ಕ್ರೆಡಿಟ್​ ಗಿಟ್ಟಿಸಲು ಶುರುವಾಗಿದೆ ನಾಯಕರ ಪೈಪೋಟಿ!

ಡಿಜಿಟಲ್ ಕನ್ನಡ ಟೀಮ್:

ಕೊಡಗು ಕರ್ನಾಟಕದ ಮುಕುಟ, ಕರ್ನಾಟಕದ ಕಾಶ್ಮೀರ ಅನ್ನೋ ಹೆಗ್ಗಳಿಕೆ ಹೊಂದಿದೆ, ಕಳೆದೊಂದು ವಾರದಿಂದ ಸುರಿದ ಭಾರೀ ಮಳೆಯಿಂದಾಗಿ ಅರ್ಧ ಕೊಡಗು ಕೊಚ್ಚಿ ಹೋಗಿದೆ.. ಬೆಟ್ಟಗುಡ್ಡಗಳು ಕುಸಿದು ಮಾನವ ನಿರ್ಮಿಸಿದ ಸಕಲವೂ ಪ್ರವಾಹಕ್ಕೆ ಸಿಲುಕಿ ಧೂಳಿಪಟವಾಗಿದೆ. ಮನೆ ಮಠ ಕಳೆದುಕೊಂಡು ಜನರು ನಿರಾಶ್ರಿತರಾಗಿ ಕಾಲ ದೂಡುತ್ತಿದ್ದಾರೆ. ಇನ್ನೂ ಕೂಡ ನಾಪತ್ತೆಯಾದವರ ಶವಗಳನ್ನು ಸೈನಿಕರು ಹುಡುಕಾಡುತ್ತಿದ್ದಾರೆ. ನಮ್ಮವರು ಇಲ್ಲ ಹುಡುಕಿಕೊಡಿ ಅನ್ನೋ ಕೂಗು ಅಲ್ಲಲ್ಲಿ ಕೇಳಿ ಬರುತ್ತಿದೆ. ಆದ್ರೆ ರಾಜಕಾರಣಿಗಳು ಮಾತ್ರ ಪ್ರವಾಹದ ವೇಳೆಯಲ್ಲಿ ಜನರ ಸಿಂಪತಿ ಗಿಟ್ಟಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ ಅನ್ನೋ ಅನುಮಾನ ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಯಂ ಸೇವಕರನ್ನು ಕಾಡಲು ಶುರುವಾಗಿದೆ.

ಸಿಎಂ ಕುಮಾರಸ್ವಾಮಿ, 2 ದಿನಗಳ ಕಾಲ ಮಡಿಕೇರಿಯಲ್ಲಿ ಇದ್ದುಕೊಂಡು ಪರಿಹಾರ ಕಾರ್ಯಾಚರಣೆ ನೋಡಿಕೊಂಡ್ರು. ಜನರ ಜೊತೆ ಬೆರತು ಕಷ್ಟಸುಖಗಳಿಗೆ ಸ್ಪಂದಿಸಿದ್ರು. ಇನ್ನು ಜಿಲ್ಲಾ ಉಸ್ತುವಾರಿ ಮಂತ್ರಿ ಸಾ ರಾ ಮಹೇಶ್​​ ಜಿಲ್ಲೆಯಲ್ಲೇ ಮೊಕ್ಕಾಂ ಹೂಡಿದ್ದು, ಸರ್ಕಾರದ ಎಲ್ಲಾ ವ್ಯವಸ್ಥೆ ಸರಿದಾರಿಯಲ್ಲಿ ಸಾಗುವ ಮೂಲಕ ಜನರಿಗೆ ತಲುಪುವಂತೆ ನೋಡಿಕೊಳ್ತಿದ್ದಾರೆ. ಇನ್ನು ಸಚಿವ ರೇವಣ್ಣ, ಪುತ್ರ ಪ್ರಜ್ವಲ್​ ರೇವಣ್ಣ ಸೇರಿದಂತೆ ಹಲವು ನಾಯಕರು ಕೊಡಗು ಜಿಲ್ಲೆಗೆ ಭೇಟಿ ನೀಡಿ ಸರ್ಕಾರದಿಂದ ಆಗಬೇಕಿರುವ ಕೆಲಸ ಕಾರ್ಯಗಳ ಬಗ್ಗೆ ಜನರ ಅಹವಾಲು ಸ್ವೀಕಾರ ಮಾಡಿದ್ದಾರೆ.

ಜೆಡಿಎಸ್​ ಪಕ್ಷದ ವತಿಯಿಂದ ರಕ್ಷಣಾ ಕಾರ್ಯಾಚರಣೆ ಜೋರಾದ ಬೆನ್ನಲ್ಲೇ ಓಡಿ ಹೋಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​ ಯಡಿಯೂರಪ್ಪ, ಕೇಂದ್ರ ಸಚಿವ ಅನಂತ್​ ಕುಮಾರ್​, ದಕ್ಷಣ ಕನ್ನ ಕ್ಷೇತ್ರದ ಸಂಸದ ನಳೀನ್​ ಕುಮಾರ್​ ಕಟೀಲ್​, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ನಾಯಕರು ಮಡಿಕೇರಿಗೆ ಭೇಟಿ ಕೊಟ್ಟಿದ್ರು. ಜೊತೆಗೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ರು. ನಿರಾಶ್ರಿತ ಕೇಂದ್ರದಲ್ಲಿ ವ್ಯವಸ್ಥೆ ಸರಿಯಾಗಿದೆ ಎಂದು ಜನರೇ ಹೇಳಿದ್ರು ಕೂಡ, ಸರ್ಕಾರದ ಸರಿಯಾಗಿ ಸಹಾಯಕ್ಕೆ ಬಂದಿಲ್ಲ ಎಂದು ವಾಗ್ದಾಳಿ ಮಾಡಿದ್ರು.

ಈ ನಡುವೆ ಕಾಂಗ್ರೆಸ್​ನಿಂದ ಕಂದಾಯ ಸಚಿವ ಆರ್​.ವಿ ದೇಶಪಾಂಡೆ ಹಾಗು ಡಿಸಿಎಂ ಜಿ ಪರಮೇಶ್ವರ್​ ಕೂಡ ಕೊಡಗಿಗೆ ಭೇಟಿ ಕೊಟ್ಟಿದ್ರು. ಆದ್ರೆ ಕಾಂಗ್ರೆಸ್​ಗೆ ಯಾಕೋ ಸಮಾಧಾನ ಆದಂತೆ ಕಾಣ್ತಿಲ್ಲ.. ಜೆಡಿಎಸ್​ ಹಾಗು ಬಿಜೆಪಿ ಸಿಕ್ಕ ರೆಸ್ಪಾನ್​​ ಈ ಇಬ್ಬರು ನಾಯಕರಿಗೆ ಸಿಗಲಿಲ್ಲ ಅನ್ನೋ ಕಾರಣಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗು ಕರ್ನಾಟಕ ಕಾಂಗ್ರೆಸ್​ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಇಂದು ಕೊಡಗಿಗೆ ಭೇಟಿ ನೀಡಿದ್ದು, ಜನರ ಅಹವಾಲು ಸ್ವೀಕಾರ ಮಾಡಲಿದ್ದಾರೆ. ಜೊತೆಗೆ ವರದಿಯೊಂದನ್ನು ಸಿದ್ದ ಮಾಡಲು ನಿರ್ಧಾರ ಮಾಡಿದ್ದು, ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲು ಪ್ಲಾನ್​ ಮಾಡಿಕೊಂಡಿದೆ. ಒಟ್ಟಾರೆ, ಜನರು ಸಾವು ನೋವಿನಿಂದ ಕಂಗಾಲಾಗಿರುವ ಸಮಯದಲ್ಲೂ ಜನರನ್ನು ಓಲೈಸುವ ಪ್ರಯತ್ನ ಹೆಚ್ಚುತ್ತಿದೆ. ಇದಕ್ಕೆಲ್ಲಾ ಕಾರಣ ಮತಗಳಿಕೆಯಲ್ಲಿ ಹಿನ್ನಡೆಯಾದರೆ ಅನ್ನೋ ಭಯ.

Leave a Reply