3ನೇ ಟೆಸ್ಟ್ ಗೆದ್ದ ಟೀಮ್ ಇಂಡಿಯಾ, ಕೇರಳ ಪ್ರವಾಹ ಸಂತ್ರಸ್ತರಿಗೆ ಗೆಲುವು ಅರ್ಪಣೆ!

ಡಿಜಿಟಲ್ ಕನ್ನಡ ಟೀಮ್

ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಟೀಮ್ ಇಂಡಿಯಾ, ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ 203 ರನ್ ಗಳ ಭರ್ಜರಿ ಜಯ ಸಾಧಿಸಿದೆ. ನಾಯಕ ವಿರಾಟ್ ಕೊಹ್ಲಿ ಈ ಜಯವನ್ನು ಕೇರಳದ ಪ್ರವಾಹ ಸಂತ್ರಸ್ತರಿಗೆ ಅರ್ಪಿಸಿದ್ದಾರೆ.

ನಾಟ್ಟಿಂಗ್ ಹ್ಯಾಮ್ ನಲ್ಲಿ ನಡೆದ ಪಂದ್ಯದ ಅಂತಿಮ ದಿನವಾದ ಬುಧವಾರ ಇಂಗ್ಲೆಂಡಿನ ಕೊನೆ ವಿಕೆಟ್ ಅನ್ನು ಬೇಗನೆ ಕೀಳುವುದರ ಮೂಲಕ ಪಂದ್ಯಕ್ಕೆ ತೆರೆ ಎಳೆದರು. ಇದರೊಂದಿಗೆ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 1-2 ಅಂತರ ಕಡಿಮೆ ಮಾಡಿಕೊಂಡಿದೆ.

ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯದಲ್ಲಿ ಕೊಹ್ಲಿ 200 (97, 103) ಅಮೋಘ ಬ್ಯಾಟಿಂಗ್ ಜತೆಗೆ, ಮೊದಲ ಇನ್ನಿಂಗ್ಸ್ ನಲ್ಲಿ ಅಜಿಂಕ್ಯ ರಹಾನೆ (81), ಎರಡನೇ ಇನ್ನಿಂಗ್ಸ್ ನಲ್ಲಿ ಚೇತೇಶ್ವರ ಪೂಜಾರ (72) ಅವರ ಆಟ ಉತ್ತಮ ಸಾಥ್ ನೀಡಿದೆ. ಇನ್ನು ಬೌಲಿಂಗ್ ನಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಹಾರ್ಧಿಕ್ ಪಾಂಡ್ಯ 5, ದ್ವಿತೀಯ ಇನ್ನಿಂಗ್ಸ್ ನಲ್ಲಿ ಬುಮ್ರಾ 5 ವಿಕೆಟ್ ಪಡೆದು ಆತಿಥೇಯರ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಇನ್ನು ಕೆ.ಎಲ್ ರಾಹುಲ್ 6 ಹಾಗೂ ಕೀಪರ್ ರಿಷಬ್ ಪಂತ್ 7 ಕ್ಯಾಚ್ ಹಿಡಿದಿದ್ದಾರೆ.

ಒಟ್ಟಿನಲ್ಲಿ ಆರಂಭಿಕ ಎರಡು ಪಂದ್ಯಗಳಲ್ಲಿ ಮಾಡಿದ್ದ ತಪ್ಪುಗಳನ್ನು ತಿದ್ದುಕೊಂಡ ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಜಯಿಸಿದ್ದು, ತಂಡದಲ್ಲಿನ ಆತ್ಮವಿಶ್ವಾಸ ದುಪ್ಪಟ್ಟಾಗಿದೆ. ಮುಂದಿನ ಪಂದ್ಯಗಳಲ್ಲೂ ಇದೆ ಪ್ರದರ್ಶನ ಹೊರ ಬಂದರೆ ಈ ಬಾರಿ ಆಂಗ್ಲರಿಗೆ ದೊಡ್ಡ ಆಘಾತ ಎದುರಾಗುವಲ್ಲಿ ಸಂಶಯವಿಲ್ಲ.

Leave a Reply