ಸಾಲ ಮನ್ನಾ ವಿಚಾರದಲ್ಲಿ ಕ್ರಾಂತಿಕಾರಿ ಹೆಜ್ಜೆ ಇಟ್ಟ ಕುಮಾರಸ್ವಾಮಿ! ಟೀಕಾಕಾರರ ಬಾಯಿ ಬಂದ್!

ಡಿಜಿಟಲ್ ಕನ್ನಡ ಟೀಮ್:

ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಖಾಸಗಿ ಸಾಲವನ್ನು ಮನ್ನಾ ಮಾಡಲು ನಿರ್ಧರಿಸಿರುವ ರಾಜ್ಯ ಸರ್ಕಾರ ವರಲಕ್ಷ್ಮಿ ಹಬ್ಬದ ಪ್ರಯುಕ್ತ ರಾಜ್ಯದ ರೈತರಿಗೆ ಭರ್ಜರಿ ಉಡುಗೊರೆ ನೀಡಿದೆ.

ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇದರಿಂದ ರೈತರ ರಾಷ್ಟ್ರೀಕೃತ ಬ್ಯಾಂಕ್ ಸೇರಿದಂತೆ, ಲೇವಾದೇವಿ ಸಂಸ್ಥೆ, ಗಿರವಿ ಅಂಗಡಿ, ಬಡ್ಡಿ ಸಾಲದಂತಹ ಖಾಸಗಿ ಸಾಲಗಳನ್ನು ಮನ್ನಾ ಆಗಲಿದೆ. ಈ ನಿರ್ಧಾರದ ಮೂಲಕ ರಾಜ್ಯ ರೈತರನ್ನು ಋಣಮುಕ್ತರನ್ನಾಗಿ ಮಾಡಲು ಸರ್ಕಾರ ಮುಂದಾಗಿದೆ. ಸರ್ಕಾರದ ಈ ನಿರ್ಧಾರ ರೈತರ ಮುಖದಲ್ಲಿ ಮಂದಹಾಸ ತಂದರೆ, ಬಡ್ಡಿದಾರರಿಗೆ ಪೆಟ್ಟು ಬಿದ್ದಿದೆ.

ಸರ್ಕಾರದ ಈ ನಿರ್ಧಾರ ಒಂದು ಕ್ರಾಂತಿಕಾರಿ ಹೆಜ್ಜೆಯೇ ಆಗಿದೆ. ಕಾರಣ, ಈ ಹಿಂದೆ 1976ರಲ್ಲಿ ದೇವರಾಜ ಅರಸು ಅವರು ತಂದಿದ್ದ ಋಣ ಪರಿಹಾರ ಕಾಯ್ದೆ ಮೂಲಕ ರೈತರ ಖಾಸಗಿ ಸಾಲ ಮನ್ನಾ ಮಾಡಿದ ಬಳಿಕ ಈಗ ಇಂತಹ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇನ್ನು ಈ ಸಾಲಮನ್ನಾವನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ನಿರ್ಧರಿಸಲಾಗಿದ್ದು ಇದಕ್ಕೆ ರಾಷ್ಟ್ರಪತಿಗಳ ಒಪ್ಪಿಗೆ ಸಿಕ್ಕ ನಂತರ ಜಾರಿಯಾಗಲಿದೆ.

ಇನ್ನು ರಾಷ್ಟ್ರೀಕೃತ ಬ್ಯಾಂಕುಗಳ ಸಾಲದ ವಿಚಾರ ನೋಡುವುದಾದ್ರೆ, ₹2 ಲಕ್ಷದವರೆಗಿನ ಸುಸ್ತಿಸಾಲದ ಜತೆಗೆ ₹25 ಸಾವಿರ ಚಾಲ್ತಿ ಸಾಲವನ್ನು ಮನ್ನಾ ಮಾಡಲು ನಿರ್ಧರಿಸಿದ್ದಾರೆ. ಇದರಿಂದ ರಾಜ್ಯದ 23 ಲಕ್ಷ ರೈತರಿಗೆ ಪ್ರಯೋಜನವಾಗಲಿದೆ.

ರೈತರ ಸಾಲ ಮನ್ನಾ ವಿಚಾರವನ್ನೇ ಅಸ್ತ್ರ ಮಾಡಿಕೊಂಡು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ದಾಳಿ ಮಾಡುತ್ತಿದ್ದ ವಿರೋಧ ಪಕ್ಷ ಬಿಜೆಪಿಗೆ ತಕ್ಕ ಉತ್ತರ ನೀಡಲಾಗಿದೆ. ಇನ್ನು ಈ ನಿರ್ಧಾರದಿಂದ ಟೀಕಾಕಾರರ ಬಾಯಿಗೆ ಬೀಗ ಬಿದ್ದಿದೆ.

ಮೈತ್ರಿ ಸರ್ಕಾರ ಸ್ಥಿರತೆ ಕಂಡುಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡರು ಈಗ ಅದು ಸುಗಮವಾಗಿ ಸಾಗಲು ಆರಂಭಿಸಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಚಿವ ಸಂಪುಟ ಸಭೆಯಲ್ಲಿ ಖಾಸಗಿ ಸಾಲದ ವಿಚಾರವನ್ನು ಪ್ರಸ್ತಾಪಿಸಿದಾಗ ಕೆಲವು ಸಚಿವರುಗಳೇ ಅಚ್ಚರಿಗೊಂಡು ಇದು ಸಾಧ್ಯವಾಗುವ ಮಾತೇ ಎಂದು ಪ್ರಶ್ನಿಸಿದ್ದು, ರೈತರ ಹಿತ ಕಾಪಾಡಲು ನಿರ್ಧರಿಸಿದೆ ಖಂಡಿತವಾಗಿಯೂ ಸಾಧ್ಯ. ಇದಕ್ಕೆ ಕಾನೂನಿನ ಬೆಂಬಲವೂ ಸಿಗುವ ವಿಶ್ವಾಸ ವ್ಯಕ್ತಪಡಿಸಿ, ಸಚಿವರಿಗೆ ಮನವರಿಕೆ ಮಾಡಿದ್ದಾರೆ. ಒಟ್ಟಿನಲ್ಲಿ ರೈತರ ಸಾಲ ಮನ್ನಾ ವಿಚಾರವಾಗಿ ಕುಮಾರಸ್ವಾಮಿ ಅವರ ಈ ನಿರ್ಧಾರ ಚುನಾವಣೆಗೂ ಮುನ್ನ ಕೊಟ್ಟ ಮಾತನ್ನು ಉಳಿಸಿಕೊಂಡಂತಾಗಿದೆ.

Leave a Reply