ಕ್ಯಾನ್ಸರ್ ನಿಂದ ಬಳಲುತ್ತಿರೋ ತಂದೆಗೆ ಚಿನ್ನದ ಪದಕ ಕೊಟ್ಟ ತೇಜಿಂದರ್ ಸಿಂಗ್ ಸಂಕಷ್ಟದ ಹಾದಿ ಹೇಗಿತ್ತು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಏಷ್ಯನ್ ಗೇಮ್ಸ್ ನ ಶಾಟ್ ಪುಟ್ ವಿಭಾಗದಲ್ಲಿ ದಾಖಲೆಯ ಚಿನ್ನ ಗೆದ್ದ ಭಾರತದ ತೇಜಿಂದರ್ ಸಿಂಗ್, ತಮ್ಮ ಪದಕವನ್ನು ಕ್ಯಾನ್ಸರ್ ನಿಂದ ಬಳಲುತ್ತಿರುವ ತಮ್ಮ ತಂದೆಗೆ ಅರ್ಪಿಸಿದ್ದಾರೆ. ಈ ಸಾಧನೆ ಮಾಡಲು ತೇಜಿಂದರ್ ನಡೆದು ಬಂದ ಮುಳ್ಳಿನ ಹಾದಿ ನಿಜಕ್ಕೂ ನಿಮ್ಮ ಮನ ಕಲುಕಲಿದೆ.

ಭಾರತದ ಇತರೆ ಹುಡುಗರಂತೆ ಕ್ರಿಕೆಟ್ ಮೇಲೆ ಹುಚ್ಚು ಬೆಳೆಸಿಕೊಂಡಿದ್ದ ತೇಜಿಂದರ್ ಗೆ ಅವರ ತಂದೆ ಸರ್ದಾರ್ ಕರಮ್ ಸಿಂಗ್ ಶಾಟ್ ಪುಟ್ ಆಯ್ಕೆ ಮಾಡಿಕೊಳ್ಳಲು ಸಲಹೆ ನೀಡಿದರು. ಶಾಟ್ ಪುಟ್ ಅನ್ನು ವೃತ್ತಿ ಪರವಾಗಿ ಸ್ವೀಕರಿಸಿದ ನಂತರ ಅದರ ಬಗ್ಗೆ ಕನಸುಗಳನ್ನು ಕಟ್ಟಿಕೊಂಡರು.

ಮೂಲತಃ ರೈತಾಪಿ ಕುಟುಂಬದಲ್ಲಿ ಹುಟ್ಟಿದ ತೇಜಿಂದರ್ ಗೆ ಶಾಟ್ ಪುಟ್ ನಲ್ಲಿ ಕಂಡ ಕನಸನ್ನು ಈಡೇರಿಸುವ ಹಾದಿ ಹೂ ಹಾದಿಯಾಗಿರಲಿಲ್ಲ. ಅಂತಾರಾಷ್ಟ್ರೀಯ ಮಟ್ಟದ ಶಾಟ್ ಪುಟ್ ಪಟುವಾಗಲು ವೃತ್ತಿಪರ ಜಿಮ್ ಹಾಗೂ ಹೆಚ್ಚವರಿ ಆಹಾರ ಪದ್ಧತಿ ಪಾಲನೆ ಮಾಡಲೇಬೇಕು. ಇವೆಲ್ಲವೂ ಸಾಮಾನ್ಯ ಜನರಿಗೆ ಎಟಕುವ ಪರಿಸ್ಥಿತಿ ಭಾರತದಲ್ಲಿಲ್ಲ.

2006ರಲ್ಲಿ ಶಾಟ್ ಪುಟ್ ಅನ್ನು ಆರಂಭಿಸಿದ ತೇಜಿಂದರ್ ಪರಿಶ್ರಮ ಹಾಕಲು ಎಂದೂ ಹಿಂದೆಮುಂದೆ ನೋಡಲಿಲ್ಲ ಆದರೆ ಕ್ರೀಡೆಯಲ್ಲಿ ಬಳಸುವ ಶೂ ಸೇರಿದಂತೆ, ಜಿಮ್, ಹೆಚ್ಚುವರಿ ಆಹಾರ ಪದ್ಧತಿ ಹೊಂದುವುದು ಈತನಿಗೆ ಸವಾಲಾಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವ ಶಾಟ್ ಪುಟ್ ಪಟುಗಳು ಹಾಕಿಕೊಳ್ಳುವ ಶೂನ ಕನಿಷ್ಠ ಬೆಲೆ 10 ಸಾವಿರ. ಅವುಗಳು ಬಾಳಿಕೆ ಬರುವುದು ಹೆಚ್ಚೆಂದರೆ 2 ತಿಂಗಳು. ಅಲ್ಲಿಗೆ ವರ್ಷಕ್ಕೆ 6 ಜೊತೆ ಶೂ. ವರ್ಷಕ್ಕೆ ಕೇವಲ ಶೋಗಾಗಿಯೇ 60 ಸಾವಿರ ವೆಚ್ಚ. ಇನ್ನು ಇತರೆ ಸಾಧನಗಳು, ಜಿಮ್ ತರಬೇತಿಗಾಗಿ ತಿಂಗಳಿಗೆ 50 ಸಾವಿರ ಬೇಕು.

ಈ ಮಧ್ಯೆ 2015ರಲ್ಲಿ ತೇಜಿಂದರ್ ಭಾರತೀಯ ನೌಕಾಪಡೆ ಸೇರಿದರು. ಆದರೆ ದುರ್ದೈವ ಅದೇ ವರ್ಷ ಅವರ ತಂದೆ ಸರ್ದಾರ್ ಕರಮ್ ಸಿಂಗ್ ಚರ್ಮದ ಕ್ಯಾನ್ಸರ್ ಗೆ ತುತ್ತಾದರು. ಈಗ ತಮ್ಮ ತಂದೆಯ ಚಿಕಿತ್ಸೆಯನ್ನು ನೋಡಿಕೊಳ್ಳಬೇಕಿದ್ದು, ನೌಕಾಪಡೆಯಿಂದ ಉತ್ತಮ ನೆರವು ಸಿಗುತ್ತಿದ್ದು, ನೆಮ್ಮದಿಯಾಗಿ ತಮ್ಮ ಅಭ್ಯಾಸದತ್ತ ಗಮನಹರಿಸಲು ನೆರವಾಗಿದೆ.

Leave a Reply