ಪಾಕ್ ಆರ್ಥಿಕತೆ ಸುಧಾರಿಸಲು ಐಷಾರಾಮಿ ಸೌಲಭ್ಯ ಒಲ್ಲೆ ಎಂದ ಇಮ್ರಾನ್!

ಡಿಜಿಟಲ್ ಕನ್ನಡ ಟೀಮ್:

ಪಾಕಿಸ್ತಾನ ನೂತನ ಪ್ರಧಾನಿ ಇಮ್ರಾನ್ ಖಾನ್, ತಮಗೆ ಸಿಗುವ ಐಷಾರಾಮಿ ಸೌಲಭ್ಯಗಳನ್ನು ತಿರಸ್ಕರಿಸಿದ್ದಾರೆ. ಪ್ರಧಾನ ಮಂತ್ರಿ ನಿವಾಸವನ್ನು ಬೇಡ ಎಂದಿರುವ ಇಮ್ರಾನ್ ಖಾನ್, ಸೇನಾ ಕಾರ್ಯದರ್ಶಿಗಳಿಗೆ ನೀಡಲಾಗುವ ಮೂರು ಕೊಠಡಿಯ ಮನೆಯಲ್ಲಿ ವಾಸಿಸಲು ನಿರ್ಧರಿಸಿದ್ದಾರೆ.

ಹುಟ್ಟುತ್ತಲೇ ಶ್ರೀಮಂತಿಕೆಯನ್ನು ಕಂಡಿರುವ ಇಮ್ರಾನ್ ಖಾನ್ ಅವರ ನಿರ್ಧಾರ ಪಾಕಿಸ್ತಾನ ಪ್ರಜೆಗಳ ಹುಬ್ಬೇರಿಸಿದೆ. ಅಂದಹಾಗೆ ಇಮ್ರಾನ್ ಖಾನ್ ಅವರ ಈ ನಿರ್ಧಾರಕ್ಕೆ ಕಾರಣ ದೇಶ ಬೊಕ್ಕಸದ ಮೇಲೆ ಬೀಳುತ್ತಿರುವ ಹೊರೆ ತಗ್ಗಿಸಿ, ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲು. ಪ್ರಧಾನಿಯಾದ ಬಳಿಕ ಮಾಡಿದ ಮೊದಲ ಭಾಷಣದಲ್ಲಿ ಸರ್ಕಾರದ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದಾಗಿ ತಿಳಿಸಿದ್ದ ಇಮ್ರಾನ್, ಈಗ ಅದನ್ನು ಮಾಡುವ ಪ್ರಯತ್ನದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ.

ಪಾಕಿಸ್ತಾನ ಪ್ರಧಾನಿಗೆ ಐಷಾರಾಮಿ ಬಂಗಲೆ ಜತೆಗೆ ಒಟ್ಟು 524 ಕೆಲಸದಾಳುಗಳು, 80 ದುಬಾರಿ ಕಾರುಗಳು, ಅದರಲ್ಲಿ 33 ಬುಲ್ಲೆಟ್ ಪ್ರೂಫ್ ಕಾರುಗಳು. ಹಾರಾಟಕ್ಕೆ ಹೆಲಿಕಾಪ್ಟರ್ ಹಾಗೂ ವಿಮಾನಗಳನ್ನು ನೀಡಲಾಗುತ್ತದೆ. ಇವೆಲ್ಲವನ್ನು ಇಮ್ರಾನ್ ಬೇಡವೆಂದಿದ್ದಾರೆ.

ತಮ್ಮ ನಿರ್ಧಾರದ ಬಗ್ಗೆ ಮಾಹಿತಿ ನೀಡಿರುವ ಇಮ್ರಾನ್ ಹೇಳಿರುವುದಿಷ್ಟು…

‘ಒಂದು ಕಡೆ ನಮ್ಮ ದೇಶದ ಜನರ ಸ್ಥಿತಿ ಸುಧಾರಿಸಲು ಹಣವಿಲ್ಲ. ಮತ್ತೊಂದೆಡೆ ಕೆಲವು ವರ್ಗದ ಜನರು ರಾಜರಂತೆ ಐಷಾರಾಮಿ ಜೀವನ ಮಾಡುತ್ತಿದ್ದಾರೆ. ನಾವು ನಾಯಕರು ಹೇಗೆ ಬದುಕುತ್ತಿದ್ದೇವೆ ನೋಡಿ. ನಾನು 524 ಸೇವಕರ ಪೈಕಿ ಇಬ್ಬರನ್ನು ಸಹಾಯಕ್ಕೆ ಇಟ್ಟುಕೊಳ್ಳುತ್ತೇನೆ. ಎರಡು ಕಾರುಗಳನ್ನು ಇಟ್ಟುಕೊಳ್ಳುತ್ತೇನೆ. ಮೂರು ಕೊಠಡಿಯ ನಿವಾಸದಲ್ಲಿ ಇರುತ್ತೇನೆ. ಇದು ಕೂಡ ನನಗೆ ಹೆಚ್ಚಾಗಿದೆ. ಆದರೆ ಭದ್ರತೆಗಾಗಿ ಇದು ಅಗತ್ಯ ಎಂದು ಗುಪ್ತಚರ ಇಲಾಖೆ ಒತ್ತಡ ಹಾಕಿದೆ. ಬುಲ್ಲೆಟ್ ಪ್ರೂಫ್ ಕಾರುಗಳನ್ನು ಉದ್ಯಮಿಗಳಿಗೆ ಮಾರಾಟ ಮಾಡಿ ಆ ಹಣವನ್ನು ಸರ್ಕಾರದ ಬೊಕ್ಕಸಕ್ಕೆ ಸೇರಿಸುತ್ತೇನೆ. ದೇಶದೆಲ್ಲೆಡೆ ದುಂದುವೆಚ್ಚಕ್ಕೆ ಬ್ರೇಕ್ ಹಾಕಲು ವಿಶೇಷ ಸಮಿತಿ ರಚಿಸುತ್ತಿದ್ದೇನೆ. ದೇಶದ ಆರ್ಥಿಕ ಸ್ಥಿತಿ ಸುಧಾರಣೆಗೆ ತೆರಿಗೆ ಹೆಚ್ಚಿಸುವ ಚಿಂತನೆ ನಡೆದಿದೆ.’

Leave a Reply