ಕೊಡಗಿನ ಜನಕ್ಕೆ ವರ ಕೊಡುವ ಮಹಾಲಕ್ಷ್ಮಿಯಾಗ್ತಾರಾ ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್!

ಡಿಜಿಟಲ್ ಕನ್ನಡ ಟೀಮ್:

ಕೊಡಗು ಪ್ರವಾಸಿಗರನ್ನು ಕೈ ಬೀಸಿ ಕರೆದು, ಪ್ರಕೃತಿಯ ಸೊಬಗನ್ನು ಆಸ್ವಾದಿಸಲು ಅನುವು ಮಾಡಿಕೊಡುತ್ತಿದ್ದ ಕರ್ನಾಟಕದ ಕಾಶ್ಮೀರ. ಇದೀಗ ಅದೇ ಕೊಡಗು ಅಕ್ಷರಶಃ ನರಕ ಸದೃಶ್ಯವಾಗಿದೆ. ಎಲ್ಲಿ ನೋಡಿದರು ಭೂಕುಸಿತ, ಪ್ರವಾಹದಿಂದ ಬಳಲಿ ಬೆಂಡಾಗಿದ್ದು, ಹಾದಿ ಬೀದಿಯಲ್ಲೂ ಹೆಣಗಳು ಸಿಗುತ್ತಿವೆ. ಸಾಕುಪ್ರಾಣಿಗಳು ಇದ್ದಲ್ಲೇ ಸತ್ತು ಬಿದ್ದಿವೆ. ಮಹಾಮಳೆ ಕೊಡಗಿನ ಜನರು ಸ್ವರ್ಗ ಎಂದುಕೊಂಡಿದ್ದ ಜಾಗದಲ್ಲೇ ಮೂರ್ನಾಲ್ಕು ದಿನದಲ್ಲಿ ನರಕವನ್ನು ಒಮ್ಮೆ ತೋರಿಸಿ ಹೋಗಿದೆ. ಇದೀಗ ಅಲ್ಲಿನ ಜನ ಸರ್ಕಾರ, ಸಂಘಸಂಸ್ಥೆಗಳ ನೆರವಿನಿಂದ ಮತ್ತೆ ಕೊಡಗು ನಿರ್ಮಾಣ ಮಾಡಲು ಆಸೆಗಣ್ಣಿನಿಂದ ಕಾಯುತ್ತಿದ್ದಾರೆ. ಕೊಡವರ ಆಸೆಗೆ ನಾಳೆ ಮಹಾಲಕ್ಷ್ಮಿ ಹಬ್ಬದ ದಿನ ಶುಭವಾಗುವ ಕಾಲ ಕೂಡಿ ಬಂದಿದೆ ಅನ್ನೋ ಮಾಹಿಯಿ ಸಿಕ್ಕಿದೆ.

ಅತ್ತ ದೇವರ ನಾಡು ಎಂಬ ಕೀರ್ತಿ ಹೊಂದಿರುವ ಕೇರಳ ಕೂಡ ಕೊಡಗಿನ ಸ್ಥಿತಿಗಿಂತಲೂ ಭಾರೀ ಸಾವು ನೋವುಗಳಿಗೆ ಸಾಕ್ಷಿಯಾಗಿತ್ತು. ಬರೋಬ್ಬರಿ 250 ಕ್ಕೂ ಹೆಚ್ಚು ಜನರು ತಮ್ಮ ಪ್ರಾಣವನ್ನೇ ಬಿಟ್ಟಿದ್ದಾರೆ. ಈ ವೇಳೆ ಕೇರಳದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತುರ್ತಾಗಿ 100 ಕೋಟಿ ಪರಿಹಾರ ಒದಗಿಸುವ ಭರವಸೆ ನೀಡಿ ಹೋಗಿದ್ರು. ಆ ಬಳಿಕ ಪ್ರಧಾನಿ ಮೋದಿ ಆಗಮಿಸಿ 500 ಕೋಟಿ ಪರಿಹಾರ ನೀಡ್ತೇವೆ ಎಂದು ಭರವಸೆ ನೀಡಿ ಕೇರಳ ಜನರ ಸಂಕಷ್ಟಕ್ಕೆ ನೆರವಾದರು. ಅದೇ ಸಮಯದಲ್ಲಿ ಪ್ರಧಾನಿ ಪಕ್ಕದ ಕೇರಳಕ್ಕೆ ಬಂದರೂ ಕೊಡಗಿನ ಜನರ ಕಷ್ಟ ಕೇಳಲಿಲ್ಲ ಎಂದು ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಪ್ರಧಾನಿ ಪ್ರತಿನಿಧಿಯಾಗಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕೊಡಗಿಗೆ ಭೇಟಿ ನೀಡ್ತಿದ್ದಾರೆ.

ಕೇಂದ್ರ ರಕ್ಷಣಾ ಸಚಿವರಾಗಿರುವ ನಿರ್ಮಲಾ ಸೀತಾರಾಮನ್ ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದು, ಕರ್ನಾಟಕ ಜನರ ರಕ್ಷಣೆಗೆ ನಿಲ್ಲಬೇಕಾದುದುಅವರ ಕರ್ತವ್ಯ ಕೂಡ ಹೌದು. ಇಲ್ಲೀವರೆಗೂ ರಕ್ಷಣಾ ಸಚಿವರಾಗಿ ಸೇನೆಯ ನೆರವು ನೀಡಿದ್ದಾರೆ. ಆದರೆ ಜನರ ಸಂಕಷ್ಟವನ್ನು ಹತ್ತಿರದಿಂದ ಕೇಳಿರಲಿಲ್ಲ. ನಾಳೆ ಮಡಿಕೇರಿಗೆ ಭೇಟಿ ನೀಡುತ್ತಿರುವ ರಕ್ಷಣಾ ಸಚಿವರು. ನಾಳೆ ಮೈಸೂರಿನಿಂದ ಕುಶಾಲನಗರಕ್ಕೆ ತೆರಳಿ ಅಲ್ಲಿ ಕುವೆಂಪು ಬಡಾವಣೆ, ಸಾಯಿ ಬಡಾವಣೆ ಸಂತ್ರಸ್ತರ ಭೇಟಿ ನೀಡಲಿದ್ದಾರೆ. ನಂತರ ಭೂಕುಸಿತವಾಗಿರುವ ಮಾದಾಪುರ ಪ್ರದೇಶಕ್ಕೆ ಭೇಟಿ ನೀಡಲಿದ್ದು, ಮಡಿಕೇರಿಯ ಮೈತ್ರಿ ಹಾಲ್ ನಲ್ಲಿರುವ ಸಂತ್ರಸ್ತರನ್ನ ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ. ಮಧ್ಯಾಹ್ನ ಡಿಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಹಾಗು ಇತರ ಅಧಿಕಾರಿಗಳ ಜೊತೆ ಸಭೆ ನಡೆಸಿ, ಮಾಹಿತಿ ಪಡೆಯಲಿದ್ದಾರೆ. ಆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಲಿರುವ ಸೀತಾರಾಮನ್, ಕರ್ನಾಟಕದ ಕೊಡಗಿನ ಜನರಿಗೆ ವರಮಹಾಲಕ್ಷ್ಮಿ ಹಬ್ಬದ ಗಿಫ್ಟ್ ನೀಡಲಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದ್ದು, ಕೊಡಗನ್ನು ಮತ್ತೆ ಮರು ನಿರ್ಮಾಣ ಮಾಡಲು ಅನುಕೂಲ ಮಾಡಿಕೊಟ್ಟರೆ ಸಾರ್ಥಕವಾಗಲಿದೆ. ಏನು ಕೊಡ್ತಾರೆ ಅನ್ನೋದನ್ನು ಕಾದು ನೋಡ್ಬೇಕು ಅಷ್ಟೆ.

Leave a Reply