ಟುಕೊಂಡು ದಲಿತರ ಮನೆಯಲ್ಲಿ ತಿಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. ಅವರ ಭಾಷೆಯಲ್ಲಿ ಅದು ಗಿಮಿಕ್ಕೇ. ಆದರೆ ಮಾಡೋ ಗಿಮಿಕನ್ನೂ ಸರಿಯಾಗಿ ಮಾಡಲಿಲ್ಲ.

ಯಡಿಯೂರಪ್ಪನವರಿಗೆ ದಲಿತರ ಮೇಲೆ ನಿಜಕ್ಕೂ ಕಾಳಜಿಯಿದ್ದಿದ್ದರೆ ದಲಿತರ ಮನೆಯಲ್ಲೇ ತಯಾರಿದ ಊಟ-ತಿಂಡಿಯನು, ಅವರದೇ ಮನೆ ತಟ್ಟೆಯಲ್ಲಿಟ್ಟು ತಿನ್ನಬೇಕಿತ್ತು ಎಂಬ ಮಾತೂ ಕೇಳಿಬಂದವು. ಆಗಿರುವ ಪ್ರಮಾದವನ್ನು ಸರಿಪಡಿಸಿಕೊಳ್ಳಲು ಯಡಿಯೂರಪ್ಪನವರು ಆಗ ಇನ್ನಿಲ್ಲದಂತೆ ತಿಣುಕಾಡಿದ್ದರು. ಹಾಗಾದರೆ ಯಡಿಯೂರಪ್ಪನವರು ದಲಿತರ ಮನೆಯಲ್ಲಿ ತಿಂಡಿ ತಿಂದಿದ್ದರಿಂದ ಇಡೀ ಪರಿಶಿಷ್ಟ ಸಮುದಾಯ ಉದ್ಧಾರ ಆಗಿಹೋಯಿತೇ? ಅವರ ಕಷ್ಟ-ಕಾರ್ಪಣ್ಯಗಳೆಲ್ಲ ಕಳೆದು ಹೋದವೇ? ಅವರ ಮನೆಗಳೆಲ್ಲ ನಂದಗೋಕುಲವಾದವೇ? ಎಲ್ಲಿ..?! ಎಲೆಕ್ಷನ್ ಮುಗಿದ ಮೇಲೆ ಯಡಿಯೂರಪ್ಪನವರು ಅಪ್ಪಿತಪ್ಪಿಯೂ ಅತ್ತಕಡೆ ತಿರುಗಿ ನೋಡಿಲ್ಲ. ದಲಿತರ ಮನೆಯಲ್ಲಿ ಒಂದು ಲೋಟ ನೀರನ್ನೂ ಕುಡಿದಿಲ್ಲ. ಹಾಗಾದರೆ ಯಡಿಯೂರಪ್ಪನವರು ಆಗ ಆಡಿದ್ದು ‘ಸದಾರಮೆ ನಾಟಕ’ವಲ್ಲವೇ? ಜಗದೀಶ್ ಶೆಟ್ಟರ್ ಅವರು ಹೇಳುವಂತೆ ಒಂದು ದಿನ ರೈತರ ಹೊಲಕ್ಕೆ ಇಳಿದರೆ ರೈತನಾಗುವುದಿಲ್ಲ, ರೈತೋದ್ಧಾರ ಆಗುವುದಿಲ್ಲ ಎನ್ನುವುದಾದರೆ ಯಡಿಯೂರಪ್ಪನವರು ನಿತ್ಯವೂ ದಲಿತರ ಮನೆಗೆ ಭೇಟಿ ಕೊಡಬೇಕಲ್ಲವೇ? ದಲಿತರ ಮೇಲಿನ ಕಕ್ಕುಲತೆ ಕರಗಬಾರದಲ್ಲವೇ?

ಸ್ವಚ್ಛಭಾರತ ಅಭಿಯಾನಕ್ಕೆ ಚಾಲನೆ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರು ಸಾಂಕೇತಿಕವಾಗಿ ದಿಲ್ಲಿಯ ಗಲ್ಲಿಯೊಂದರಲ್ಲಿ ಕಸ ಗುಡಿಸಿದರು. ಇಲ್ಲ, ಇಲ್ಲ ಅದು ಬರೀ ನಾಟಕ, ಅವರು ದಿನಾ ಕಸ ಗುಡಿಸಬೇಕು, ದಿನಾ ಕಸ ಗುಡಿಸದಿದ್ದರೆ ಸ್ವಚ್ಛತೆ ಬಗ್ಗೆ ಅವರಿಗೆ ಕಾಳಜಿ ಇಲ್ಲ ಎಂದರೆ ಹೇಗಾಗುತ್ತದೆ? ಪ್ರಧಾನಿಯಾದವರು ದಿನಾ ಕಸ ಗುಡಿಸಿಕೊಂಡು ಇರಲಾಗುತ್ತದೆಯೇ? ಮಾಜಿ ಪ್ರಧಾನಿಗಳಾದ ಪಂಡಿತ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಅವರು ಹಿಮಾಚಲ ಪ್ರದೇಶ, ನಾಗಾಲೆಂಡ್, ಮಣಿಪುರಕ್ಕೆ ಭೇಟಿ ಕೊಟ್ಟಾಗ ಅಲ್ಲಿನ ಬುಡಕಟ್ಟು ಜನರ ಜತೆಗೂಡಿ ಜಾನಪದ ನ್ಯತ್ಯಕ್ಕೆ ಹೆಜ್ಜೆ ಹಾಕಿದ್ದರು. ಅವರು ದಿನಾ ಬುಡಕಟ್ಟು ಜನರ ಜತೆ ಡ್ಯಾನ್ಸ್ ಮಾಡಬೇಕಿತ್ತು, ಇಲ್ಲದಿದ್ದರೆ ಅವರಿಗೆ ಆ ಬುಡಕಟ್ಟು ಜನರ ಬಗ್ಗೆ ಮಮಕಾರವೂ ಇಲ್ಲ, ಕಾಳಜಿಯೂ ಇಲ್ಲ, ಅದೆಲ್ಲ ಬರೀ ನಾಟಕ ಅಂದರೆ ಹೇಗಾಗುತ್ತದೆ?!

ಅದು ಪ್ರಧಾನಿಯಾಗಲಿ, ಮುಖ್ಯಮಂತ್ರಿಯಿರಲಿ ಅಥವಾ ಮಂತ್ರಿಯಾಗಲಿ ಯಾವುದಾದರೂ ಒಂದು ಯೋಜನೆಗೋ, ಕಾರ್ಯಕ್ರಮಕ್ಕೋ ಚಾಲನೆ ನೀಡುವಾಗ ಸಾಂಕೇತಿಕವಾಗಿ ಅದರಲ್ಲಿ ಪಾಲ್ಗೊಳ್ಳುತ್ತಾರಷ್ಟೇ. ಮೋದಿಯವರು ಸ್ವಚ್ಛ ಭಾರತ ಅಭಿಯಾನಕ್ಕೆ ಕಸ ಗುಡಿಸುವ ಮೂಲಕ ಚಾಲನೆ ಕೊಟ್ಟದ್ದು, ಆ ಯೋಜನೆಯಲ್ಲಿ ಜನರ ಸಕ್ರಿಯ ಪಾಲ್ಗೊಳ್ಳುವಿಕೆಗೆ ಪ್ರೇರಣೆ ನೀಡಲು. ಪ್ರಧಾನಿಯವರೇ ಪಾಲ್ಗೊಂಡ ಈ ಅಭಿಯಾನವನ್ನು ಜನ ಮುಂದಕ್ಕೆತ್ತಿಕೊಂಡು ಹೋಗಲಿ ಎಂಬ ಸದಾಶಯದೊಂದಿಗೆ. ಆದರೆ ಮೋದಿ ಅವರು ದಿನ ಬೆಳಗ್ಗೆ ಮನೆ ಬಾಗಿಲಿಗೆ ಬಂದು ಕಸ ಗುಡಿಸಿ, ರಂಗೋಲಿ ಹಾಕಿ ಹೋಗಲಿ ಎಂದು ಬಯಸುವುದು ಎಷ್ಟರ ಮಟ್ಟಿಗೆ ಸರಿ? ಅದೇ ರೀತಿ ಯಡಿಯೂರಪ್ಪನವರು ಕೂಡ ದಲಿತರ ಮನೆಗೆ ಹೋಗಿ ತಿಂಡಿ ತಿಂದದ್ದು ತಾವು ಹಾಗೂ ತಾವು ಪ್ರತಿನಿಧಿಸುತ್ತಿರುವ ಬಿಜೆಪಿ ದಲಿತರ ಜತೆಗಿದೆ, ದಲಿತರ ಉದ್ಧಾರಕ್ಕೆ ಬದ್ಧವಾಗಿದೆ ಎಂಬ ಸಂದೇಶ ರವಾನಿಸುವ ಸದುದ್ದೇಶದೊಂದಿಗೆ. ಆ ಮೂಲಕ ದಲಿತರೂ ಬಿಜೆಪಿ ಜತೆಗಿರಲಿ, ಇದರಿಂದ ಚುನಾವಣೆಯಲ್ಲಿ ಲಾಭವಾಗುತ್ತದೆ ಎಂಬ ಲೋಭಪೂರಿತ ಲೆಕ್ಕಾಚಾರದೊಂದಿಗೆ. ಇದರಲ್ಲಿ ತಪ್ಪೇನೂ ಇಲ್ಲ. ಆಯಾ ಸಂದರ್ಭಕ್ಕೆ ತಕ್ಕ ದಾಳಗಳನ್ನು ಉರುಳಿಸುವುದು, ಅರಗಿಸಿಕೊಳ್ಳುವುದು ರಾಜಕೀಯದ ಧರ್ಮ.

ಕುಮಾರಸ್ವಾಮಿ ಗದ್ದೆಗಿಳಿದು ಭತ್ತದ ನಾಟಿ ಮಾಡಿದ್ದನ್ನೂ ಅಂಥದ್ದೇ ಕಣ್ಣುಗಳಿಂದ ಕಾಣುವುದು ಈ ರಾಜಕೀಯ ಧರ್ಮಪಾಲನೆಯ ಒಂದಂಶವಾಗುತ್ತದೆ. ಆದರೆ ಪ್ರಧಾನಿ ಕಸ ಗುಡಿಸಿದಾಗ ಈ ಭುವಿಯ ಮೇಲಿನ ಪರಮಾದ್ಭುತ ಪವಾಡ ಎಂದು ಭಾವಿಸಿದವರಿಗೆ, ದಲಿತರ ಮನೆಯಲ್ಲಿ ಕೂತು ಹೋಟೆಲ್ ತಿಂಡಿ ತಿಂದ ಯಡಿಯೂರಪ್ಪನವರು ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿರೂಪದಂತೆ ಕಂಡವರಿಗೆ ಈಗ ಗದ್ದೆಗಿಳಿದು ನಾಟಿ ಮಾಡಿದ ಕುಮಾರಸ್ವಾಾಮಿ ನಾಟಕಕಾರನಂತೆ ಕಾಣುತ್ತಿರುವುದು ಅದ್ಯಾವ ಸೀಮೆಯ ರಾಜಕೀಯ ಗುಣಧರ್ಮ? ಇದು ವಿಪರ್ಯಾಸವಲ್ಲದೇ ಮತ್ತೇನು? ಅದೂ ಇಂಥ ಅನೇಕ ಉದಾಹರಣೆಗಳಿಗೆ ಸಾಕ್ಷಿಯಾಗಿರುವ ಯಡಿಯೂರಪ್ಪನವರೇ ಟೀಕೆಗಿಳಿದಿರುವುದು ತಮ್ಮ ಮೈಮೇಲೆ ತಾವೇ ಕೆಸರು ಎರಚಿಕೊಂಡಂತೆ ಕಾಣುತ್ತಿದೆ.

ನಿಜ, ಮೈತ್ರಿ ಸರಕಾರದ ನೊಗ ಎಳೆಯಲು ತಿಣುಕಾಡುತ್ತಿರುವ, ರೈತರ ಸಾಲಮನ್ನಾ ವಿಚಾರದಲ್ಲಿ ತಾವೇ ಹೇಳಿಕೊಂಡಿರುವಂತೆ ವಿಷಕಂಠರಾಗಿರುವ ಕುಮಾರಸ್ವಾಮಿ ಗದ್ದೆಗಿಳಿದು ನಾಟಿ ಮಾಡಿದ್ದು, ತಮ್ಮ ಪಕ್ಷ ಜಾತ್ಯತೀತ ಜನತಾ ದಳದ ಧಾತುಶಕ್ತಿಯಾಗಿರುವ ರೈತರ ಜತೆಗೆ ಇದ್ದೇವೆ ಎಂಬ ಸಂದೇಶ ರವಾನಿಸಲೋಸುಗ. ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ಬೇಡ. ಅವರ ಜತೆ ತಾವಿದ್ದೇವೆ, ಸಮ್ಮಿಶ್ರ ಸರಕಾರವಿದೆ. ಯಾವುದೇ ಕಾರಣಕ್ಕೂ ಧೃತಿಗೆಡುವ ಅಗತ್ಯವಿಲ್ಲ. ಅವರ ಸಂಕಷ್ಟಗಳೆಲ್ಲವೂ ತಮ್ಮದೇ. ಯಾವುದೇ ರೈತರ ಕುಟುಂಬದಲ್ಲಿ ಆತ್ಮಹತ್ಯೆ ಆದರೆ ಅದು ತಮ್ಮ ಕುಟುಂಬದಲ್ಲಿಯೇ ಸಂಭವಿಸಿದಂತೆ, ಎಲ್ಲರೂ ಜತೆಯಾಗಿ ಬದುಕೋಣ ಎಂಬುದನ್ನು ಮನದಟ್ಟು ಮಾಡಿಕೊಡಲು. ಹೀಗಾಗಿ ಅವರ ಜತೆಗೆ ನಾಟಿ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಕೃಷಿಪ್ರಧಾನ ಭಾರತದ ಯಾವುದೇ ಒಬ್ಬ ಮುಖ್ಯಮಂತ್ರಿ ಈವರೆಗೂ ಈ ರೀತಿ ಗದ್ದೆಗಿಳಿದು ನಾಟಿ ಮಾಡಿದ ಉದಾಹರಣೆಗಳಿಲ್ಲ. ಅದು ಗಿಮಿಕ್ಕೋ, ರಾಜಕೀಯ ತಂತ್ರಗಾರಿಕೆಯೋ ಬೇರೆ ಮಾತು. ಆದರೆ ಒಬ್ಬ ಮುಖ್ಯಮಂತ್ರಿ ತನ್ನ ಹುದ್ದೆ ಪ್ರತಿಷ್ಠೆಯನ್ನು ಬದಿಗೊತ್ತಿ ಗದ್ದೆಗಿಳಿದಿದ್ದನ್ನು ಶ್ಲಾಘಿಸಲೇಬೇಕು. ಅದೂ ಅಲ್ಲದೇ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ತಿಂಗಳಿಗೊಮ್ಮೆ ಇಂಥ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿಯೂ ಹೇಳಿದ್ದಾರೆ. ಇದರಲ್ಲಿ ತಪ್ಪೇನಿದೆ? ಹಾಗೆಂದ ಮಾತ್ರಕ್ಕೆ ಕುಮಾರಸ್ವಾಮಿ ಮುಖ್ಯಮಂತ್ರಿ ಕೆಲಸ ಬಿಟ್ಟು ವಾರದಲ್ಲಿ ಮೂರು ದಿನ ಹೊಲಕ್ಕಿಳಿದು ಕೆಲಸ ಮಾಡಲಿ ಎಂದು ಹೇಳಲು ಆಗುತ್ತದೆಯೇ? ಅದು ಆಗುವ-ಹೋಗುವ ಮಾತೇ? ಅದಕ್ಕೇನಾದರೂ ಅರ್ಥವಿದೆಯೇ?

ಹಿಂದೆ ಕುಮಾರಸ್ವಾಮಿ ಜಾರಿಗೆ ತಂದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಅನ್ಯ ಸರಕಾರಗಳ ಅವಧಿಯಲ್ಲೂ ಮುಂದುವರಿದಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಪುಟದಲ್ಲಿದ್ದ ಆಂಜನೇಯ, ದಲಿತರ ಮನೆಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ಅನೇಕ ಭಾಗ್ಯಗಳನ್ನು ಈ ರಾಜ್ಯಕ್ಕೆ ಕೊಡುಗೆಯಾಗಿ ನೀಡಿದ ಸಿದ್ದರಾಮಯ್ಯನವರು ಆರ್ಥಿಕವಾಗಿ ಹಿಂದುಳಿದವರನ್ನು ಗಮನದಲ್ಲಿಟ್ಟುಕೊಂಡು ‘ಇಂದಿರಾ ಕ್ಯಾಂಟೀನ್’ ಯೋಜನೆ ಆರಂಭಿಸಿದಾಗ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜತೆಗೂಡಿ ‘ಇಂದಿರಾ ಕ್ಯಾಂಟೀನ್’ನಲ್ಲೇ ಉಪಾಹಾರ ಸೇವಿಸಿದ್ದಾರೆ. ಹಾಗೆಂದು ಸಿದ್ದರಾಮಯ್ಯನವರು ನಿತ್ಯವೂ ಇಂದಿರಾ ಕ್ಯಾಂಟೀನ್ ನಲ್ಲೇ ಊಟ-ತಿಂಡಿ ಮಾಡಲಿ ಎಂದು ಬಯಸುವುದು ಮೂರ್ಖತನವಾಗುವುದಿಲ್ಲವೇ?

ನಿಜ, ಯಡಿಯೂರಪ್ಪನವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದಾಗ ಹೆಗಲ ಮೇಲೆ ಹಸಿರು ಶಾಲು ಹಾಕಿಕೊಂಡ ಮಾತ್ರಕ್ಕೆ ರೈತರಾಗಿ ಹೋಗಲಿಲ್ಲ. ಸಿಎಂ ಆದ ತಿಂಗಳೊಳಗೇ ಹಾವೇರಿಯಲ್ಲಿ ನಡೆದ ಗೋಲಿಬಾರ್‌ನಲ್ಲಿ ರೈತರು ಹುತಾತ್ಮರಾಗಿದ್ದಕ್ಕೆ ಯಡಿಯೂರಪ್ಪ ನವರು ರೈತವಿರೋಧಿಯೂ ಆಗುವುದಿಲ್ಲ. ಅವರು ಮುಖ್ಯಮಂತ್ರಿ ಆದಾಗಲೋ, ಪಕ್ಷದ ರಾಜ್ಯಾಧ್ಯಕ್ಷರಾದಾಗಲೋ, ಚುನಾವಣೆ ಸಮೀಪಿಸಿದಾಗಲೋ ಮಠ-ಮಾನ್ಯಗಳಿಗೆ ಭೇಟಿ ನೀಡುತ್ತಾರೆ, ಆಯಾ ಸ್ವಾಮೀಜಿಗಳ ಆರ್ಶೀವಾದ ಪಡೆಯುತ್ತಾರೆ. ಅವರು ಮಠಕ್ಕೆ ಭೇಟಿ ಕೊಟ್ಟಾಗ ಭಕ್ತ, ಕೊಡದಿದ್ದಾಗ ವಿರೋಧಿ ಎಂದು ಕರೆಯಲಾಗುವುದಿಲ್ಲ. ಒಮ್ಮೆ ಬಂದವರು ನಿತ್ಯವೂ ಬರಬೇಕೆಂದು ಮಠಾಭಿ ಮಾನಿಗಳು, ಸ್ವಾಮೀಜಿಗಳೂ ಬಯಸಲು ಆಗುವುದಿಲ್ಲ. ತಪ್ಪು ತಿಳಿದುಕೊಂಡಾರೂ ಎಂದು ಅಧಿಕಾರದ ಚುಕ್ಕಾಣಿ ಹಿಡಿದವರು ಮಠದಲ್ಲಿಯೇ ಠಿಕಾಣಿ ಹೂಡಿದರೆ ರಾಜ್ಯಾಡಳಿತ ಮಠ ಸೇರುತ್ತದೆ. ಸನ್ಯಾಸಿಯನ್ನು ತಂದು ಪಟ್ಟದಲ್ಲಿ ಕೂರಿಸಿದ್ದರೆ ಅದು ಬೇರೆ ಮಾತು. ಆದರೆ ಪಟ್ಟದಲ್ಲಿ ಕೂರಿಸಿದ ಮೇಲೆ ಆತ ಸನ್ಯಾಸಿಯಂತೆ ವರ್ತಿಸಿದರೆ ಜನ ಪರಿತಪಿಸುತ್ತಾರೆ.

ಗಣಿ ಕುಖ್ಯಾತಿಯ ಮಾಜಿ ಸಚಿವ ಜನಾರ್ದನರೆಡ್ಡಿ ತಿರುಪತಿ ತಿಮ್ಮಪ್ಪನಿಗೆ 42 ಕೋಟಿ ರುಪಾಯಿ ವಜ್ರದ ಕಿರೀಟ ಕೊಟ್ಟ ದಿನ ಮಾತ್ರ ತಿಮ್ಮಪ್ಪನ ಭಕ್ತ ಎನಿಸಿಕೊಳ್ಳುವುದಿಲ್ಲ. ತಾವು ತಿಮ್ಮಪ್ಪನ ಭಕ್ತ ಎಂದು ರುಜುವಾತು ಮಾಡಲು ನಿತ್ಯವೂ ವಜ್ರದ ಕಿರೀಟ ಕೊಡಲು ಆಗುವುದಿಲ್ಲ. ಹೀಗಾಗಿ ಯಾವುದೇ ಒಂದು ಕೆಲಸ, ಕಾರ್ಯ ಆಯಾ ಸಮಯ, ಸಂದರ್ಭ, ಸನ್ನಿವೇಶಗಳಿಗೆ ಅನುಗುಣವಾಗಿರುತ್ತದೆ. ಇದು ರಾಜಕೀಯಕ್ಕೂ ಅನ್ವಯಿಸುತ್ತದೆ. ಅದು ಒಂದಷ್ಟು ತಂತ್ರಗಳನ್ನು ಬೇಡಬಹುದು. ಜನರನ್ನು ತಮ್ಮ ಜತೆ ಬೆಸೆದುಕೊಳ್ಳಲು ರಾಜಕೀಯ ಮುಖಂಡರು ಕೆಲವೊಂದು ತಂತ್ರಗಳನ್ನು ಹೆಣೆಯುತ್ತಾರೆ. ಕೆಲವು ಸಫಲವಾಗುತ್ತವೆ, ಇನ್ನೂ ಕೆಲವು ಇಲ್ಲ. ಮಾಡಿದ ಎಲ್ಲ ಕೆಲಸಗಳಿಂದಲೂ ಕೀರ್ತಿ ಬರುವುದಿಲ್ಲ. ಹಾಗೆಂದ ಮಾತ್ರಕ್ಕೆ ಕೀರ್ತಿ ತಂದ ಕೆಲಸಗಳೆಲ್ಲವನ್ನೂ ಗಿಮಿಕ್ ಎಂದು ಅಳಿಯಲೂ ಆಗುವುದಿಲ್ಲ. ಎಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಒಳಿತು-ಕೆಡುಕಿನ ಫಲಾನುಭವಿಗಳೇ ಆಗಿರುವುದರಿಂದ ಇತರರನ್ನು ಅಳಿಯುವ ಮೊದಲು ತಮ್ಮ ಬೆನ್ನ ಹಿಂದೊಮ್ಮೆ ತಿರುಗಿ ನೋಡಿಕೊಳ್ಳುವುದು ಒಳ್ಳೆಯದು!

ಲಗೋರಿ: ಅನ್ಯರ ಹರಿದಿರೋ ಚಲ್ಲಣದ ಬಗ್ಗೆ ಆಡಿಕೊಳ್ಳೋರು, ಅದು ತಮ್ಮ ಮೈಮೇಲೆ ಇಲ್ಲದಿರೋದನ್ನು ಮನಗಾಣಬೇಕು!

Leave a Reply