ಆರೆಸ್ಸೆಸ್ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿಗೆ ಆಹ್ವಾನ? ಟೀಕಿಸುತ್ತಿರುವ ರಾಹುಲ್ ವಿರುದ್ಧ ಹೊಸ ಅಸ್ತ್ರ!

ಡಿಜಿಟಲ್ ಕನ್ನಡ ಟೀಮ್:

ಆರೆಸ್ಸೆಸ್ ದೇಶವನ್ನು ಒಡೆಯುತ್ತಿದೆ, ಜನರಲ್ಲಿ ದ್ವೇಷ ಬಿತ್ತುತ್ತಿದೆ ಎಂದು ಪುಂಖಾನುಪುಂಖವಾಗಿ ಟೀಕೆ ಮಾಡುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಈಗ ಆಹ್ವಾನ ನೀಡಲು ಸಂಘಟನೆ ನಿರ್ಧರಿಸಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಮುಂದಿನ ತಿಂಗಳು 17ರಿಂದ 19ರವರೆಗೆ ಆರೆಸ್ಸೆಸ್ ‘ಭವಿಷ್ಯದ ಭಾರತ’ ಎಂಬ ಕಾರ್ಯಕ್ರಮ ಆಯೋಜಿಸಿದ್ದು ಇದಕ್ಕೆ ರಾಹುಲ್ ಗಾಂಧಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಸೇರಿದಂತೆ ವಿರೋಧ ಪಕ್ಷಗಳ ನಾಯಕರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಭಿನ್ನ ಸಿದ್ಧಾಂತ ಹಾಗೂ ಅಭಿಪ್ರಾಯಗಳನ್ನು ಹೊಂದಿರುವ ನಾಯಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದು ಸಂಘದ ಮೂಲಗಳು ತಿಳಿಸಿವೆ. ಆದರೆ ಈ ಆಹ್ವಾನವನ್ನು ಒಪ್ಪಿ ಆರೆಸ್ಸೆಸ್ ಕಾರ್ಯಕ್ರಮದ ವೇದಿಕೆಯನ್ನು ಈ ನಾಯಕರು ಹಂಚಿಕೊಳ್ಳುತ್ತಾರಾ ಎಂಬ ಪ್ರಶ್ನೆ ಹುಟ್ಟುಕೊಂಡಿದೆ.

ವಿವಿಧತೆಯಲ್ಲಿ ಏಕತೆ ಎಂಬ ತತ್ವವನ್ನು ಕಾಂಗ್ರೆಸ್ ಪ್ರತಿಪಾದಿಸುತ್ತದೆ. ನಾವು ಎಲ್ಲರನ್ನು ಒಟ್ಟಾಗಿ ಮುನ್ನಡೆಸಿಕೊಂಡು ಹೋಗುತ್ತೇವೆ ಎಂದು ಬರ್ಲಿನ್ ನಲ್ಲಿ ಹೇಳಿಕೆ ನೀಡಿದ್ದ ರಾಹುಲ್, ಸಂಸತ್ತಿನಲ್ಲಿ ಮೋದಿಯನ್ನು ಅಪ್ಪಿಕೊಂಡು ನಾವು ಎದುರಾಳಿಗಳನ್ನು ಪ್ರೀತಿಸುತ್ತೇವೆ. ಎಲ್ಲರನ್ನು ಸಮಾನವಾಗಿ ಗೌರವಿಸುತ್ತೇವೆ ಎಂಬ ಸಂದೇಶ ರವಾನಿಸಲು ಪ್ರಯತ್ನಿಸಿದ್ದರು.

ತಮ್ಮ ಕಾರ್ಯಕ್ರಮಕ್ಕೆ ಆಹ್ವಾನ ನೀಡುವ ಮೂಲಕ ಆರೆಸ್ಸೆಸ್ ರಾಹುಲ್ ಅವರು ತಮ್ಮ ಹೇಳಿಕೆಗಳನ್ನು ನಿಜ ಎಂದು ಸಾಬೀತು ಪಡಿಸಲು ಪರೋಕ್ಷವಾಗಿ ಸವಾಲು ಹಾಕಿದ್ದು, ಈಗ ಆರೆಸ್ಸೆಸ್ ಆಹ್ವಾನಕ್ಕೆ ರಾಹುಲ್ ಹೇಗೆ ಪ್ರತಿಕ್ರಿಯಿಸುತ್ತಾರೆ?  ತಮ್ಮ ಮಾತು ಕೇವಲ ಭಾಷಣಕ್ಕೆ ಮಾತ್ರ ಸೀಮಿತವಲ್ಲ ಎಂದು ರಾಹುಲ್ ಸಾಬೀತುಪಡಿಸುತ್ತಾರಾ ಎಂಬ ಕುತೂಹಲ ಹುಟ್ಟುಕೊಂಡಿದೆ.

Leave a Reply