ಕುಮಾರಸ್ವಾಮಿ ಆಯ್ತು ಈಗ ನಿರ್ಮಲ ಸೀತರಾಮನ್ ಪರ ರೇವಣ್ಣ ಬ್ಯಾಟಿಂಗ್!

ಡಿಜಿಟಲ್ ಕನ್ನಡ ಟೀಮ್:

ಕೊಡಗು ಪ್ರವಾಹ ಪರಿಸ್ಥಿತಿ ಅಧ್ಯಯನಕ್ಕಾಗಿ ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ ಮಹೇಶ್ ಜತೆಗಿನ ವಿವಾದಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಸಚಿವ ರೇವಣ್ಣ ಕೇಂದ್ರ ಸಚಿವರ ಪರ ಬ್ಯಾಟಿಂಗ್ ಮಾಡಿದ್ದಾರೆ.

ಮೊನ್ನೆಯಷ್ಟೇ ದೂರವಾಣಿ ಮೂಲಕ ಸಚಿವೆ ನಿರ್ಮಲ ಅವರ ಜತೆ ಮಾತನಾಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ಅವರಿಗಾದ ಅನಾನುಕೂಲಕ್ಕೆ ಬೇಸರ ವ್ಯಕ್ತಪಡಿಸಿ, ಕೊಡಗಿನ ಜನರ ಹಿತಾಸಕ್ತಿಗಾಗಿ ಈ ಮನಸ್ಥಾಪವನ್ನು ಬದಿಗಿಡಬೇಕೆಂದು ಮನವೊಲಿಸುವ ಪ್ರಯತ್ನ ಮಾಡಿದ್ದರು. ಈಗ ಸಚಿವ ರೇವಣ್ಣ ಕೇಂದ್ರ ಸಚಿವರ ಬೆನ್ನಿಗೆ ನಿಂತಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ರೇವಣ್ಣ ಹೇಳಿದ್ದಿಷ್ಟು…

‘ಕೇಂದ್ರ ಸಚಿವರು ಕೊಡಗು ಪ್ರವಾಸ ಸಂದರ್ಭದಲ್ಲಿ ಸಂತ್ರಸ್ತರ ಪರಿಹಾರ ಕಾರ್ಯಕ್ಕೆ ರಕ್ಷಣಾ ಇಲಾಖೆಯಿಂದ ₹ 7 ಕೋಟಿ ಹಾಗೂ ತಮ್ಮ ಸಂಸದರ ನಿಧಿಯಿಂದ ₹ 1 ಕೋಟಿ ಪರಿಹಾರ ಘೋಷಣೆ ಮಾಡಿದ್ದಾರೆ. ರಾಜ್ಯದ ಅಭಿವೃದ್ಧಿ ಯೋಜನೆಗಳಿಗಾಗಿ ರಕ್ಷಣಾ ಇಲಾಖೆಯ ಜಾಗವನ್ನು ಬಿಟ್ಟು ಕೊಡುವ ಮೂಲಕ ಅವರು ನೆರವು ನೀಡಿದ್ದಾರೆ. ಈ ರೀತಿ ರಾಜ್ಯದ ವಿಚಾರದಲ್ಲಿ ಅವರು ಅನೇಕ ಬಾರಿ ಉದಾರತೆ ಮೆರೆದಿದ್ದಾರೆ. ಹೀಗಾಗಿ ಅವರ ವಿರುದ್ಧ ಸುಮ್ಮನೆ ದೂರುವುದು ಸರಿಯಲ್ಲ.’

ಅತ್ತ ಕಾಂಗ್ರೆಸ್ ನಾಯಕರು ನಿರ್ಮಲ ಸೀತರಾಮನ್ ವಿರುದ್ಧ ಟೀಕೆ ಮಾಡಿದಷ್ಟು ಇತ್ತ ಜೆಡಿಎಸ್ ನಾಯಕರು ಕೇಂದ್ರ ಸಚಿವರ ಪರ ವಕಾಲತ್ತು ವಹಿಸುತ್ತಿದ್ದಾರೆ. ಇದರೊಂದಿಗೆ ಕೇಂದ್ರದ ವಿಶ್ವಾಸ ಕಳೆದುಕೊಳ್ಳಲು ಜೆಡಿಎಸ್ ಬಿಲ್ ಕುಲ್ ಸಿದ್ಧವಿಲ್ಲವೆಂಬುದು ಸ್ಪಷ್ಟವಾಗಿದೆ.

Leave a Reply