ಅಟಲ್ ಸಮಾಧಿಗೂ ಶುರುವಾಯ್ತಾ ವಿವಾದ?

ಡಿಜಿಟಲ್ ಕನ್ನಡ ಟೀಮ್:

ಇದೇ ತಿಂಗಳು ತಮಿಳುನಾಡು ಮಾಜಿ ಸಿಎಂ ಎಂ ಕರುಣಾನಿಧಿ ವಿಧಿವಶರಾಗಿದ್ದರು. ಈ ವೇಳೆ ಮರೀನಾ ಬೀಚ್‌ನಲ್ಲಿ ಅಂತ್ಯಕ್ರಿಯೆ ಮಾಡಲು ಅಲ್ಲಿನ ರಾಜ್ಯ ಸರ್ಕಾರ ಅವಕಾಶ ನೀಡಿರಲಿಲ್ಲ. ಬಳಿಕ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ ಡಿಎಂಕೆ ಕಾರ್ಯಕರ್ತರು, ಜಯಲಲಿತಾಗೆ ಅವಕಾಶ ಕೊಟ್ಟಂತೆ ಕರುಣಾನಿಧಿ ಅವರಿಗೂ ಅವಕಾಶ ಕಲ್ಪಿಸಬೇಕು ಎಂದು ಕೋರ್ಟ್‌ನಲ್ಲಿ ವಾದ ಮಂಡನೆ ಮಾಡಿದರು. ಆ ಬಳಿಕ ಕೋರ್ಟ್ ಸೂಚನೆ ಮೇರೆಗೆ ಸಿಎಂ ಪಳನಿಸ್ವಾಮಿ ಅನುಮತಿ ನೀಡಿದ್ರು. ಇದೀಗ ಮಾಜಿ ಪ್ರಧಾನಿ, ದೇಶಕಂಡ ಅಜಾತಶತ್ರು ರಾಜಕಾರಣಿ ಅಟಲ್ ಬಿಹಾರಿ ವಾಜಪೇಯಿ ಅವರ ಸಮಾಧಿ ವಿಚಾರದಲ್ಲೂ ತೊಡಕು ಉಂಟಾಗಿದೆ.

ದೆಹಲಿಯ ರಾಜ್‌ಘಾಟ್‌ನಲ್ಲಿ ಮಹಾತ್ಮಗಾಂಧಿ ಸಮಾಧಿ ಇದೆ. ಅದರ ಪಕ್ಕದಲ್ಲೇ ಇಂದಿರಾಗಾಂಧಿ, ರಾಜೀವ್ ಗಾಂಧಿ, ಸಂಜಯ್ ಗಾಂಧಿ ಸೇರಿದಂತೆ ಹಿರಿಯ ರಾಜಕಾರಣಿಗಳ ಸಮಾಧಿ ಇದೆ. ಇದೀಗ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಮಣ್ಣು ಮಾಡಲು ನಿರ್ಧರಿಸಿರುವ ವಿಜಯ್ ಘಾಟ್ ಕೂಡ ಹಲವಾರು ಮಹಾನ್ ನಾಯಕರ ಸಮಾಧಿ ಇರುವ ಜಾಗವಾಗಿದೆ. ಆದರೆ ಇದೀಗ ಅಟಲ್ ಬಿಹಾರಿ ವಾಜಪೇಯಿ ಅವರ ಅಂತ್ಯಕ್ರಿಯೆಗೆ ಕಾನೂನು ತೊಡಕುಗಳು ಎದುರಾಗಿವೆ.

ಕಳೆದ ಯುಪಿಎ ಸರ್ಕಾರ ದೆಹಲಿ ಸಮಾಧಿಗಳ ನಾಡಾಗುವುದನ್ನು ತಪ್ಪಿಸಲು ಒಂದು ಹೊಸ ಕಾನೂನು ಜಾತಿ ಮಾಡಿದ್ದು, ವಿಜಯ್ ಘಾಟ್ ಸೇರಿದಂತೆ ರಾಜ್ ಘಾಟ್ ಸುತ್ತಮುತ್ತ ರಾಜಕಾರಣಿಗಳ ಸ್ಮಾರಕ ಮಾಡೋದನ್ನು ನಿಷೇಧಿಸಿ ಕಾನೂನು ಮಾಡಿದೆ. ಈ ಕಾನೂನು ವಾಜಪೇಯಿ ಅವರ ಅಂತ್ಯಕ್ರಿಯೆ ವಿಜಯ್ ಘಾಟ್‌ನಲ್ಲಿ ನಡೆಯೋದಕ್ಕೆ ಅಡ್ಡಿಯಾಗಿದೆ.

ಈಗಾಗಲೇ ಸಾಂಕೇತಿಕವಾಗಿ ಸಂಪುಟ ಸಭೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಕಾನೂನು ತೊಡಕಿನ ಬಗ್ಗೆ ಚರ್ಚೆ ನಡೆಸಿದ್ದಾರೆ. ನಾಳೆ ಮತ್ತೊಮ್ಮೆ ಸಭೆ ನಡೆಸಿ ಈ ಕಾನೂನು ತೊಡಕನ್ನು ನಿವಾರಿಸುವ ಬಗ್ಗೆ ಚಿಂತನೆ ನಡೆಸಲಿದ್ದಾರೆ. ಇಂದು ರಾತ್ರಿ ಅಟಲ್ ನಿವಾಸದಲ್ಲಿ ಗಣ್ಯರಿಗೆ ಅಂತಿಮ ನಮನ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದು, ಬೆಳಗ್ಗೆ ಬಿಜೆಪಿ ಕಚೇರಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ನಂತರ ಮಧ್ಯಾಹ್ನ 1.30 ಕ್ಕೆ ಅಂತಿಮ ಯಾತ್ರೆ ಶುರುವಾಗಲಿದ್ದು, ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.

Leave a Reply