ರಾಷ್ಟ್ರ ರಾಜಕಾರಣಕ್ಕೆ ಕುಮಾರಸ್ವಾಮಿ ಎಂಟ್ರಿ!

ಡಿಜಿಟಲ್ ಕನ್ನಡ ಟೀಮ್:

ಹಾಲಿ ಸಿಎಂ ಕುಮಾರಸ್ವಾಮಿ ರಾಷ್ಟ್ರ ರಾಜಕಾರಣಕ್ಕೆ ಹೋಗ್ತಾರೆ. ಈ ಮಾತನ್ನು ಹೇಳ್ತಿರೋದು ಬೇರಾರೂ ಅಲ್ಲ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ್ರು.

ಶ್ರಾವಣ ಸೋಮವಾರ ಕುಟುಂಬ ಸಮೇತ ದೇವರ ದರ್ಶನ ಹಾಗೂ ಹಲವು ಹೋಮ ಹವನದಲ್ಲಿ ಸ್ವಕುಟುಂಬ ಸಮೇತ ಹುಟ್ಟೂರು ಹರದನಹಳ್ಳಿಯಲ್ಲಿ ಭಾಗಿಯಾಗಿದ್ದ ದೇವೇಗೌಡ್ರು ಎರಡು ವಿಚಾರಗಳನ್ನು ಸ್ಪಷ್ಟಪಡಿಸಿದ್ರು. ಮೊದಲನೆಯದು ಮುಂದಿನ ಬಾರಿ‌ ನಾನು ಚುನಾವಣೆಗೆ ಸ್ಪರ್ಧೆ ಮಾಡೋದಿಲ್ಲ. ಹಾಸನದಿಂದ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡ್ತಾರೆ. ಜೊತೆಗೆ ಕುಮಾರಸ್ವಾಮಿ ರಾಷ್ಟ್ರ ರಾಜಕಾರಣಕ್ಕೆ ಹೋಗ್ತಾರೆ ಅಂತ ಹೇಳಿದ್ರು‌.

ಇದೀಗ ತಾನೆ ರಾಜ್ಯ ವಿಧಾನಸಭಾ ಚುನಾವಣೆ ಎದುರಿಸಿರುವ ಕುಮಾರಸ್ವಾಮಿ, ರಾಮನಗರ ಹಾಗೂ ಚನ್ನಪಟ್ಟಣದಿಂದ ಆರಿಸಿ, ಕಾಂಗ್ರೆಸ್ ಜೊತೆಗಿನ ಮೈತ್ರಿಯಿಂದ ಸಿಎಂ ಆಗಿದ್ದಾರೆ. ರಾಮನಗರ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದು, ಕೆಲವೇ ದಿನದಲ್ಲಿ ಉಪಚುನಾವಣೆ ಕೂಡ ನಡೆಸಯಲಿದ್ದು, ಬೇರೊಬ್ಬರನ್ನು ಅಖಾಡಕ್ಕೆ ಇಳಿಸಿ ಗೆಲ್ಲಿಸಬೇಕಾದ ಜವಾಬ್ದಾರಿ ಕುಮಾರಸ್ವಾಮಿ ಮೇಲಿದೆ. ಇನ್ನು ಐದು ವರ್ಷ ನಾನೇ ಸಿಎಂ ಎಂದು ಹೇಳುತ್ತಿರುವ ಕುಮಾರಸ್ವಾಮಿ, ನನ್ನ ಹಾಗೂ ಕಾಂಗ್ರೆಸ್ ನಡುವಿನ ಮೈತ್ರಿಯನ್ನು ಯಾರೂ ಕೂಡ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಅಬ್ಬರಿಸಿದ್ದಾರೆ. ಇನ್ನು ಐದು ವರ್ಷ ರಾಜ್ಯದಲ್ಲೇ ಸಿಎಂ ಆಗಿದ್ದರೆ ರಾಷ್ಟ್ರ ರಾಜಕಾರಣ ಪ್ರವೇಶ ಸಾಧ್ಯವಾ? ವಿಷಯ ಈಗಿರುವಾಗ ಕುಮಾರಸ್ವಾಮಿ ರಾಷ್ಟ್ರ ರಾಜಕಾರಣಕ್ಕೆ ಹೋಗ್ತಾರೆ ಅಂತ ದೇವೇಗೌಡರು ಹೇಳಿದ್ಯಾಕೆ ಅನ್ನೋ ಪ್ರಶ್ನೆ ರಾಜ್ಯದ ಜನರನ್ನು ಕಾಡುತ್ತಿದೆ.

ಸಿಎಂ ಕುಮಾರಸ್ವಾಮಿ ಒಂದು ವರ್ಷ ನನ್ನನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ ಎಂದು ಹೇಳಿದ್ರು‌. ಈಗ ದೇವೇಗೌಡರು ಕುಮಾರಸ್ವಾಮಿ ರಾಷ್ಟ್ರ ರಾಜಕಾರಣಕ್ಕೆ ಹೋಗ್ತಾರೆ ಎಂದಿದ್ದಾರೆ. ಹಾಗಿದ್ದರೆ ಸಿಎಂ ಕುಮಾರಸ್ವಾಮಿ ಲೋಕಸಭಾ ಚುನಾಣನೆಯಲ್ಲಿ ಸ್ಪರ್ಧೆ ಮಾಡ್ತಾರೆ ಅನ್ನೋದು ಖಚಿತ. ದೇವೇಗೌಡರು ಯಾವುದೇ ಲೆಕ್ಕಾಚಾರ ಮಾಡದೆ ಯಾವುದೇ ವಿಚಾರವನ್ನು ಬಹಿರಂಗ ಮಾಡುವುದಿಲ್ಲ. ಪರಿಸ್ಥಿತಿ ಹೀಗಿರುವಾಗ ದೇವೇಗೌಡರು ಹೇಳಿದ್ದಾರೆ ಅಂದರೆ ಏನೋ ಭಾರಿ ಲೆಕ್ಕಾಚಾರ ಇದ್ದೇ ಇರುತ್ತದೆ.

ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ವಲ್ಪ ಚೇತರಿಸಿಕೊಂಡು, ಉಳಿದ ಪ್ರಾದೇಶಿಕ ಪಕ್ಷಗಳ ನೆರವಿನಿಂದ ಅಧಿಕಾರ ಹಿಡಿಯಲು ಸಫಲವಾದರೆ ರಾಷ್ಟ್ರ ರಾಜಕಾರಣದ ಮಾತು ಕಸದ ಡಬ್ಬಿ ಸೇರಲಿದೆ. ಒಂದು ವೇಳೆ ಬಿಜೆಪಿ ಯಥಾಸ್ಥಿತಿ ಕಾಯ್ದುಕೊಂಡು, ಮತ್ತೆ ಮೋದಿ ಪ್ರಧಾನಿ ಆದರೆ ಕುಮಾರಸ್ವಾಮಿ ರಾಷ್ಟ್ರ ರಾಜಕಾರಣಕ್ಕೆ ಮುಖ ಮಾಡೋದು ಕನ್ಫರ್ಮ್.‌ ಕಾಂಗ್ರೆಸ್ ಕೂಡ ರಾಜಕೀಯ ಅಸ್ತಿತ್ವಕ್ಕಾಗಿ ಜೆಡಿಎಸ್ ಜೊತೆ ಬಿಗ್ ಫೈಟ್ ಮಾಡಬೇಕಿದ್ದು, ಹೊಂದಾಣಿಕೆಯಿಂದ ಪಕ್ಷ ಮತ್ತಷ್ಟು ಅವನತಿ ಹಾದಿ ಹಿಡಿಯಲಿದೆ ಅನ್ನೋ ಚಿಂತೆಯಲ್ಲಿದೆ ಕಾಂಗ್ರೆಸ್ ಪಕ್ಷ. ಆಗ ಬಿಜೆಪಿ ಮುನ್ನಲೆಗೆ ಬರಲಿದ್ದು, ಸ್ವತಃ ದೇವೇಗೌಡರೇ ಬಿಜೆಪಿ ಬೆಂಬಲಿಸಲಿದ್ದಾರೆ. ಆಗ ಕುಮಾರಸ್ವಾಮಿ ದೆಹಲಿಗೆ, ರೇವಣ್ಣ ರಾಜ್ಯಕ್ಕೆ ಅನ್ನೋ ಸೂತ್ರದಡಿ ಅಧಿಕಾರ ಹಂಚಿಕೆಯಾಗಲಿದ್ದು, ಕೇಂದ್ರದಲ್ಲಿ ಕುಮಾರಸ್ವಾಮಿ ಸಚಿವರಾಗಿ ಕೆಲಸ ಮಾಡಲಿದ್ದಾರೆ. ದೇವೇಗೌಡರು ಹೇಳಿದ್ದಾರೆ ಎಂದ ಮೇಲೆ ಈ ರೀತಿಯ ಚಿಂತನೆ ಇಲ್ಲದೆ ಇರಲ್ಲ ಅನ್ನೋದು ರಾಜಕೀಯ ಪಂಡಿತರ ಲೆಕ್ಕಾಚಾರ. ಪಂಡಿತರು ಏನೇ ಲೆಕ್ಕಾಚಾರ ಹಾಕಿದರೂ ದೇವೇಗೌಡರ ತಲೆಯಲ್ಲಿ ಏನು ಓಡುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಊಹಿಸಲು ಸಾಧ್ಯವಿಲ್ಲ. ಹೀಗಾಗಿ ದೇವೇಗೌಡರ ಈ ಹೇಳಿಕೆ ಫಲಿತಾಂಶ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಷ್ಟೇ.

Leave a Reply