‘ಉಲ್ಟಾ ಸೀದಾ ಮಾತಾಡೋದೇ ಮೋದಿ ಸ್ಟ್ರಾಟಜಿ…’ ರಾಹುಲ್ ವಾಗ್ದಾಳಿ!

ಡಿಜಿಟಲ್ ಕನ್ನಡ ಟೀಮ್:

‘ಮೋದಿ ಮೊದಲು ಒಂದು ಹೇಳ್ತಾರೆ. ಆನಂತರ ಉಲ್ಟಾ ಸೀದಾ ಮಾತಾಡುತ್ತಾರೆ. ಇದೇ ಅವರ ಸ್ಟ್ರಾಟಜಿ’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

ಹೈದ್ರಾಬಾದ್ ಕರ್ನಾಟಕದ ಬೀದರ್ ನಲ್ಲಿ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ರಾಹುಲ್ ಗಾಂಧಿ‌ ಲೋಕಸಭಾ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಲೋಕಸಭೆ ಚುನಾವಣೆ ಸಮರಕ್ಕೆ ಕಹಳೆ ಓದಿರುವ ರಾಹುಲ್ ಗಾಂಧಿ, ಮೋದಿ ವಿರುದ್ಧ ಹರಿಹಾಯ್ದಿದ್ದು ಹೀಗೆ…

‘ಕಳೆದ ಬಾರಿ ಪ್ರಧಾನಿ ಅಭ್ಯರ್ಥಿ ಆಗಿದ್ದ ನರೇಂದ್ರ ಮೋದಿ, ಬಿಜೆಪಿಯನ್ನು ಗೆಲ್ಲಿಸಿದ್ರೆ ಯುವಕರಿಗೆ ಉದ್ಯೋಗ ಸೃಷ್ಠಿ ಮಾಡ್ತೇನೆ, 2 ಕೋಟಿ ಯುವಕರಿಗೆ ಉದ್ಯೋಗ ಕೊಡ್ತೇನೆ ಅಂದಿದ್ದರು. ಆದ್ರೆ ಗೆದ್ದ ಮೇಲೆ ಕುಕ್ಕರ್‌ನಲ್ಲಿ‌ ಪಕೋಡ ಬೇಯಿಸಿ ಅಂತ ಹೇಳಿ ನಿರುದ್ಯೋಗಿಗಳ ಅವಹೇಳನ ಮಾಡಿದ್ದಾರೆ. ಮೋದಿ ತಮ್ಮ ತವರು ರಾಜ್ಯ ಗುಜರಾತ್‌ ಸೇರಿದಂತೆ ಎಲ್ಲಾ ಭಾಗದ ರೈತರನ್ನು ಕಡೆಗಣಿಸಿದ್ದಾರೆ.

ಇನ್ನು ವಿದೇಶದಲ್ಲಿ ಬಚ್ಚಿಟ್ಟಿರುವ ಕಪ್ಪುಹಣ ವಾಪಸ್ ತಂದು ಎಲ್ಲರ ಅಕೌಂಟ್‌ಗೆ ₹15 ಲಕ್ಷ ಹಾಕ್ತೇನೆ ಎಂದಿದ್ರು. ಯಾರ ಅಕೌಂಟ್‌ಗೆ ಆದರೂ 10 ರೂಪಾಯಿ ಹಾಕಿದ್ದಾರಾ? ಪಕೋಡ ಮಾಡೋದು, ಗೋಬರ್ ಗ್ಯಾಸ್ ಉತ್ಪಾದನೆ ಮಾಡೋದು ಇವುಗಳ ಬಗ್ಗೆಯಷ್ಟೇ ಮೋದಿ ಮಾತಾಡುತ್ತಾರೆ. ಮೊದಲು ಒಂದು ಹೇಳೋದು, ನಂತರ ಉಲ್ಟಾ ಸೀದಾ ಮಾತಾಡೋದು ಮೋದಿ ಅವರ ಸ್ಟ್ರಾಟಜಿ.

ರೈತರ ಸಾಲ ಮನ್ನಾ ಮಾಡ್ಲಿಲ್ಲ, ಬೆಂಬಲ ಬೆಲೆ ಸರಿಯಾಗಿ ನೀಡ್ಲಿಲ್ಲ. ರಾಜ್ಯದಲ್ಲಿ ನಮ್ಮ‌ಸರ್ಕಾರ ರೈತರ ಸಾಲಮನ್ನಾ ಮಾಡಿತ್ತು. ನಾವು ಹಿಂದೆ ಕೊಟ್ಟ ಮಾತುಗಳನ್ನೆಲ್ಲ ಪೂರ್ತಿ ಮಾಡಿದ್ದೇವೆ. ದೊಡ್ಡ ದೊಡ್ಡ ಭಾಷಣ ಮಾಡೋ ಮೋದಿಗೆ ಒಂದು ಚಾಲೆಂಜ್ ಹಾಕ್ತೇನೆ. ರಾಜ್ಯದಲ್ಲಿ ರೈತರ ಸಾಲ ಮನ್ನಾ ಮಾಡ್ತೇವೆ ಅಂತ ಬಿಜೆಪಿ ಹೇಳಿತ್ತು. ಅವರಿಗೆ ನಿಜವಾಗಿಯೂ ಧಮ್ ಇದ್ದರೆ ಕರ್ನಾಟಕದ ರೈತರ ಸಾಲದ ಅರ್ಧವನ್ನಾದ್ರೂ ಮನ್ನಾ ಮಾಡಿ ನೋಡೇ ಬಿಡೋಣ‌.‌

ಸಂಸತ್‌ನಲ್ಲಿ ಮೋದಿ ರಫೆಲ್ ಹಗರಣವನ್ನು ಹೇಗೆ ಮಾಡಿದ್ದಾರೆ‌ ಅನ್ನೋದನ್ನು ಇಡೀ ದೇಶದ ಜನರ ಮುಂದೆ ಬಿಚ್ಚಿಟ್ಟಿದ್ದೇನೆ. ಯುಪಿಎ ಸರ್ಕಾರ ಹತ್ತಾರು ಯುದ್ದ ವಿಮಾನಗಳನ್ನು ತಯಾರು ಮಾಡುವ ಜವಾಬ್ದಾರಿಯನ್ನು ಹೆಚ್‌ಎಎಲ್‌ಗೆ ನೀಡಿತ್ತು. ಇದರಿಂದ ಲಕ್ಷಾಂತರ ಯುವಕರಿಗೆ ಉದ್ಯೋಗ ಸಿಗ್ತಿತ್ತು. ಮೋದಿ ಅಧಿಕಾರಕ್ಕೆ ಬಂದಿದ್ದೇ ತಡ ಎಚ್ಎಎಲ್‌ನಿಂದ ಗುತ್ತಿಗೆ ವಾಪಸ್ ಪಡೆದು, ನೇರವಾಗಿ ಫ್ರಾನ್ಸ್‌ಗೆ ಹೋಗಿ ಯುದ್ಧವಿಮಾನ ಖರೀದಿ ಮಾಡಲು ಮುಂದಾದ್ರು. ಇದೆಲ್ಲಾ ಯಾರಿಗಾಗಿ ತಮ್ಮ ಗೆಳೆಯ ಅನಿಲ್ ಅಂಬಾನಿಗಾಗಿ.

ಅಂಬಾನಿ ತಮ್ಮ ಜೀವಮಾನದಲ್ಲಿ ಒಂದಾದರೂ ಯುದ್ಧ ವಿಮಾನ ತಯಾರು ಮಾಡಿದ್ದಾರಾ..? ಇದನ್ನೇ ನಾನು ಸಂಸತ್ ನಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದೆ. ಆದ್ರೆ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್ ಸಂಸತ್‌ನಲ್ಲೇ ಸುಳ್ಳು ಹೇಳಿದ್ರು.’

Leave a Reply