ವಿಮಾನದಲ್ಲಿ ಜೈವಿಕ ಇಂಧನ ಬಳಕೆ ಯಶಸ್ವಿ! ಹಾರಾಟಕ್ಕೆ ಬಳಸಿದ್ದು ಬೇಲಿಯಲ್ಲಿ ಸಿಗುವ ಕಳ್ಳಿ ಗಿಡದ ಎಣ್ಣೆಯಿಂದ!

ಡಿಜಿಟಲ್ ಕನ್ನಡ ಟೀಮ್:

ಸೋಮವಾರ ಭಾರತೀಯ ವಿಮಾನಯಾನದ ಪಾಲಿಗೆ ಮಹತ್ವದ ದಿನ. ಕಾರಣ ಇದೆ ಮೊದಲ ಬಾರಿಗೆ ಜೈವಿಕ ಇಂಧನ ಬಳಸಿಕೊಂಡು ವಿಮಾನ ಹಾರಾಟ ಮಾಡಲಾಗಿದ್ದು, ಈ ಪರಿಕ್ಷಾರ್ಥ ಹಾರಾಟ ಯಶಸ್ವಿಯಾಗಿದೆ.

ಇದರ ವಿಶೇಷತೆ ಎಂದರೆ ಸಾಮಾನ್ಯವಾಗಿ ಹಳ್ಳಿಗಳಲ್ಲಿ ಬೇಲಿಗಳಲ್ಲಿ ಹುಟ್ಟುಕೊಳ್ಳುವ ಜಾತ್ರೋಫ (Jatropha) ಎಂಬ ಕಳ್ಳಿ ಗಿಡದ ಬೀಜದಿಂದ ತಯಾರಿಸಲಾದ ಎಣ್ಣೆಯನ್ನು ಈ ಪರೀಕ್ಷೆಯಲ್ಲಿ ಜೈವಿಕ ಇಂಧನವಾಗಿ ಬಳಸಿರೋದು.

ಹೌದು, ಡೆಹ್ರಾಡೂನ್ ಮೂಲದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂನ ಸಂಶೋಧಕರು ಜಾತ್ರೋಫ ಬೀಜದ ಎಣ್ಣೆಯಿಂದ ವಿಮಾನ ಹಾರಾಟ ಮಾಡಲು ಈ ಜೈವಿಕ ಇಂಧನ ಸಿದ್ಧಪಡಿಸಿರೋದು ಗಮನಾರ್ಹ ಸಂಗತಿ.

ಈ ಪ್ರಯೋಗದಲ್ಲಿ ಶೇ.25ರಷ್ಟು ಜೈವಿಕ ಇಂಧನ ಹಾಗೂ ಶೇ.75ರಷ್ಟು ಏವಿಯೇಷನ್ ತೈಲ ಇಂಧನ ಬಳಸಲಾಗಿದೆ. ತಜ್ಞರ ಪ್ರಕಾರ ಮುಂದಿನ ದಿನಗಳಲ್ಲಿ ಶೇ.50ರಷ್ಟು ಜೈವಿಕ ಇಂಧನ ಬಲಸಬಹುದಾಗಿದ್ದು, ಇದರಿಂದ ಕಡಿಮೆ ವೆಚ್ಚ ಹಾಗೂ ಪರಿಸರ ಮಾಲಿನ್ಯ ಪ್ರಮಾಣ ನಿಯಂತ್ರಿಸಬಹುದು. ಹೆಚ್ಚು ಜೈವಿಕ ಇಂಧನ ಬಳಕೆಯಿಂದ ಮುಂದಿನ ದಿನಗಳಲ್ಲಿ ವಿಮಾನ ಪ್ರಯಾಣ ದರ ಕಡಿಮೆಯಾಗಲಿದೆ.

ಅಂದಹಾಗೆ ಈ ಜೈವಿಕ ಇಂಧನಕ್ಕೆ ಬೇಡಿಕೆ ಹೆಚ್ಚಾದಷ್ಟು ಈ ಜಾತ್ರೋಫವನ್ನು ಜೈವಿಕ ಇಂಧನ ಬೆಳೆಯನ್ನಾಗಿಯೂ ಬೆಳೆಯಬಹುದು. ಇದರಲ್ಲಿ ಟಾಕ್ಸಿಕ್ ಅಂಶ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಇದು ಜೈವಿಕ ಇಂಧನವಾಗಿ ಪ್ರಯೋಜನವಾಗಲಿದೆ.

ಇನ್ನು ವೆಚ್ಚದ ವಿಚಾರಕ್ಕೆ ಬರುವುದಾದರೆ ಸಾಧ್ಯ ಭಾರತೀಯ ವಿಮಾನಯಾಣದಲ್ಲಿ ತೈಲ ಇಂಧನಕ್ಕಾಗಿ 30 ಸಾವಿರ ಕೋಟಿ ಇದ್ದು, ಭಾರತದ ಪೆಟ್ರೋಲಿಯಂ ಆಮದಿನ ಮೌಲ್ಯ 8 ಲಕ್ಷ ಕೋಟಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜೈವಿಕ ಇಂಧನ ಬಳಕೆ ಮಹತ್ವದ ಪಾತ್ರ ವಹಿಸಿದ್ದು, ಭವಿಷ್ಯದಲ್ಲಿ ದೊಡ್ಡ ಮಟ್ಟದ ಬದಲಾವಣೆಗೆ ದಾರಿ ಮಾಡಿಕೊಟ್ಟಿದೆ.

ಈ ಜೈವಿಕ ಇಂಧನವನ್ನು ನಾನ್ ಎಡಿಬಲ್ ಆಯಿಲ್ (ಅಡುಗೆಗೆ ಬಳಸಲಾಗದಂತಹ ತೈಲ) ನಿಂದ ಮಾಡಲಾಗುತ್ತದೆ. ಇದಕ್ಕೆ ಜಾತ್ರೋಫ ಸೇರಿದಂತೆ ಇತರೆ ಬಗೆಯ ಬೀಜಗಳ ತೈಲದಿಂದ ಈ ಇಂಧನ ತಯಾರಿಸಬಹುದು.

ಜಾತ್ರೋಫ ಗಿಡಗಳು ಕರ್ನಾಟಕ ಸೇರಿದಂತೆ ಒಡಿಶಾ, ಆಂಧ್ರಪ್ರದೇಶ, ಮಹಾರಾಷ್ಟ್ರ, ಛತ್ತೀಸ್ ಗಡ ರಾಜ್ಯಗಳಲ್ಲಿ ಸಿಗುತ್ತವೆ. ಈಗ ಬಳಕೆಯಾಗಿರುವ ಜೈವಿಕ ಇಂಧನ ತಯಾರಿಕೆಗೆ ಛತ್ತೀಸ್ ಗಡದ 500 ರೈತ ಕುಟುಂಬಗಳು ತಯಾರಿಕೆಯಲ್ಲಿ ಕೈಜೋಡಿಸಿವೆ.

Leave a Reply