ಕಾಂಗ್ರೆಸ್ ಟೀಕಿಸಿದರೂ ಕೇಂದ್ರ ಸಚಿವೆ ನಿರ್ಮಲ ಸೀತರಾಮನ್ ರನ್ನು ಬಿಟ್ಟು ಕೊಡದ ಸಿಎಂ! ಇದು ಕುಮಾರಸ್ವಾಮಿ ಜಾಣ ನಡೆ!

ಡಿಜಿಟಲ್ ಕನ್ನಡ ಟೀಮ್:

ಕೊಡಗು ಪ್ರವಾಹ ಸ್ಥಿತಿ ಅಧ್ಯಯನಕ್ಕಾಗಿ ಬಂದ ಕೇಂದ್ರ ಸಚಿವೆ ನಿರ್ಮಲ ಸೀತರಾಮನ್ ಅವರು ತಮಗಾದ ಅನಾನುಕೂಲಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಜತೆಗೆ ಮನಸ್ತಾಪ ಮಾಡಿಕೊಂಡಿದ್ದು, ರಾಜಕೀಯ ಹಗ್ಗಜಗ್ಗಾಟಕ್ಕೆ ಕಾರಣವಾಗಿದ್ದು, ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜಕೀಯ ಹಾಗೂ ಅಹಂ ಪಕ್ಕಕ್ಕಿಟ್ಟು ಕೇಂದ್ರ ಸಚಿವರ ಅನಾನುಕೂಲಕ್ಕೆ ಬೇಸರ ವ್ಯಕ್ತಪಡಿಸಿರುವುದು ಗಮನ ಸೆಳೆದಿದೆ.

ಹೌದು, ಕೇಂದ್ರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನಡುವಿನ ಈ ಪ್ರಕರಣ ನಂತರ ವೈಯಕ್ತಿಕ ಆರೋಪಕ್ಕೂ ತಲುಪಿತ್ತು. ಇದರಿಂದ ಬೇಸತ್ತ ನಿರ್ಮಲ ಸೀತರಾಮನ್ ಅವರು ರಾಜ್ಯ ಸಭೆ ಸಂಸದರ ಘನತೆಗೆ ಧಕ್ಕೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇತ್ತ ಈ ಅವಕಾಶವನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಕಾಂಗ್ರೆಸ್ ಮುಂದಾಯಿತು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಅನೇಕರು ಕೇಂದ್ರ ಸಚಿವರ ವಿರುದ್ಧ ವಾಗ್ದಾಳಿ ಮಾಡಿದರು. ಆದರೆ ಈ ವಿಚಾರದಲ್ಲಿ ರಾಜಕೀಯಕ್ಕಿಂತ ಕೊಡಗು ಜನರ ಪರಿಸ್ಥಿತಿ ಸುಧಾರಿಸಿವುದು ಮುಖ್ಯ ಎಂದಿರುವ ಕುಮಾರಸ್ವಾಮಿ, ಕೇಂದ್ರ ಸಚಿವರಿಗಾದ ಅನಾನುಕೂಲಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದ ಕುರಿತು ನಿರ್ಮಲ ಸೀತರಾಮನ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿರುವ ಮುಖ್ಯಮಂತ್ರಿಗಳು, ‘ಸದ್ಯ ಕೊಡಗಿನ ಜನ ಪ್ರವಾಹದಿಂದ ತತ್ತರಿಸಿದ್ದು, ಅವರಿಗೆ ಪುನರ್ವಸತಿ ಕಲ್ಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಇಂತಹ ಸಂದರ್ಭದಲ್ಲಿ ನಾವು ಸಣ್ಣಪುಟ್ಟ ಮನಸ್ಥಾಪಗಳನ್ನು ಬದಿಗಿಟ್ಟು, ಜನರ ಬದುಕು ಕಟ್ಟಿಕೊಡುವತ್ತ ಗಮನ ಹರಿಸೋಣ. ಈ ಸಣ್ಣ ವಿಚಾರಗಳಿಗೆ ರಾಜಕೀಯ ಬಣ್ಣ ಬಳಿದು ನಮ್ಮ ಗಮನ ಬೇರೆಕಡೆ ಹರಿಸುವುದು ಬೇಡ. ನೀವು ಕೊಡಗಿಗೆ ಆಗಮಿಸಿದ ಸಂದರ್ಭದಲ್ಲಿ ಶಿಷ್ಟಾಚಾರ ಪಾಲನೆಗೆ ಅಗತ್ಯ ಕ್ರಮ ಕೈಗೊಂಡಿದ್ದರೂ ಅನಾನುಕೂಲವಾಗಿರುವುದು ವಿಷಾದಕರ ಸಂಗತಿ. ಈ ವಿಷಯವನ್ನು ಮರೆತು ಕೊಡಗಿನ ಜನರಿಗೆ ಕೇಂದ್ರ ಸರ್ಕಾರ ಅದರಲ್ಲೂ ರಕ್ಷಣಾ ಮಂತ್ರಿಗಳ ಸಹಕಾರ ಹೀಗೆ ಮುಂದುವರಿಯುವ ವಿಶ್ವಾಸವಿದೆ’ ಎಂದು ತಿಳಿಸಿದ್ದಾರೆ.

ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಬಳಿಕ ಕೇಂದ್ರವನ್ನು ಅನೇಕ ಸಂದರ್ಭದಲ್ಲಿ ಟೀಕಿಸಿದ್ದಾರೆ. ಅದೇ ರೀತಿ ಅಗತ್ಯ ಬಿದ್ದಾಗ ಕೇಂದ್ರದ ಜತೆ ಉತ್ತಮ ಸಂಬಂಧ ಇಟ್ಟುಕೊಂಡು ರಾಜ್ಯಕ್ಕೆ ಆಗಬೇಕಾದ ಕೆಲಸಗಳನ್ನು ಮಾಡಿಸಿಕೊಳ್ಳುವಲ್ಲಿ ಯಶಸ್ವಿಯೂ ಆಗಿದ್ದಾರೆ. ಅದಕ್ಕೆ ಉದಾಹರಣೆ ಇತ್ತೀಚೆಗೆ ಕೇಂದ್ರ ಸರ್ಕಾರದ ಸಚಿವರುಗಳನ್ನು ಭೇಟಿ ಮಾಡಿ ರಾಜ್ಯಕ್ಕೆ ₹2500 ಕೋಟಿ ಮೌಲ್ಯದ ಯೋಜನೆಗಳಿಗೆ ಕೇಂದ್ರ ಸರಕಾರವನ್ನು ಒಪ್ಪಿಸಿದ್ದು. ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯ ಆರೋಪ ಪ್ರತ್ಯಾರೋಪ, ಅಹಂ ಅನ್ನು ಗಂಟುಮೂಟೆ ಕಟ್ಟಿ ಕೊಡಗಿನ ಜನರ ನೆರವಿಗೆ ಮುಂದಾಗಬೇಕಿರುವುದು ನಾಯಕರ ಜವಾಬ್ದಾರಿ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದಾಗ ಕೇಂದ್ರದ ಜತೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿದ್ದರು. ಪರಿಣಾಮ ಕೇಂದ್ರದಿಂದ ನಿರೀಕ್ಷಿತ ಪ್ರಯೋಜನ ರಾಜ್ಯಕ್ಕೆ ಸಿಗಲಿಲ್ಲ. ಈ ವಿಚಾರದಲ್ಲಿ ಕುಮಾರಸ್ವಾಮಿ ಆ ತಪ್ಪು ಮಾಡದೇ ಅಗತ್ಯ ಸಂದರ್ಭದಲ್ಲಿ ಕೇಂದ್ರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಪ್ರಬುದ್ಧತೆ ಹಾಗೂ ಜಾಣ್ಮೆ ಮೆರೆಯುತ್ತಿದ್ದಾರೆ. ಅದಕ್ಕೆ ಈ ಪ್ರಕರಣವೂ ಸಾಕ್ಷಿಯಾಗಿದೆ.

Leave a Reply