ಪ್ರವಾಹ ಸಂತ್ರಸ್ತರಿಗೆ ಪರಿಹಾರ ಘೋಷಿಸಿದ ಕುಮಾರಸ್ವಾಮಿ

ಡಿಜಿಟಲ್ ಕನ್ನಡ ಟೀಮ್:

ಕೊಡುಗು, ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭಾರಿ ಮಳೆಗೆ ಮನೆ ಕಳೆದುಕೊಂಡು ಕಂಗಾಲಾದ ಸಂತ್ರಸ್ತರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪರಿಹಾರ ಘೋಷಣೆ ಮಾಡುವ ಮೂಲಕ ಅಭಯ ನೀಡಿದ್ದಾರೆ.

ಶನಿವಾರ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಸಿಎಂ ನಂತರ ಮಳೆ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆಗೆ ಮುಂದಾದರು. ಈ ವೇಳೆ ಮನೆ ಕಳೆದುಕೊಂಡವರಿಗೆ ಎರಡು ಲಕ್ಷ, ಮೃತರ ಸಂಬಂಧಿಗಳಿಗೆ ಐದು ಲಕ್ಷ ರು ಪರಿಹಾರ ಘೋಷಿಸಿದ್ದಾರೆ.

ಸಭೆಯಲ್ಲಿ “ಕೊಡಗು ಜಿಲ್ಲೆಯಲ್ಲಿ 800ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ನಾಶವಾಗಿದ್ದು, ಸಂತ್ರಸ್ತರ ದಾಖಲೆಗಳು ನಾಶವಾಗಿದೆ. ತಕ್ಷಣವೇ ಅವುಗಳ ನಕಲು ಪ್ರತಿಗಳನ್ನು ನೀಡಲು ವ್ಯವಸ್ಥೆ ಮಾಡಬೇಕು. ಮನೆಗಳನ್ನು ಕಳೆದುಕೊಂಡ ಅರ್ಹ ಫಲಾನುಭವಿಗಳಿಗೆ 2 ಲಕ್ಷ ರು. ಪರಿಹಾರ ನೀಡಬೇಕು. ಮಳೆ ಪೀಡಿತ ಪ್ರದೇಶಗಳಲ್ಲಿ ಕಡಿತಗೊಂಡಿರುವ ವಿದ್ಯುತ್ ಸಂಪರ್ಕಗಳನ್ನು ಪತ್ತೆ ಹಚ್ಚಿ ಕೂಡಲೆ ವಿದ್ಯುತ್ ಪೂರೈಸಬೇಕು. ಗ್ಯಾಸ್, ಪೆಟ್ರೋಲ್ ಮತ್ತು ಡೀಸಲ್ ಪೂರೈಸಬೇಕು” ಎಂದು ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಹೇಳಿದ್ದಿಷ್ಟು… “ಕೊಡಗು ಜಿಲ್ಲೆಗೆ 10 ವೈದ್ಯಕೀಯ ಮತ್ತು ನರ್ಸಿಂಗ್ ಸಿಬ್ಬಂದಿಯನ್ನು ಈಗಾಗಲೇ ಒದಗಿಸಲಾಗಿದೆ. ಶಿಶು ಆಹಾರ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಮುಕೊಡ್ಲು ಗ್ರಾಮದಲ್ಲಿ ಗರ್ಭಿಣಿ ಮಹಿಳೆ ಸೇರಿದಂತೆ ಹಲವು ಜನ ಸಿಲುಕಿರುವ ಬಗ್ಗೆ ಮಾಹಿತಿ ಇದ್ದು, ಅವರನ್ನು ರಕ್ಷಿಸಲು ಸೇನಾ ತಂಡ ಈಗಾಗಲೇ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಮಳೆಯಿಂದ ಸೃಷ್ಟಿಯಾಗಿರುವ ಪ್ರವಾಹದಲ್ಲಿ ಸಿಲುಕಿರುವವರಲ್ಲಿ 3500 ಜನರನ್ನು ರಕ್ಷಿಸಲಾಗಿದೆ. ರಕ್ಷಣಾ ಕಾರ್ಯದಲ್ಲಿ ಎನ್‌ಡಿಆರ್‌ಎಫ್, ಸಿವಿಲ್ ಡಿಫೆನ್‌ಸ್, ಅಗ್ನಿಶಾಮಕ ದಳ, ಭೂ ಸೇನೆಯ ಡೋಗ್ರಾ ರೆಜಿಮೆಂಟ್ , ಎನ್‌ಸಿಸಿಯ 200 ವಾಯುಪಡೆಯ ತಂಡ ಸೇರಿದಂತೆ ರಕ್ಷಣ ಕಾರ್ಯದಲ್ಲಿ ಒಟ್ಟು 948 ಜನ ತೊಡಗಿದ್ದಾರೆ.

ಶುಕ್ರವಾರ ಸಂಜೆ ದಕ್ಷಿಣ ಕನ್ನಡ, ಕೊಡಗು ಗಡಿಭಾಗದ ಜೋಡುಪಾಲದಲ್ಲಿ ಗುಡ್ಡ ಕುಸಿತದಿಂದ ಸಿಲುಕಿಕೊಂಡಿದ್ದ 347 ಜನರನ್ನು ರಕ್ಷಣೆ ಮಾಡಲಾಗಿದೆ. ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ ಕಾಫಿ ಹಾಗೂ ಅಡಿಕೆಗೆ ಕೊಳೆ ರೋಗ ಕಾಣಿಸಿಕೊಂಡಿದೆ. ಕಾಫಿ ನಷ್ಟ ಅಂದಾಜು ಮಾಡಲು ಸಂಬಂಧಿಸಿದಂತೆ ಹೆಚ್ಚುವರಿ ಅಧಿಕಾರಿಗಳನ್ನು ನಿಯೋಜಿಸುವಂತೆ ಕಾಫಿ ಮಂಡಳಿಗೆ ಪತ್ರ ಬರೆಲಾಗುವುದು. ಸದ್ಯ ಮಳೆ ಪೀಡಿತ ಪ್ರದೇಶಗಳಲ್ಲಿ 31 ಗಂಜಿ ಕೇಂದ್ರಗಳನ್ನು ತೆರದಿದ್ದು, 2,250 ಜನರು ಆಶ್ರಯ ಪಡೆದಿದ್ದಾರೆ. ಅಗತ್ಯ ಬಿದ್ದರೆ ಇನ್ನೂ ಹೆಚ್ಚಿನ ಗಂಜಿ ಕೇಂದ್ರಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗುವುದು.”

Leave a Reply