ರಾಜ್ಯದ ಪಾಲಿನ ನೀರು ನೀಡದಿದ್ದರೆ ನ್ಯಾಯಮಂಡಳಿ ರಚನೆ ಬಿಟ್ಟು ಬೇರೆ ಮಾರ್ಗವಿಲ್ಲ: ಕೇಂದ್ರಕ್ಕೆ ಡಿ.ಕೆ ಶಿವಕುಮಾರ್ ಎಚ್ಚರಿಕೆ

ಡಿಜಿಟಲ್ ಕನ್ನಡ ಟೀಮ್:

‘ನದಿ ಜೋಡಣೆ ಯೋಜನೆ ಅಡಿ ರಾಜ್ಯದ ನೀರನ್ನು ಹಂಚಿಕೆ ಮಾಡಿಯೇ ಇಲ್ಲ. ಈ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಮಂಡಳಿ ರಚನೆಯಾಗಬೇಕು…’ ಎಂದು ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ.

ದೆಹಲಿಯಲ್ಲಿ ಸೋಮವಾರ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ನದಿ ಜೋಡಣೆ ಯೋಜನೆ ಕುರಿತ 15ನೇ ಸಭೆಯಲ್ಲಿ ಕರ್ನಾಟಕದ ಪರ ಮಾತನಾಡಿದ ಸಚಿವ ಡಿ.ಕೆ. ಶಿವಕುಮಾರ್, ‘ಗೋದಾವರಿ ಮತ್ತು ಕಾವೇರಿ ನದಿ ಜೋಡಣೆ ಯೋಜನೆಯಲ್ಲಿ ಈ ಕಣಿವೆಯಲ್ಲಿ ಬಳಕೆಯಾಗದ ಹೆಚ್ಚುವರಿ ನೀರನ್ನು ಕರ್ನಾಟಕಕ್ಕೆ ಹಂಚಿಕೆ ಮಾಡಬೇಕು’ ಎಂದು ಡಿಕೆಶಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸಭೆಯಲ್ಲಿ ರಾಜ್ಯದ ಪಾಲಿನ ನೀರು ನೀಡಲೇಬೇಕು ಎಂದು ಸಚಿವರು ಮಂಡಿಸಿದ ವಾದ ಹೀಗಿತ್ತು…

‘ಕಡಿಮೆ ನೀರಿನ ಲಭ್ಯತೆ ಇರುವ ನದಿ ಕಣಿವೆಗಳಿಗೆ, ಅಧಿಕ ನಿರಿನ ಹರಿವು ಇರುವ ನದಿ ಕಣಿವೆಯಿಂದ ನೀರು ಹರಿಸುವ ಉದ್ದೇಶದಿಂದಲೇ ನದಿ ಜೋಡಣೆ ಯೋಜನೆ ರೂಪಿಸಲಾಗಿದೆ. ಆದರೂ ಕರ್ನಾಟಕಕ್ಕೆ ನ್ಯಾಯೋಚಿತವಾಗಿ ಸಿಗಬೇಕಿರುವ ನೀರನ್ನು ಹಂಚಿಕೆ ಮಾಡಿಲ್ಲ. ಕೃಷ್ಣಾ ಮತ್ತು ಕಾವೇರಿ ಕಣಿವೆಗಳ ಬರಪೀಡಿತ ಪ್ರದೇಶಗಳಲ್ಲಿ ವಾಸಿಸುವ ಜನರ ಕುಡಿಯುವ ಮತ್ತು ನೀರಾವರಿ ಬೇಡಿಕೆಯನ್ನು ಪೂರೈಸಬೇಕಿದೆ. ರಾಜ್ಯಕ್ಕೆ ಸಮರ್ಪಕ ನೀರು ನೀಡಲಾಗದಿದ್ದರೆ, ಈ ಕುರಿತು ಅಂತಿಮ ತೀರ್ಮಾನಕ್ಕಾಗಿ ನ್ಯಾಯಮಂಡಳಿ ರಚಿಸುವಂತೆ ಕೋರದೆ ಅನ್ಯ ಮಾರ್ಗವಿಲ್ಲ.

ಗೋದಾವರಿ ಇಂದ್ರಾವತಿ ಉಪಕಣಿವೆಯಲ್ಲಿ ಲಭ್ಯವಿರುವ 247 ಟಿಎಂಸಿ ಅಡಿ ಹೆಚ್ಚುವರಿ ನೀರನ್ನು ಗೋದಾವರಿ, ಕೃಷ್ಣಾ ನಾಗಾರ್ಜುನ ಸಾಗರ ಜೋಡಣೆ, ಕೃಷ್ಣಾ-ನಾಗರ್ಜುನ ಸಾಗರ- ಪೆನ್ನಾರ್ ಜೋಡಣೆ ಮತ್ತು ಪೆನ್ನಾರ್​- ಕಾವೇರಿ ಜೋಡಣೆ ಮೂಲಕ ಆಂಧ್ರಪ್ರದೇಶ ಮತ್ತು ತಮಿಳುನಾಡಿಗೆ ನೀಡಲಾಗುತ್ತದೆ ಎಂಬ ವಿಷಯವು ತಾಂತ್ರಿಕ ಅಧ್ಯಯನ ವರದಿಯಲ್ಲಿ ತಿಳಿದುಬಂದಿದೆ. ಇದರಿಂದ ಕರ್ನಾಟಕಕ್ಕೆ ಅನ್ಯಾಯ ಎಸಗಲಾಗಿದ್ದು, ಕೇಂದ್ರದ ಜಲಸಂಪನ್ಮೂಲ ಸಚಿವಾಲಯವು 2015ರಲ್ಲಿ ನೀಡಿರುವ ಲಿಖಿತ ಭರವಸೆಗೆ ವಿರುದ್ಧವಾಗಿದೆ. ಹೀಗಾಗಿ ಅದನ್ನು ಕೂಡಲೇ ಸರಿಪಡಿಸಬೇಕು.’

Leave a Reply