ಕೊಡಗು ಪ್ರವಾಹ ಸಂತ್ರಸ್ತರ ಮನೆ ಬಾಗಿಲಿಗೆ ದಿನಸಿ!

ಡಿಜಿಟಲ್ ಕನ್ನಡ ಟೀಮ್:

ಪ್ರವಾಹದಿಂದ ಕೊಡಗಿನಲ್ಲಿ ಉಂಟಾಗಿರುವ ಅನಾಹುತಗಳಿಂದ ತತ್ತರಿಸಿರುವ ಸಂತ್ರಸ್ತರ ನೆರವಿಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಅಲ್ಲಿನ ಜನರ ಅನುಕೂಲಕ್ಕಾಗಿ ತಕ್ಷವೇ ಕೆಲವು ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರವಾಹ ಪೀಡಿತ ಪ್ರದೇಶದ ಜನರ ಮನೆ ಬಾಗಿಲಿಗೆ ದಿನಸಿ ತಲುಪಿಸುವ ವ್ಯವಸ್ಥೆ ಕಲ್ಪಿಸುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ನಿರ್ಧರಿಸಿದ್ದಾರೆ.

ಶನಿವಾರ ಮತ್ತು ಭಾನುವಾರ ವೈಮಾನಿಕ ಸಮೀಕ್ಷೆ ನಡೆಸಿದ ಹೆಚ್ಡಿಕೆ, ಸೋಮವಾರ ಬೆಂಗಳೂರಿನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪ್ರವಾಹ ಪರಿಸ್ಥಿತಿ ನಿಭಾಯಿಸುವ ಸಲುವಾಗಿ ಕೆಲವು ನಿರ್ಧಾರಗಳನ್ನು ತೆಗೆದುಕೊಂಡರು.

ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ‘ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದೇನೆ. ಕೊಡಗಿನ ಜನತೆ ಜತೆ ಸರ್ಕಾರವಿದೆ, ಯಾರೂ ಭಯ ಪಡುವ ಅಗತ್ಯವಿಲ್ಲ. ಹಲವು ಪ್ರದೇಶಗಳಲ್ಲಿ ಭೂ ಕುಸಿತ ಉಂಟಾಗಿದೆ. ಸುಮಾರು 845 ಮನೆಗಳು ಪೂರ್ಣ ಹಾನಿಗೊಳಗಾಗಿದ್ದು, 773 ಭಾಗಶಃ ಹಾನಿಯಾಗಿದೆ. 123 ಕಿ.ಮೀ. ರಸ್ತೆ, 58 ಸೇತುವೆ, 278 ಸರ್ಕಾರಿ ಕಟ್ಟಡ ಹಾಗೂ 3800 ವಿದ್ಯುತ್ ಕಂಬಗಳು ಹಾನಿಯಾಗಿದೆ’ ಎಂದು ವಿವರಿಸಿದರು.

ಪ್ರವಾಹ ಸಂತ್ರಸ್ತರಿಗೆ ನೆರವಾಗಲು ಸರ್ಕಾರದ ಕ್ರಮಗಳು ಹೀಗಿವೆ…

 • ಪರಿಹಾರ ಕೇಂದ್ರಗಳಲ್ಲಿರುವ ಸುಮಾರು 5800 ನೆರೆ ಸಂತ್ರಸ್ತರಿಗೆ ತಕ್ಷಣ ಪರಿಹಾರವಾಗಿ ಪ್ರತಿ ಕುಟುಂಬಕ್ಕೆ ರೂ.3800/- ನೀಡಲು ಸೂಚಿಸಲಾಗಿದೆ.
 • ಸಂಕಷ್ಟಕ್ಕೊಳಗಾಗಿರುವ 50 ಸಾವಿರ ಕುಟುಂಬಗಳಿಗೆ ದಿನೋಪಯೋಗಿ ದಿನಸಿ ಸಾಮಾಗ್ರಿಗಳನ್ನು ಆ ಕುಟುಂಬದ ಮನೆಯ ಬಾಗಿಲಿಗೆ ತಲುಪಿಸಲಾಗುವುದು.
 • ಇದಕ್ಕಾಗಿ 10 ಮೊಬೈಲ್ ದಿನಸಿ ಸಾಮಾಗ್ರಿಗಳ ವಿತರಣಾ ಘಟಕ ಪ್ರಾರಂಭ.
 • ಹಿಮಾಚಲ ಪ್ರದೇಶದಲ್ಲಿ ಪ್ರತಿ ವರ್ಷ ಭೂ ಕುಸಿತವಾಗುತ್ತೆ. ಅಲ್ಲಿನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ತಜ್ಞರನ್ನು ಕರೆಸುವಂತೆ ಮುಖ್ಯಕಾರ್ಯದರ್ಶಿ ಅವರಿಗೆ ಸೂಚನೆ.
 • ಕೊಡಗಿನ ಕೆಲ ಬಡಾವಣೆಗಳು ಜಲಾವೃತವಾಗಿದ್ದು, ನೀರು ಹೊರಹಾಕಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚನೆ.
 • ದಿನದ 24 ಗಂಟೆಯೂ 1,720 ತಜ್ಞರ ತಂಡ ರಕ್ಷಣಾ ಕಾರ್ಯದಲ್ಲಿ ತೊಡಗಿದೆ.
 • ಹಾರಂಗಿ ಡ್ಯಾಂ ಬಳಿ ವಾಯುಸೇನೆ ಸಿಬ್ಬಂದಿ ನಿರತ ಹಾಗೂ ಪುನರ್ವಸತಿ ಕಾರ್ಯಕ್ಕೆ ಇಬ್ಬರು ಐಎಎಸ್ ಅಧಿಕಾರಿಗಳ ನೇಮಕ.
 • ಪರಿಹಾರ ಕಾರ್ಯಕ್ಕೆ ₹100 ಕೋಟಿ ರೂಪಾಯಿ ಬಿಡುಗಡೆ ಮಾಡುವುದಾಗಿ ಘೋಷಣೆ.
 • ವಾಯುಪಡೆಯ ಎಂ-17 ಹೆಲಿಕಾಪ್ಟರ್ ಹಾರಂಗಿಯಿಂದ ಕಾರ್ಯನಿರ್ವಹಿಸುತ್ತಿದೆ.
 • ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಡಿಜಿಪಿ ಅಗ್ನಿ ಶಾಮಕ ದಳ, ಇಬ್ಬರು ಎಡಿಜಿಪಿಗಳು, ಇಬ್ಬರು ಅಪರ ಮುಖ್ಯ ಕಾರ್ಯದರ್ಶಿಗಳು ಸ್ಥಳದಲ್ಲೇ ಕೊಡಗಿನಲ್ಲೇ ಇದ್ದು ಪರಿಹಾರ ಕಾರ್ಯ ನಿರ್ವಹಣೆ.
 • ಕೊಡಗು ಜಿಲ್ಲೆಯಲ್ಲಿ 41 ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 09 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ.
 • ಒಟ್ಟು 6620 ಸಂತ್ರಸ್ತರು ಪರಿಹಾರ ಕೇಂದ್ರದಲ್ಲಿದ್ದಾರೆ.
 • ಪರಿಹಾರ ಕೇಂದ್ರಗಳಲ್ಲಿ ಹಾಲು, ಕುಡಿಯುವ ನೀರು ವ್ಯವಸ್ಥೆ.
 • ಸಂತ್ರಸ್ತರ ನೆರವಿಗಾಗಿ ಬರುತ್ತಿರುವ ಪರಿಹಾರ ಸಾಮಗ್ರಿಗಳನ್ನು ಮಡಿಕೇರಿಯಲ್ಲಿರುವ ಎಪಿಎಂಸಿ ಯಾರ್ಡ್ನಲ್ಲಿ ಸಂಗ್ರಹಿಸಿ ಪಂಚಾಯತಿಗಳ ಮೂಲಕ ಜನರಿಗೆ ವಿತರಣೆ.
 • ಐದು ವಿಶೇಷ ವೈದ್ಯಕೀಯ, 10 ರೆವಿನ್ಯೂ ಅಧಿಕಾರಿಗಳ ತಂಡ ಪರಿಹಾರ ಕಾಮಗಾರಿಗಳಿಗಾಗಿ ವಿಶೇಷವಾಗಿ ನಿಯೋಜನೆ.
 • ಕೊಡಗು ಜಿಲ್ಲೆಯಲ್ಲಿ ತಕ್ಷಣವೇ ಮುಂದಿನ ಹತ್ತು ದಿನಗಳೊಳಗೆ ಸಂತ್ರಸ್ತರಿಗೆ ತಾತ್ಕಾಲಿಕ ಅಲ್ಯುಮಿನಿಯಂ ಶೆಡ್ ಗಳ ನಿರ್ಮಾಣ.
 • ಸಂತ್ರಸ್ತರಿಗೆ ನರೇಗಾ ಯೋಜನೆಯಡಿ ಕೆಲಸ.
 • ನೆರೆ ಸಂತ್ರಸ್ಥರು ಪಾತ್ರೆ ಖರೀದಿಸಲು ಸರ್ಕಾರದಿಂದಲೇ ಹಣ ನೀಡಲಾಗುವುದು.
 • ಸಾಂಕ್ರಾಮಿಕ ರೋಗಗಳು ಹರಡದಂತೆ ಅಗತ್ಯ ಕ್ರಮ ಕೈಗೊಳ್ಳಲು ವೈದ್ಯ ಮತ್ತು ವೈದ್ಯೇತರ ಸಿಬ್ಬಂದಿ ಸೇರಿದಂತೆ ಆರೋಗ್ಯ ಇಲಾಖೆಯ ವಿಶೇಷ ಘಟಕಗಳ ನಿಯೋಜನೆ.
 • ಕೊಡಗು ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಈಗಾಗಲೇ ಸರಬರಾಜು ಮಾಡಿರುವ ಪುಸ್ತಕ, ಸಮವಸ್ತ್ರ ಹಾನಿಗೊಳಗಾಗಿರುವುದರಿಂದ ಮತ್ತೊಂದು ಸೆಟ್ ಪುಸ್ತಕ ಮತ್ತು ಸಮವಸ್ತ್ರಗಳನ್ನು ಸರಬರಾಜು.
 • ಭಾಗಮಂಡಲ-ನಾಪೊಕ್ಲು- ಅಯ್ಯಂಗೇರಿ ,ಸುಳ್ಯ -ಮಡಿಕೇರಿ ನಡುವಿನ ಸಂಪರ್ಕ ರಸ್ತೆಯಲ್ಲಿ ಹಲವೆಡೆ ಮಣ್ಣು ಕುಸಿತ ಉಂಟಾಗಿದ್ದು, ಲೋಕೋಪಯೋಗಿ ಇಲಾಖೆ ರಸ್ತೆ ದುರಸ್ತಿಗೊಳಿಸಲು ಸೂಚನೆ.
 • ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಾಗಿರುವ ಅಡೆತಡೆಗಳನ್ನು ಸರಿಪಡಿಸಲು ಕೆಪಿಟಿಸಿಎಲ್/ ಚೆಸ್ಕಾಂ ವಿಶೇಷ ತಂಡ ರವಾನೆ.
 • ಕೊಡಗು ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಿ, ಜಿಲ್ಲೆಯಲ್ಲಿ ಅಧಿಕಾರಿಗಳ ವರ್ಗಾವಣೆಯನ್ನು ಸ್ಥಗಿತ.
 • ಪ್ರತಿ ತಾಲ್ಲೂಕಿನಲ್ಲಿ ನಷ್ಟದ ಅಂದಾಜು ಪಟ್ಟಿಯನ್ನು ತಯಾರಿಸಲು ಹಾಗೂ ಮನೆಗಳನ್ನು ಕಟ್ಟುವ ಕಾರ್ಯದ ಮೇಲ್ವಿಚಾರಣೆಗೆ ಐಎಎಸ್ ಅಧಿಕಾರಿಗಳ ನಿಯೋಜನೆ.

Leave a Reply