ಎಲ್ಲರಿಗಿಂತಲೂ ಪ್ರಧಾನಿ ಮೋದಿಯೇ ಗ್ರೇಟಂತೆ!

ಡಿಜಿಟಲ್ ಕನ್ನಡ ಟೀಮ್:

ಸ್ವಾತಂತ್ರ್ಯ ಭಾರತದ ನಂತರ ನಮ್ಮ ದೇಶ ಸಾಕಷ್ಟು ಪ್ರಧಾನ ಮಂತ್ರಿಗಳನ್ನು ನೋಡಿದೆ. ಅದರಲ್ಲಿ ಕೆಲವೊಂದಿಷ್ಟು ಮಂದಿ ಇತಿಹಾಸದಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ. ಅದರಲ್ಲಿ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ಪಿ. ವಿ. ನರಸಿಂಹ ರಾವ್, ಹೆಚ್.ಡಿ. ದೇವೇಗೌಡ, ಮನಮೋಹನ್ ಸಿಂಗ್ ಸೇರದಂತೆ ಹಲವಾರು ಜನರಿದ್ದಾರೆ. ಈ ಎಲ್ಲಾ ನಾಯಕರನ್ನು ಒಂದು ತಕ್ಕಡಿಯಲ್ಲಿ ಇಟ್ಟು ನೋಡಿದರೆ ಪ್ರಧಾನಿ ನರೇಂದ್ರ ಮೋದಿಗೆ ಹೆಚ್ಚು ಅನ್ನೋದು ಈಗಿನ ಚರ್ಚೆ.

ಹೌದು, ರಾಷ್ಟ್ರೀಯ ಸುದ್ದಿ ವಾಹಿನಿ ಇಂಡಿಯಾ ಟುಡೇ ಮೂಡ್ ಆಫ್ ದಿ ನೇಷನ್ ಅನ್ನೋ ಸಮೀಕ್ಷೆ ಮಾಡಿದ್ದು, ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಸ್ಟ್ ಪ್ರೈಮ್ ಮಿನಿಸ್ಟರ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಶೇಕಡ 26ರಷ್ಟು ಮತಗಳಿಸಿರುವ ಪ್ರಧಾನಿ ನರೇಂದ್ರ ಮೋದಿ ಮೊದಲಿಗರಾದರೆ, ಶೇಕಡ 20 ರಷ್ಟು ಮತ ಗಳಿಸಿರುವ ಇಂದಿರಾಗಾಂಧಿ ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿರುವ ಬಿಜೆಪಿ ಅಟಲ್ ಬಿಹಾರಿ ವಾಜಪೇಯಿ ಶೇಕಡಾ12 ರಷ್ಟು ಮತ ಗಳಿಸಿದ್ದಾರೆ. ಹೆಚ್.ಡಿ ದೇವೇಗೌಡ, ಪಿ.ವಿ ನರಸಿಂಹ ರಾವ್, ಚಂದ್ರಶೇಖರ ಅವರು ಶೇಕಡಾ1ರಷ್ಟು ಮತ ಗಳಿಸಿ ಕೊನೆಯ ಸ್ಥಾನದಲ್ಲಿದ್ದಾರೆ.

12 ಸಾವಿರದ 100 ಜನರನ್ನು ಈ ಸಮೀಕ್ಷೆಗೆ ಆಯ್ಕೆ ಮಾಡಿ ದೇಶದ ಜನರ ಒಲವು ಯಾರ ಪರವಿದೆ ಎಂಬ ವರದಿ ತಯಾರಿ ಮಾಡಿದ್ದು, ನರೇಂದ್ರ ಮೋದಿ ಬೆಸ್ಟ್ ಪ್ರೈಮ್ ಮಿನಿಸ್ಟರ್ ಎನಿಸಿಕೊಂಡಿದ್ದಾರೆ. ಅದರಲ್ಲೂ ಹಿಂದೂಗಳ ಆಯ್ಕೆ ಮಾತ್ರ ಮೊದಲಿಗೆ ನರೇಂದ್ರ ಮೋದಿಯೇ ಆಗಿತ್ತು. ಆ ಬಳಿಕವಷ್ಟೇ ಇಂದಿರಾ ಗಾಂಧಿ ಆಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವರದಿಯಲ್ಲಿ‌ ಪ್ರಧಾನಿ ನರೇಂದ್ರ ಮೋದಿ ಮೊದಲಿಗರಾಗಿ ಸ್ಥಾನ ಪಡೆದಿದ್ದು ಯಾಕೆ ಅನ್ನೋದು ನಿಮ್ಮ ಪ್ರಶ್ನೆ ಆಗಿದ್ರೆ ಇಲ್ನೋಡಿ.

ಯಾವುದೇ ಪ್ರಧಾನಿ ಆ ಕಾಲಕ್ಕೆ ತಕ್ಕಂತೆ ಕೆಲವೊಂದು ಮಹತ್ವದ ನಿರ್ಣಯ ಕೈಗೊಂಡಿರುತ್ತಾರೆ. ಅದರಲ್ಲಿ ಇಂದಿರಾಗಾಂಧಿ ಅವರ ಹಲವಾರು ಮಹತ್ವದ ನಿರ್ಧಾರಗಳು ಇಂದಿಗೂ ಜನರನ್ನು ಕಾಡುತ್ತವೆ. ಉಳುವವನೇ ಭೂಮಿಯ ಒಡೆಯ ಅನ್ನೋ ಕಾನೂನು ಬಡ ಜನರ ಮನಸ್ಸಿನಲ್ಲಿ‌ ಇಂದಿಗೂ ಸತ್ವ ಉಳಿಸಿಕೊಂಡಿದೆ. ಅದೇ ರೀತಿ‌ ಪ್ರಧಾನಿ ಮೋದಿ ಕೂಡ ಜಿಎಸ್‌ಟಿ, ಡಿಜಿಟಲ್ ಇಂಡಿಯಾ, ನೋಟು ರದ್ದು, ಸ್ವಚ್ಛ ಭಾರತ್ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಆದರೆ ಮೋದಿ‌ ನಂಬರ್ ಸ್ಥಾನ ಪಡೆದಿದ್ದಾರೆ. ಇಂದಿರಾಗಾಂಧಿ ಎರಡನೇ ಸ್ಥಾನ ಪಡೆದಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅಂದ್ರೆ…

  •  ಸಂದರ್ಶನಕ್ಕೆ ಆಯ್ಕೆಯಾಗಿದ್ದ ಜನರಿಗೆ ಬೇರೆ ಪ್ರಧಾನಿಗಳ ಬಗ್ಗೆ ಸಂಪೂರ್ಣ ಮಾಹಿತಿ ಕೊರತೆ.
  • ಸಂದರ್ಶನಕ್ಕೆ ಆಯ್ಕೆಯಾದವರಲ್ಲಿ ಪ್ರಧಾನಿ‌ ಮೋದಿ ಅವರ ಹಿಂಬಾಲಕರೇ ಹೆಚ್ಚಾಗಿರುವುದು.
  • ಸದ್ಯದ ಪ್ರಧಾನಿ ಆಗಿರುವ ನರೇಂದ್ರ ಮೋದಿ ಇಂದಿನ ಜನರ ಮೇಲೆ ಪರಿಣಾಮ ಹೆಚ್ಚು.

ಈ ಕಾರಣಗಳಿಂದ ‌ಪ್ರಧಾನಿ‌ ನರೇಂದ್ರ ಮೋದಿ‌ ನಂಬರ್ ಒನ್ ಆಗಿರಬಹುದು. ಆದರೆ ಇದು ನಿಜವೋ ಅಲ್ಲವೋ ಅನ್ನೋದು 2019 ರ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಪ್ರಕಟವಾಗಲಿದೆ.

Leave a Reply