ಇತಿಹಾಸ ಬರೆಯಲು ಸಿಂಧು ಸಜ್ಜು! ಆದರೆ ಈ ಹಿಂದಿನ ಅಂಕಿ ಅಂಶಗಳು ಏನು ಹೇಳುತ್ತೆ?

ಡಿಜಿಟಲ್ ಕನ್ನಡ ಟೀಮ್:

ಪ್ರಸಕ್ತ ಏಷ್ಯಾ ಕ್ರೀಡಾಕೂಟದಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಇತಿಹಾಸ ಬರೆಯಲು ಸಿದ್ಧವಾಗಿದ್ದಾರೆ. ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿರುವ ಮೂಲಕ ಏಷ್ಯನ್ ಗೇಮ್ಸ್ ನಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ್ತಿಯಾಗಿದ್ದು, ಈಗ ಚಿನ್ನದ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.

ಅತ್ತ ಸಿಂಧುವಿಗೆ ಎದುರಾಳಿಯಾಗಿ ಚೈನೀಸ್ ತೈಪೇನ ಜು ಯಿಂಗ್ ವಿರುದ್ಧ ಸೆಣೆಸಲಿದ್ದಾರೆ. ಮಹತ್ವದ ಟೂರ್ನಿಯಲ್ಲಿ ಫೈನಲ್ ಗೆ ಪ್ರವೇಶಿಸಿ ಅಂತಿಮ ಹೆಜ್ಜೆಯಲ್ಲಿ ಎಡವುತ್ತಿರುವ ಸಿಂಧು, ಟೂರ್ನಿಯನ್ನು ಜಯದೊಂದಿಗೆ ಮುಗಿಸುತ್ತಿಲ್ಲ ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ. ಅದಕ್ಕೆ ಪುಷ್ಟಿ ನೀಡುವಂತೆ ಸಿಂಧು ಕಳೆದ ಎರಡು ವಿಶ್ವ ಚಾಂಪಿಯನ್ ಶಿಪ್ ಗಳಲ್ಲಿ ಫೈನಲ್ ನಲ್ಲಿ ಸೋತಿದ್ದಾರೆ. ಪ್ರತಿಷ್ಠಿತ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ತನ್ನ ಮೊದಲ ಚಿನ್ನದ ಪದಕ ಗೆಲ್ಲುವ ತವಕದಲ್ಲಿದ್ದು, ಹೀಗಾಗಿ ಈ ಪಂದ್ಯ ಸಿಂಧು ಪಾಲಿಗೆ ಮಹತ್ವದ್ದಾಗಿದೆ.

ಇನ್ನು ಸಿಂಧು ಹಾಗೂ ಜು ಯಿಂಗ್ ಪರಸ್ಪರ 12 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಸಿಂಧು ಗೆದ್ದಿರೋದು ಕೇವಲ 3 ಬಾರಿ. ಉಳಿದ 9 ಪಂದ್ಯಗಳನ್ನು ಗೆದ್ದಿರೋದು ಯಿಂಗ್. ಇನ್ನು ಸಿಂಧು ಕಳೆದ ಬಾರಿ ಯಿಂಗ್ ವಿರುದ್ಧ ಜಯ ಸಾಧಿಸಿದ್ದು, 2016ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ. ಹೀಗಾಗಿ ಸಿಂಧು ಈ ಪಂದ್ಯದಲ್ಲಿ ಸಹಜವಾಗಿಯೇ ಸಾಕಷ್ಟು ಒತ್ತಡಗಳನ್ನು ನಿಭಾಯಿಸಿಕೊಂಡು ಎದುರಾಳಿ ಜತೆ ಸೇಣೆಸಬೇಕಿದೆ.

ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಸೋನಿ ಸಿಕ್ಸ್, ಟೆನ್2, ಟೆನ್ 3 ನಲ್ಲಿ ಪಂದ್ಯ ಪ್ರಸಾರವಾಗಲಿದೆ.

Leave a Reply