ಐದು ವರ್ಷ ಸರ್ಕಾರ ನಡೆಯುತ್ತೆ, ಪತನದ ಕನಸು ಕಾಣುತ್ತಿರುವವರಿಗೆ ಬಿಸಿ ಮುಟ್ಟಿಸುತ್ತೇನೆ: ಕುಮಾರಸ್ವಾಮಿ

ಡಿಜಿಟಲ್ ಕನ್ನಡ ಟೀಮ್:

‘ಸರ್ಕಾರ ಅಸ್ಥಿರಗೊಳಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಅದು ನನಗೆ ಗೊತ್ತು. ಆದರೆ ಐದು ವರ್ಷಗಳ ಕಾಲ ಮೈತ್ರಿ ಸರ್ಕಾರ ಸುಭದ್ರವಾಗಿರುತ್ತದೆ. ಸರ್ಕಾರ ಬಿದ್ದು ಹೋಗುವ ಕನಸು ಕಾಣುತ್ತಿರುವ ಅಧಿಕಾರಿಗಳಿಗೆ ಸದ್ಯದಲ್ಲೇ ಬಿಸಿ ಮುಟ್ಟಿಸುತ್ತೇನೆ…’ ಇದು ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿರುವ ಎಚ್ಚರಿಕೆ.

ಮೈತ್ರಿ ಸರ್ಕಾರದಲ್ಲಿ ಬಿರುಕು ಮೂಡಿದೆ ಎಂಬ ವರದಿಗಳು ಹರಿದಾಡಿದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ಹೇಳಿದ್ದಿಷ್ಟು…

ಸರ್ಕಾರ ಪತನವಾಗುವುದಿಲ್ಲ. ಇದರ ಬಗ್ಗೆ ಚಿಂತೆ ಬೇಡ. ಭಗವಂತನ ಆಶೀರ್ವಾದ ಇರುವವರೆಗೆ ಮುಖ್ಯಮಂತ್ರಿಯಾಗಿರುತ್ತೇನೆ. ಎಷ್ಟು ದಿನ ಅಧಿಕಾರದಲ್ಲಿ ಇರುತ್ತೇನೆ ಗೊತ್ತಿಲ್ಲ. ಸಿಎಂ ಪಟ್ಟ ಉಳಿಸಿಕೊಳ್ಳಲು ಪ್ರಯತ್ನಿಸುವುದಿಲ್ಲ. ಆದರೆ ಇರುವಷ್ಟು ದಿನ ಒಳ್ಳೆಯ ಕೆಲಸ ಮಾಡುತ್ತೇನೆ. ಈ ಸರ್ಕಾರದ ಬಗ್ಗೆ ಅಸಡ್ಡೆ ತೋರುತ್ತಿರುವ ಅಧಿಕಾರಿಗಳಿಗೆ ಆದಷ್ಟು ಬೇಗನೆ ಬಿಸಿ ಮುಟ್ಟಿಸುತ್ತೇನೆ.

ಇದೆ ತಿಂಗಳು ಸರ್ಕಾರ 100 ದಿನ ಪೂರೈಸಲಿದೆ. ಇನ್ನುಮುಂದಾದರೂ ಅನಗತ್ಯ ಟೀಕೆ ಬಿಟ್ಟು ರಾಜ್ಯದ ಅಭಿವೃದ್ಧಿ ಯತ್ತ ಗಮನ ಹರಿಸಿ.

ಕೊಡಗು ಪ್ರವಾಹಕ್ಕೆ ಕೇಂದ್ರ ನೆರವು ನೀಡಿಲ್ಲ ಅಂತ ನಾವು ಕೈ ಕಟ್ಟಿ ಕೂತಿಲ್ಲ. ಎಲ್ಲದಕ್ಕೂ ಕೇಂದ್ರದತ್ತ ಕೈ ಚಾಚಲ್ಲ. ರಾಜ್ಯದ ತೆರಿಗೆ ಹಣದಲ್ಲಿ ನನ್ನ ಕೆಲಸ ಮಾಡುತ್ತೇನೆ.’

ಇನ್ನು ಸಿದ್ದರಾಮಯ್ಯ ಅವರು ತಾವು ಮತ್ತೆ ಸಿಎಂ ಆಗುತ್ತೇನೆ ಎಂದು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿ ಆಗಬಹುದು’ ಎಂದಿದ್ದಾರೆ.

ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ತೀನಿ ಅಂತ ಹೇಳಿಕೆ ನೀಡಿದ ಬೆನ್ನಲ್ಲೇ ಕುಮಾರಸ್ವಾಮಿ ಅವರು ಸರ್ಕಾರ ಪತನ ಪ್ರಯತ್ನ ನಡೆಯುತ್ತಿರುವ ಬಗ್ಗೆ ಒಪ್ಪಿಕೊಂಡು ಎಚ್ಚರಿಕೆ ನೀಡಿರುವುದು ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ಇನ್ನು ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಸತೀಶ್ ಜಾರಕಿಹೊಳಿ ಪರೋಕ್ಷವಾಗಿ ನಿರಾಕರಿಸಿದ್ದು, ಮೈತ್ರಿ ಸರ್ಕಾರದ ಪತನಕ್ಕೆ ಅತೃಪ್ತರ ವಕ್ರದೃಷ್ಟಿ ಮುಂದುವರಿದಿರುವುದು ಸ್ಪಷ್ಟವಾಗಿದೆ.

Leave a Reply