ನಾನು ಮತ್ತೆ ಸಿಎಂ ಆಗ್ತೀನಿ: ವಿರೋಧಿಗಳಿಗೆ ಸಿದ್ದರಾಮಯ್ಯ ಎಚ್ಚರಿಕೆ!

ಡಿಜಿಟಲ್ ಕನ್ನಡ ಟೀಮ್:

“ರಾಜಕೀಯ ಎಂಬುದು ಕೆರೆಯ ನೀರಲ್ಲ. ಮೇಲಿದ್ದವರು ಕೆಳಗೆ ಬರಲೇಬೇಕು. ಕೆಳಗಿದ್ದವರು ಮೇಲೆ ಏರಲೇಬೇಕು. ನಾನು ಮತ್ತೆ ಮುಖ್ಯಮಂತ್ರಿಯಾಗುತ್ತೇನೆ…” ಇದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಸನದ ಹೊಳೆನರಸೀಪುರದ ಹಾಡ್ಯ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಾಜಕೀಯ ವಿರೋಧಿಗಳಿಗೆ ಕೊಟ್ಟ ಎಚ್ಚರಿಕೆ.

ರಾಷ್ಟ್ರ ರಾಜಕೀಯಕ್ಕೆ ಪ್ರವೇಶಿದ ಮೇಲೆ ರಾಜ್ಯ ರಾಜಕಾರಣದ ಬಗ್ಗೆ ಮೌನ ವಹಿಸಿದ್ದ ಸಿದ್ದರಾಮಯ್ಯ ಅವರು, ಈಗ ದಿಢೀರನೆ ತಮ್ಮ ರಾಜಕೀಯ ವಿರೋಧಿಗಳ ವಿರುದ್ಧ ತೊಡೆ ತಟ್ಟಿದ್ದಾರೆ. ಹಾಸನದಲ್ಲಿ ಈಶ್ವರ ದೇಗುಲ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಪಾಲ್ಗೊಂಡು ಜನರನ್ನುದ್ದೇಶಿಸಿ ಅವರು ಹೇಳಿದ್ದಿಷ್ಟು…

‘ನಾನು ಮತ್ತೆ ಸಿಎಂ ಆಗುತ್ತೇನೆ, ಇನ್ನೊಮ್ಮೆ ಅಧಿಕಾರಕ್ಕೆ ಬರುತ್ತೇನೆ. ಆಗ ನಾನು ಗುತ್ತಿಗೆ ನೀಡುವಲ್ಲೂ ಮೀಸಲಾತಿ ತರ್ತೀನಿ. ಎಲ್ಲವನ್ನ ಈಗಲೇ ಹೇಳಿದರೆ ಕೆಲವರ ಕಣ್ಣು ಕೆಂಪಗಾಗುತ್ತದೆ. ಗ್ರಾಮ ಪಂಚಾಯಿತಿಲ್ಲಿ ಮೀಸಲಾತಿ ತಂದವನು ನಾನು. ಆದರೆ ಬೇರೆಯವರು ನಾನು ಮಾಡ್ದೆ ಅಂತ ಹೇಳಿಕೊಂಡು ಒಡಾಡ್ತಾರೆ. ರಾಜಕೀಯ ಕೆರೆ ನೀರಲ್ಲ, ಮೇಲಿದ್ದವರು ಕೆಳಗೆ ಬರಲೇಬೇಕು.

ರಾಜಕಾರಣಿಗಳಿಗೆ ಜನರೇ ದೇವರು, ನೀವು ಕೊಟ್ಟರೆ ವರ, ಇಲ್ಲವಾದರೆ ನಾವು ಮನೆಗೆ ಹೋಗಬೇಕು. ಇಂದಿನ ರಾಜಕಾರಣ, ಜಾತಿ, ಹಣದ ಮೇಲೆ ನಡೆಯುತ್ತಿದೆ, ಇದು ಅಪಾಯ. ಸಿದ್ದರಾಮಯ್ಯ ಸಿಎಂ ಆಗಬಾರದೆಂದು ನನ್ನೆಲ್ಲಾ ವಿರೋಧಿಗಳು ಒಟ್ಟಾಗಿದ್ದಾರೆ. ಆದರೆ ನಾನು 5 ವರ್ಷದಲ್ಲಿ ಎಲ್ಲಾ ಜಾತಿಗಳಿಗೂ ಸಹಾಯ ಮಾಡಿದ್ದೇನೆ. ದೇವರು ಇದ್ದಾನೆ , ಆತ ಒಂದೆ ಕಡೆ ಇಲ್ಲ, ಎಲ್ಲಾ ಕಡೆ ಇದ್ದಾನೆ. ದೇವರಿರುವ ಕಾರಣಕ್ಕಾಗಿಯೇ ಪ್ರಾಣಿ ಪಕ್ಷಿಗಳೆಲ್ಲ ಈ ಭೂಮಿ ಮೇಲಿವೆ. ಭಕ್ತಿಯಿಂದ ಪೂಜಿಸಿದವರಿಗೆ ದೇವರು ಕಾಣುತ್ತಾನೆ, ಆದರೆ ನಾವು ಭಕ್ತಿಯಿಂದ ಪೂಜಿಸದ ಕಾರಣ ನಮಗೆ ಕಾಣಲು ಸಾಧ್ಯವಿಲ್ಲ.

ನಾವೂ ಯಾರಿಗೆ ಮೋಸಮಾಡಬಹುದು ಆದರೆ ದೇವರಿಗೆ ಮೋಸ ಮಾಡಲು ಸಾಧ್ಯವಿಲ್ಲ, ಆತ್ಮ ಸಾಕ್ಷಿಗೆ ನಡೆದುಕೊಳ್ಳೊದೇ ಮಾಹಾ ಪೂಜೆ. ಬಹಳ ಮಂದಿ ಆತ್ಮಸಾಕ್ಷಿಗನುಗುಣವಾಗಿ ನಡೆದುಕೊಳ್ಳೊದು ಕಮ್ಮಿಯಾಗ್ತಿದೆ.’

Leave a Reply