ಕುಮಾರಸ್ವಾಮಿ ವಿರುದ್ಧ ನಡೆಯುತ್ತಿದೆಯೇ ಷಡ್ಯಂತ್ರ? ಅನುಮಾನ ಮೂಡಿಸುತ್ತಿವೆ ಸಿಎಂ ಕುರ್ಚಿಯ ಚರ್ಚೆ!

ಡಿಜಿಟಲ್ ಕನ್ನಡ ಟೀಮ್:

ಮುಖ್ಯಮಂತ್ರಿ ಸ್ಥಾನದಿಂದ ಕುಮಾರಸ್ವಾಮಿ ಅವರನ್ನು ಕೆಳಗಿಳಿಸಲು ಷಡ್ಯಂತ್ರ ನಡೆಯುತ್ತಿದೆಯೇ ಎಂಬ ಅನುಮಾನ ದಟ್ಟವಾಗಿ ಕಾಡಲಾರಂಭಿಸಿದೆ. ಅದಕ್ಕೆ ಕಾರಣ, ಕಳೆದ ಎರಡು ಮೂರು ದಿನಗಳಿಂದ ವಿವಿಧ ಪಕ್ಷಗಳ ನಾಯಕರು ಸಿಎಂ ಕುರ್ಚಿ ವಿಚಾರವಾಗಿ ನೀಡಿರುವ ಹೇಳಿಕೆ.

‘ನಾನು ಮತ್ತೆ ಮುಖ್ಯಮಂತ್ರಿಯಾಗುತ್ತೇನೆ’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹಾಸನದಲ್ಲಿ ಹೇಳಿಕೆ ನೀಡಿದ ನಂತರ ಹೊರಬರುತ್ತಿರುವ ಹೇಳಿಕೆಗಳು ಈ ಚರ್ಚೆಗೆ ದಾರಿ ಮಾಡಿಕೊಟ್ಟಿವೆ.

ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರ ಅಸ್ಥಿರಗೊಳಿಸಲು ಕೆಲವರು ಪ್ರಯತ್ನಿಸುತ್ತಿದ್ದು, ಅದರ ಬಗ್ಗೆ ಮಾಹಿತಿ ಇದೆ ಎಂದಿದ್ದರು. ಈಗ ಕೃಷಿ ಸಚಿವ ಶಿವಶಂಕರ್ ರೆಡ್ಡಿ, ‘ಸಮನ್ವಯ ಸಮಿತಿ ನಿರ್ಧರಿಸಿದರೆ ಮುಖ್ಯಮಂತ್ರಿ ಬಡಲಾಗುತ್ತಾರೆ’ ಎಂದು ಹೇಳಿದ್ದಾರೆ.

ಈ ಮಧ್ಯೆ ಕೇಂದ್ರ ಸಚಿವ ಅನಂತಕುಮಾರ್ ಅವರು ಮಾತನಾಡಿ, ‘ಈ ಮೈತ್ರಿ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ. ಶೀಘ್ರವೇ ರಾಜ್ಯದಲ್ಲಿ ಹೊಸ ರಾಜಕೀಯ ಸಮೀಕರಣವಾಗಲಿದೆ’ ಎಂದಿದ್ದಾರೆ. ಹೀಗೆ ಒಬ್ಬೊಬ್ಬರ ಮಾತು ಕೂಡ ಕುಮಾರಸ್ವಾಮಿ ವಿರುದ್ಧ ಪಿತೂರಿ ನಡೆಯುತ್ತಿದೆಯೇ ಎಂಬ ಅನುಮಾನದ ಬೀಜಕ್ಕೆ ನೀರು ಗೊಬ್ಬರ ಹಾಕಿದಂತಾಗುತ್ತಿದೆ.

Leave a Reply