ಮಹದಾಯಿ ತೀರ್ಪಿನ ಹಿಂದಿನ ಅಸಲಿ ಸತ್ಯ!

ಡಿಜಿಟಲ್ ಕನ್ನಡ ಟೀಮ್:

ಐದು ದಶಕಗಳ ಕಾಲ ಕರ್ನಾಟಕ, ಗೋವಾ ನಡುವಿನ ವೈರತ್ವಕ್ಕೆ ಕಾರಣವಾಗಿ ಎರಡು ದಶಕಗಳಿಂದ ನ್ಯಾಯಾಲಯ ನ್ಯಾಯಾಧಿಕರಣದ ಬಾಗಿಲು ಬಡಿದಾಡಿದ ವಿವಾದ ಅಂದ್ರೆ ಮಹದಾಯಿ ನದಿ ನೀರು ಹಂಚಿಕೆ ವಿವಾದ.

2002ರಲ್ಲಿ ಸಿಎಂ ಆಗಿದ್ದ ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಶುರುವಾದ ಯೋಜನೆ, 2006 ರಲ್ಲಿ ಕುಮಾರಸ್ವಾಮಿ ಸರ್ಕಾರದಲ್ಲಿ ಚುರುಕು ಪಡೆಯಿತು. ಆದ್ರೆ ಗೋವಾ ಸರ್ಕಾರ ತೆಗೆದ ಕ್ಯಾತೆಯಿಂದ ಇಲ್ಲಿವರೆಗೂ ಕುಂಟುತ್ತಲೇ ಸಾಗಿದ ಯೋಜನೆ, ಇದೀಗ ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ಕಾಯಕಲ್ಪ ಪಡೆಯುವ ಹಂತಕ್ಕೆ ಬಂದು ನಿಂತಿದೆ. ಆದ್ರೆ ಮಹದಾಯಿ ತೀರ್ಪು ಹೊರ ಬೀಳುವ ಮುನ್ನವೇ ಒಂದೊಂದು ಮಾಧ್ಯಮಗಳು ಒಂದೊಂದು ರೀತಿ ಸುದ್ದಿ‌ ಬಿತ್ತರಿಸಿದ್ವು. ಕೆಲವೊಂದು ವಾಹಿನಿಗಳು ಕರ್ನಾಟಕಕ್ಕೆ ಮೇಲುಗೈ ಎಂದು ಸಾರಿದ್ರೆ, ಮತ್ತೊಂದಿಷ್ಟು ವಾಹಿನಿಗಳು ಸಾಮಾಧಾನ ಅನ್ನೋ ಮಾಹಿತಿ ಕೊಟ್ಟವು. ರಾಜಕಾರಣಿಗಳೂ ಅಷ್ಟೆ ಹಿಂದೆಮುಂದೆ ಗೊತ್ತಿಲ್ಲದಿದ್ದರೂ ಮೈಕ್ ಕಂಡ ಕೂಡಲೆ ಮಾತನಾಡುವುದನ್ನು ಚೆನ್ನಾಗಿ ಕಲಿತಿದ್ದಾರೆ.

ಮಹಾದಾಯಿ ನದಿಯಿಂದ ಹರಿಯುವ ನೀರಿನ ಪ್ರಮಾಣ ಒಟ್ಟು 210 ಟಿಎಮ್‌ಸಿ. ಈ ನೀರಿನಲ್ಲಿ ಕರ್ನಾಟಕ ಕೇಳಿದ್ದು ಕೇವಲ 36.5 ಟಿಎಮ್‌ಸಿ ನೀರು ಮಾತ್ರ. ಅದರಲ್ಲಿ ಕುಡಿಯೋದಿಕ್ಕೆ 7.5 ಟಿಎಮ್‌ಸಿ ನೀರು ಸೇರಿತ್ತು. ಯಾವುದೇ ನ್ಯಾಯಾಲಯ ಅಥವಾ ನ್ಯಾಯಾಧಿಕರಣ ಕುಡಿಯುವ ನೀರಿಗೆ ಮನವಿ ಮಾಡಿದರೆ ನಿರಾಕರಿಸುವ ಸಾಧ್ಯತೆ ಕಡಿಮೆ. ಆದರ ಮಹದಾಯಿ ಟ್ರಿಬ್ಯುನಲ್ ಬೋರ್ಡ್ ಕುಡಿಯುವ ನೀರಿಗೆ ಕೇಳಿದ್ದ ಪಾಲಿನಲ್ಲೂ ಕಡಿತ ಮಾಡಿ ಕೇವಲ 5.5 ಟಿಎಮ್‌ಸಿ ನೀರನ್ನು ಮಾತ್ರ ನೀಡಿದೆ. ಹಾಗಿದ್ದರೂ ಬಿಜೆಪಿ ನಾಯಕರು ಉತ್ತಮ ತೀರ್ಪು ಎಂದಿದ್ದಾರೆ.

ಈಗಾಗಲೇ ಕೃಷ್ಣ ವಾಟರ್ ಬೋರ್ಡ್, ಕಾವೇರಿ ವಾಟರ್ ಬೋರ್ಡ್ ಸೇರಿದಂತೆ ನಮ್ಮ ರಾಜ್ಯದ ನದಿಗಳ ಮೇಲುಸ್ತುವಾರಿ ಕೇಂದ್ರ ಸರ್ಕಾರದ ಅಧೀನಕ್ಕೆ ಹೋಗಿದೆ. ಈಗಲೂ ನ್ಯಾಯಾಧಿಕರಣ ಅಂತಹದೊಂದು ಎಡವಟ್ಟು ಮಾಡಿದೆ. ಅದೇನಂದ್ರೆ ಕಾವೇರಿ ಜಲಮಂಡಳಿ ರೀತಿಯಲ್ಲೇ ಮಹದಾಯಿ ವಾಟರ್ ಬೋರ್ಡ್ ಸ್ಥಾಪಿಸಿ, ಅದರ ಉಸ್ತುವಾರಿಯಲ್ಲಿ ನೀರಿನ ಹಂಚಿಕೆ ನಡೆಯಲಿ ಎಂದು ಶಿಫಾರಸು ಮಾಡಿದೆ. ಸದ್ಯಕ್ಕೆ ಕೇಂದ್ರ ಸರ್ಕಾರ ನ್ಯಾಯಾಧಿಕರಣದ ಶಿಫಾರಸು ಆಧರಿಸಿ ಮಹದಾಯಿ ಜಲ ಆಯೋಗ ರಚನೆ ಮಾಡದೆ ಸುಮ್ಮನಾಗಬಹುದು, ಆದರೆ ಮುಂದೊಂದು ದಿನ ನೀರಿನ ಹಂಚಿಕೆ ವಿಚಾರದಲ್ಲಿ ಎರಡೂ ರಾಜ್ಯಗಳ ನಡುವೆ ಕಿತ್ತಾಟ ಶುರುವಾದ ಬಳಿಕ ಸುಪ್ರೀಂಕೋರ್ಟ್ ಮೊರೆ ಹೋದಾಗ ನ್ಯಾಯಾಧಿಕರಣ ಮಾಡಿರುವ ಶಿಫಾರಸು ಪ್ರಮುಖವಾಗುತ್ತೆ. ತೀರ್ಪನ್ನು ಅಲ್ಪಸ್ವಲ್ಪ ಬದಲಾವಣೆ ಮಾಡಿದ ಬಳಿಕ ನ್ಯಾಯಾಧಿಕರಣ ಮಾಡಿರುವ ಶಿಫಾರಸಿನಂತೆ ಮಹದಾಯಿ ಜಲ ಆಯೋಗ ರಚನೆ ಆಗಲಿ ಎಂದು ಆದೇಶಿಸುವ ಸಾಧ್ಯತೆ ಹೆಚ್ಚು. ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟ ಬಳಿಕ ನಿರಾಕರಣೆ ಮಾಡುವುದು ಅಷ್ಟೊಂದು ಸುಲಭದ ಮಾತಲ್ಲ. ಒಟ್ಟಾರೆ‌ ಕರ್ನಾಟಕ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಕಾನೂನು ಹೋರಾಟ ಶುರು ಮಾಡಿದರೆ ಮತ್ತಷ್ಟು ನೀರಾದರೂ ಉತ್ತರ ಕರ್ನಾಟಕ ಭಾಗದ ಜನರಿಗೆ ದೊರೆಯುವಂತೆ ಮಾಡಬಹುದು. ವ್ಯರ್ಥವಾಗಿ ಸಮುದ್ರ ಪಾಲಾಗುವ ನೀರನ್ನು ಸದುಪಯೋಗ ಮಾಡಿಕೊಳ್ಳಬಹುದು.

Leave a Reply