ಎಸ್​.ಎಂ ಕೃಷ್ಣ ಬಿಜೆಪಿಗೆ ಗುಡ್ ಬೈ? ಈ ನಿರ್ಧಾರಕ್ಕೆ ಕಾರಣವೇನು?

ಡಿಜಿಟಲ್ ಕನ್ನಡ ಟೀಮ್:

ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರು ಬಿಜೆಪಿಗೆ ಗುಡ್ ಬೈ ಹೇಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಕಾಂಗ್ರೆಸ್​ ಹಿರಿಯ ನಾಯಕರಾಗಿದ್ದ ಎಸ್​.ಎಂ ಕೃಷ್ಣ, ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರದಲ್ಲಿ ವಿದೇಶಾಂಗ ಸಚಿವರಾಗಿ ನಂತರ ರಾಜ್ಯಪಾಲರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಮನಮೋಹನ್​ ಸಿಂಗ್​ ನೇತೃತ್ವದ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿ ಕೆಲಸ ಮಾಡ್ತಿದ್ದಾಗ ಅವಧಿಗೂ ಮುನ್ನವೇ ಮಂತ್ರಿ ಸ್ಥಾನದಿಂದ ಕೈಬಿಡಲಾಯ್ತು. ಪಕ್ಷದ ಕೆಲಸಕ್ಕೆ ನಿಯೋಜನೆ ಮಾಡಲಾಗುತ್ತೆ ಅಂತಾ ಹೇಳಿದ್ದಾದರೂ ಎಸ್​.ಎಂ ಕೃಷ್ಣಾ ಅವರಲ್ಲಿ ಅತೃಪ್ತಿ ಮನೆ ಮಾಡಿತ್ತು. ಇದೇ ಸಮಯಕ್ಕೆ ಕಾದು ಕುಳಿತಿದ್ದ ಬಿಜೆಪಿ ಎಸ್​ ಎಂ ಕೃಷ್ಣ ಅವರಿಗೆ ಗಾಳ ಹಾಕಿ, ಅದರಲ್ಲಿ ಯಶಸ್ವಿಯೂ ಆಗಿತ್ತು. ಬಳಿಕ ವಿಧಾನಸಭಾ ಚುನಾವಣೆ ಸೇರಿದಂತೆ ಲೋಕಸಭಾ ಚುನಾವಣೆಯಲ್ಲಿ ಒಕ್ಕಲಿಗ ಕಾರ್ಡ್​ ಪ್ಲೇ ಮಾಡಿ ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಮಾಡುವ ಪ್ರಯತ್ನ ಮಾಡಿತ್ತು. ಇದೀಗ ಎಸ್​.ಎಂ ಕೃಷ್ಣ ಬಿಜೆಪಿಗೆ ಶಾಕ್​ ನೀಡಿದ್ದಾರೆ.

ಕಾಂಗ್ರೆಸ್​ನಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದೇನೆ, ನನಗೂ ಕೂಡ ಸ್ವಾಭಿಮಾನ ಇರುತ್ತೆ ಅನ್ನೋ ಹೇಳಿಕೆ ನೀಡಿಕೊಂಡು ಕಾಂಗ್ರೆಸ್​​ ಪಕ್ಷ ತೊರೆದಿದ್ದ ಎಸ್​.ಎಂ ಕೃಷ್ಣ ಅವರಿಗೆ ಬಿಜೆಪಿಯಲ್ಲೂ ಸೂಕ್ತ ಸ್ಥಾನಮಾನ ಸಿಗಲಿಲ್ಲ. ಯಾವುದೇ ಪ್ರಮುಖ ಜವಾಬ್ದಾರಿ ಕೊಡದ ಬಿಜೆಪಿ, ಪಕ್ಷ ಬಿಡ್ತಾರೆ ಅನ್ನೋ ಸುದ್ದಿ ಬಂದಾಗ ಮಾತ್ರ ಭೇಟಿ ಮಾಡಿ ಮನವೊಲಿಸುವ ಕೆಲಸ ಮಾಡ್ತಿದೆ.

ಕೃಷ್ಣ ಅವರ ಈ ನಿರ್ಧಾರಕ್ಕೆ ಕಾರಣ ಏನು ಎಂದು ನೋಡುವುದಾದರೆ…

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಜೀವನ ಚರಿತ್ರೆ ಪುಸ್ತಕ ಬರೆಯುತ್ತಿದ್ದು, ಪುಸ್ತಕ ಬಿಡುಗಡೆ ಬಳಿಕ ರಾಜಕೀಯ ಚಟುವಟಿಕೆಗಳಿಂದಲೇ ದೂರ ಸರಿಯುವ ನಿರ್ಧಾರ ಪ್ರಕಟ ಮಾಡಲಿದ್ದಾರೆ ಎನ್ನುವ ಮಾಹಿತಿಯೂ ಸಿಕ್ಕಿದೆ. ಬಿಜೆಪಿ ಸೇರಿದ್ರೆ ಉತ್ತಮ ಸ್ಥಾನಮಾನ ಸಿಗುವ ಜೊತೆಗೆ ಅಳಿಯ ಸಿದ್ದಾರ್ಥ ವ್ಯವಹಾರದ ಮೇಲೆ ಐಟಿ ರೇಡ್​ ಆಗುವುದನ್ನು ತಪ್ಪಿಸಬಹುದು ಎಂದು ಕೃಷ್ಣ ಅವರು ಯೋಜನೆ ಹಾಕಿಕೊಂಡಿದ್ದರು ಎಂಬ ಮಾತು ಕೇಳಿ ಬಂದಿತ್ತು. ಆದ್ರೆ ಕೃಷ್ಣ ಅವರು ಬಿಜೆಪಿ ಸೇರಿದ ಬಳಿಕವೂ ಅಳಿಯ ಸಿದ್ದಾರ್ಥ್​ ಮನೆ ಮೇಲೆ ಐಟಿ ರೇಡ್​ ನಡೆದಿತ್ತು. ಇದರಿಂದಲೂ ಸಾಕಷ್ಟು ನೊಂದಿದ್ದ ಎಸ್​.ಎಂ ಕೃಷ್ಣ ರಾಜಕೀಯ ನಿವೃತ್ತಿ ಚಿಂತನೆ ಮಾಡಿದ್ದಾರೆ ಎಂದು ಹೇಳಲಾಗಿದೆ.

ಇನ್ನು ಜೀವನ ಚರಿತ್ರೆ ಪುಸ್ತಕದಲ್ಲಿ ಕಾಂಗ್ರೆಸ್‌ ಪಕ್ಷದ ಬಗ್ಗೆ ಹೆಚ್ಚು ಉಲ್ಲೇಖ – ಹೊಗಳಿಕೆ ಮಾಡಿದ್ದಾರೆ ಎಂಬ ಅಂಶ ತಿಳಿದು ಬಂದಿದ್ದು, ಇದು ನಿಜವಾದರೆ ಪುಸ್ತಕ ಬಿಡುಗಡೆ ನಂತರ ಅವರು ಬಿಜೆಪಿಯಲ್ಲಿ ಮುಂದುವರಿಯೋದು ಕಷ್ಟ.

ಈ ಮಧ್ಯೆ ಪುತ್ರಿ ಶಾಂಭವಿಯವರನ್ನು ರಾಜಕೀಯಕ್ಕೆ ತರುವ ಪ್ಲಾನ್ ಕೂಡ ಇದೆ ಎನ್ನಲಾಗಿದೆ. ರಾಜಕೀಯದಿಂದ ನಿವೃತ್ತಿ ಘೋಷಿಸಿ ಪುತ್ರಿಗೆ ರಾಜಕೀಯ ಎಂಟ್ರಿ ಕೊಡಿಸೋ ಸಾಧ್ಯತೆ ಇದ್ದು, ಸುದೀರ್ಘ ೫೦ ವರ್ಷಗಳ ಸಕ್ರಿಯ ರಾಜಕೀಯದಿಂದ ಎಸ್​.ಎಂ.ಕೃಷ್ಣ ನಿವೃತ್ತಿ ಹೊಂದಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

Leave a Reply