ತಂದೆ ಮಾತಿನಂತೆ ಕ್ರಿಕೆಟ್ ಬಿಟ್ಟು ಶಾಟ್ ಪುಟ್ ಆರಂಭಿಸಿದ ತೇಜಿಂದರ್ ಸಿಂಗ್ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದ!

ಡಿಜಿಟಲ್ ಕನ್ನಡ ಟೀಮ್:

ಏಷ್ಯನ್ ಗೇಮ್ಸ್ ನ ಏಳನೇ ದಿನವಾದ ಶನಿವಾರ ಶಾಟ್ ಪುಟ್ ಪಟು ತೆಜಿಂದರ್ ಪಾಲ್ ಸಿಂಗ್ ಭಾರತಕ್ಕೆ ದಾಖಲೆಯ ಚಿನ್ನ ಗೆದ್ದುಕೊಟ್ಟಿದ್ದಾರೆ.

ಒಂದು ಕಾಲದಲ್ಲಿ ಕ್ರಿಕೆಟ್ ಮೇಲೆ ಪ್ರೀತಿ ಇಟ್ಟುಕೊಂಡು ಅಭ್ಯಾಸ ಮಾಡುತ್ತಿದ್ದ ತೆಜಿಂದರ್ ಸಿಂಗ್ ತಮ್ಮ ತಂದೆಯ ಸಲಹೆ ಮೇರೆಗೆ ಕ್ರಿಕೆಟ್ ಗೆ ಗುಡ್ ಬೈ ಹೇಳಿ ಶಾಟ್ ಪುಟ್ ಅಭ್ಯಾಸ ಆರಂಭಿಸಿದರು. ಪರಿಣಾಮ ಇಂದು ವಿಶ್ವ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಮುಗಿಲೆತ್ತರದಲ್ಲಿ ಹಾರಿಸಿದ್ದಾರೆ.

ಪಂಜಾಬಿನ ಮೊಗಾ ಜಿಲ್ಲೆಯ ಖೋಸಪಾಂಡೊ ಗ್ರಾಮದ ರೈತರ ಕುಟುಂಬದಲ್ಲಿ ಹುಟ್ಟಿದ ತೆಜಿಂದರ್, ಗುಂಡನ್ನು 20.75 ಮೀ. ದೂರ ಎಸೆದು ರಾಷ್ಟ್ರೀಯ ದಾಖಲೆ ಮಾತ್ರವಷ್ಟೇ ಅಲ್ಲದೆ ಕ್ರೀಡಾಕೂಟ ದಾಖಲೆ ಬರೆದಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಕಾಮನ್ವೆಲ್ತ್ ಕ್ರೀಡಾಕೂಟದ ಅಂತಿಮ ಸುತ್ತಿನಲ್ಲಿ 8ನೆ ಸ್ಥಾನ ಪಡೆದು ನಿರಾಸೆಯಾಗಿತ್ತು. ಈಗ ಚಿನ್ನ ಗೆಲ್ಲುವ ಮೂಲಕ ತೆಜಿಂದರ್ ಗಮನ ಸೆಳೆದಿದ್ದಾರೆ.

ತೆಜಿಂದರ್ 2015ರಲ್ಲಿ ಭಾರತೀಯ ನೌಕಾಪಡೆ ಸೇರಿದ್ದು, ಅವರ ಈ ಸಾಧನೆಗೆ ದೇಶದೆಲ್ಲೆಡೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

Leave a Reply