ಸ್ತನ ಕ್ಯಾನ್ಸರ್ ಬಗ್ಗೆ ನಿರ್ಲಕ್ಷ್ಯ ಬೇಡ! ತಡೆಗಟ್ಟುವಿಕೆ ಹಾಗೂ ಆರಂಭಿಕ ಪತ್ತೆ ಅತಿ ಮುಖ್ಯ!

 ಡಾ.ಬಿ.ರಮೇಶ್

ಸ್ತನ ಕ್ಯಾನ್ಸರ್ ಜಗತ್ತಿನಾದ್ಯಂತ ಮಹಿಳೆಯರನ್ನು ಕಾಡುವ ಅತಿದೊಡ್ಡ ಕಾಯಿಲೆಯಾಗಿದೆ. ಭಾರತದಲ್ಲಂತೂ ಇದರ ಪಿಡುಗು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೊರಟಿದೆ. ಇದಕ್ಕೆ ಮುಖ್ಯ ಕಾರಣ ಮಹಿಳೆಯರ ನಿರ್ಲಕ್ಷ್ಯ ಮನೋಭಾವ. ಆರಂಭಿಕ ಹಂತದಲ್ಲಿಯೇ ಇದನ್ನು ಪತ್ತೆಹಚ್ಚಿ ಚಿಕಿತ್ಸೆ ಪಡೆದರೆ ಸಾಕಷ್ಟು ಮಟ್ಟಿಗೆ ಇದರ ಕಪಿಮುಷ್ಟಿಯಿಂದ ರಕ್ಷಿಸಿಕೊಳ್ಳಬಹುದಾಗಿದೆ. ಇದರ ಬಗ್ಗೆ ನಿಲ್ರ್ಯಕ್ಷಮಾಡಿದಷ್ಟು ಅದು ಅಕ್ಕಪಕ್ಕ ಪಸರಿಸುತ್ತಾ ಹೋಗುತ್ತದೆ.

ಕಂಡು ಬರುವ ಲಕ್ಷಣಗಳೇನು?

  • ಸ್ತನಭಾಗದಲ್ಲಿ ಗೆಡ್ಡೆ ಅಥವಾ ಅದುಮಿದಾಗ ಗಟ್ಟಿಯಾಗಿರುವ ಅನುಭೂತಿ ಉಂಟು ಮಾಡಬಹುದು.
  • ಕಂಕುಳು ಭಾಗದಲ್ಲಿ ತೀವ್ರನೋವು ಕಾಣಿಸಿಕೊಳ್ಳಬಹುದು.
  • ಸ್ತನದ ತೊಟ್ಟುಗಳು ಮುರುಟಿಕೊಂಡಂತೆ ಕಾಣಿಸಬಹುದು.
  • ಸ್ತನದ ಭಾಗದಲ್ಲಿ ಬಿಸಿಯಾಗಿರುವ ಅನುಭೂತಿ ಉಂಟಾಗಬಹುದು.
  • ಸ್ತನದಗಾತ್ರ, ಬಣ್ಣದಲ್ಲಿ ವ್ಯತ್ಯಾಸ ಗೋಚರಿಸಬಹುದು.
  • ಸ್ತನದ ತೊಟ್ಟಿನಿಂದ ರಕ್ತ ಸೋರಬಹುದು.
  • ಸ್ತನದ ಸುತ್ತಮುತ್ತಲಿನ ಭಾಗದಲ್ಲಿ ಮಾಮೂಲಿಗಿಂತ ಬೇರೆ ರೀತಿಯ ಗೆಡ್ಡೆಗಳು ಅಥವಾ ಗಾಯದ ರೀತಿಯಲ್ಲಿ ಗುರುತುಗಳು ಕಂಡುಬರಬಹುದು.

ಈ ಮೇಲ್ಕಂಡ ಲಕ್ಷಣಗಳು ಕಂಡುಬಂದಲ್ಲಿ ತಡಮಾಡದೆ ವೈದ್ಯರಬಳಿ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಿ. ಸಾಮಾನ್ಯವಾಗಿ ಸ್ತನಕ್ಯಾನ್ಸರ್ ನ ಪ್ರಕರಣಗಳು ಮುಂಚೆ 45 – 50ರ ಆಸುಪಾಸಿನ ವಯೋಮಾನದವರಲ್ಲಿ ಗೋಚರಿಸುತ್ತಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ 30ರ ಆಸುಪಾಸಿನ ವಯೋಮಾನದ ಮಹಿಳೆಯರಲ್ಲಿ ಹೆಚ್ಚಿವೆ.

ಕುಟುಂಬ ಹಿನ್ನೆಲೆ: ಕುಟುಂಬದಲ್ಲಿ ತಾಯಿ ಹಾಗೂ ಸೋದರಿಗೆ ಈ ಸಮಸ್ಯೆ ಇದ್ದರೆ ಅದು ಮಗಳು ಹಾಗೂ ಸಹೋದರಿಗೂ ಉಂಟಾಗುವ ಸಾಧ್ಯತೆ ಹೆಚ್ಚು.

ಸ್ತನಕ್ಯಾನ್ಸರ್ ಗೆ ಕಾರಣ?

ಸ್ತನಕ್ಯಾನ್ಸರ್ ಎನ್ನುವುದು ಒಮ್ಮೆಲೆ ಪ್ರತ್ಯಕ್ಷವಾಗದು. ಅದು ಕ್ರಮೇಣ ಬೆಳವಣಿಗೆಯಾಗುತ್ತ ಹೋಗುವ ಸಮಸ್ಯೆ. ನಮ್ಮದೇಹದ ಆರೋಗ್ಯವನ್ನು ಸುವ್ಯವಸ್ಥಿತ ರೀತಿಯಲ್ಲಿ ಕಾಪಾಡಲು ಹೆಚ್ಚುಹೆಚ್ಚು ಜೀವಕೋಶಗಳು ಉತ್ಪತ್ತಿಯಾಗುತ್ತವೆ. ಈ ಜೀವಕೋಶಗಳು ಹಾನಿಗೊಳಗಾದಾಗ ಅವು ಸತ್ತು ಬೇರೆ ಜೀವಕೋಶಗಳು ಹುಟ್ಟುತ್ತವೆ.

ಈ ಹುಟ್ಟು ಮತ್ತು ಸಾವಿನ ಪ್ರಕ್ರಿಯೆ ಅಂದರೆ ಕೋಶವಿಭಜನೆ ನಿಯಂತ್ರಣದಲ್ಲಿರುತ್ತದೆ. ಆದರೆ ಕೆಲಕಾರಣಗಳಿಂದಾಗಿ ಈ ಸಹಜ ಪ್ರಕ್ರಿಯೆಯಲ್ಲಿ ವ್ಯತ್ಯಾಸ ಉಂಟಾಗಿ ಜೀವಕೋಶಗಳು ಹೇಗೇ ಗೊವಿಭಜನೆ ಗೊಳ್ಳಲು ಆರಂಭವಾಗುತ್ತವೆ. ಇದರ ಪರಿಣಾಮವೆಂಬಂತೆ ಈ ಕೋಶಗಳು ಅತಿಯಾಗಿ ಬೆಳೆದು ಕ್ಯಾನ್ಸರ್ ಕೋಶಗಳಾಗುತ್ತವೆ. ಬಳಿಕ ಗಂಟುಗಳಾಗುತ್ತವೆ. ಹಾಗೆಯೇ ಅವು ಇನ್ನೊಂದು ಅಂಗ ಸೇರಿ ಅದೇ ಪ್ರಕ್ರಿಯೆ ಮುಂದುವರಿಸುತ್ತವೆ.

ಕ್ಯಾನ್ಸರ್’ಗೆ ಕಾರಣವಾಗಬಹುದಾದ ಅಂಶವೆಂದರೆ ಮದ್ಯಪಾನ, ಧೂಮಪಾನ, ತಂಬಾಕುಸೇವನೆ, ಬೊಜ್ಜು, ತಪ್ಪು ಆಹಾರಸೇವನೆ, ರಾಸಾಯನಿಕ ವಸ್ತುಗಳ ಸಂಪರ್ಕ, ಕಲುಷಿತ ವಾತಾವರಣ ಹೀಗೆ ಅನೇಕ ಕಾರಣಗಳನ್ನು ಪಟ್ಟಿಮಾಡಬಹುದು. ಆದರೆ ನಿಖರವಾಗಿ ಇಂಥದೇ ಕಾರಣದಿಂದ ಸ್ತನ ಕ್ಯಾನ್ಸರ್ ಉಂಟಾಗುತ್ತದೆ ಎಂದು ಹೇಳಲಾಗದು. ಅತಿಯಾಗಿ ಗರ್ಭನಿರೋಧಕಗಳ ಸೇವನೆ, ಮಗುವಿಗೆ ಸ್ತನ್ಯಪಾನ ಮಾಡಿಸದಿರುವುದು, ಚಿಕ್ಕವಯಸ್ಸಿನಲ್ಲಿ ಎದೆಭಾಗದಲ್ಲಿ ರೇಡಿಯೋಥೆರಪಿ, ಹಾರ್ಮೋನು ಅಂಶಗಳು, ಮಕ್ಕಳಾಗದೇ ಇರುವುದು, ತಡವಾಗಿ ಮಕ್ಕಳನ್ನು ಪಡೆಯುವುದು ಇವು ಕೂಡ ಕ್ಯಾನ್ಸರ್’ಗೆ ಕಾರಣವಾಗುವ ಅಂಶಗಳು.

ಸ್ತನದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದರೆ ಲಕ್ಷಣಗಳು ಗೋಚರಿಸಿದರೆ ವೈದ್ಯರ ಬಳಿ ಹೋಗುವುದರಿಂದ ಶೀಘ್ರ ರೋಗಪತ್ತೆಗೆ ಅನುಕೂಲವಾಗುತ್ತದೆ. ರೋಗವನ್ನು ಬೇಗ ಗುರುತಿಸಿದಲ್ಲಿ ಚಿಕಿತ್ಸೆ ಸುಲಭವಾಗುತ್ತದೆ. ಅದರ ಫಲಿತಾಂಶವೂ ಆಶಾದಾಯಕವಾಗಿರುತ್ತದೆ.

ಸ್ವಯಂಪರೀಕ್ಷೆ: ಸ್ತನಕ್ಯಾನ್ಸರಿನ ಬಗ್ಗೆ ಅರಿವು ಮೂಡಿಸಿಕೊಂಡು ತಾವೇ ಸ್ವತಃ ಸ್ತನದ ಪರೀಕ್ಷೆಮಾಡಿಕೊಳ್ಳಬೇಕು. ವ್ಯತ್ಯಾಸಗಳನ್ನು ಬಹುಬೇಗ ಗುರುತಿಸಿಕೊಳ್ಳಬಹುದು.

ಮ್ಯಾಮೊಗ್ರಾಮ್: ಸ್ತನದಲ್ಲಿ ಏನಾದರೂ ಅಸಹಜತೆ ಇದೆಯೇ ಎಂದು ಪತ್ತೆಹಚ್ಚಲು ಮ್ಯಾಮೊಗ್ರಾಮ್ ಅಥವಾ ಮ್ಯಾಮೊಗಫಿ ಪರೀಕ್ಷೆ ಕೈಗೊಳ್ಳಲಾಗುತ್ತದೆ. ಇದು ಕೂಡ ಒಂದು ರೀತಿಯ ಎಕ್ಸರೇ ವಿಧಾನ. ವಿಶೇಷವಾಗಿ ರೂಪಿಸಲಾದ ಕಂಪ್ರೆಷನ್ ಪ್ಲೇಟ್ ಜೊತೆಗೆ ಸ್ತನಗಳ ಮೇಲೆ ಒತ್ತಡ ಕೊಡಲಾಗುತ್ತವೆ. ಒಂದು ಸಲ ಮೇಲಿನಿಂದ ಕೆಳಭಾಗಕ್ಕೆ ಮತ್ತೊಂದು ಸಲ ಓರೆಯಾಗಿ ಹೊರಭಾಗದಿಂದ ಒಳಗೆ ಹೀಗೆ ಎರಡು ಸಲ ಪರೀಕ್ಷೆ ನಡೆಸಲಾಗುತ್ತದೆ. ಸ್ತನದ ಸರಿಯಾದ ಸ್ಪಷ್ಟ ಚಿತ್ರಣ ತೆಗೆದುಕೊಳ್ಳಲು ಹೀಗೆ ಮಾಡಲಾಗುತ್ತದೆ.

ಸೋನೋಗ್ರಾಮ್ ಅಥವಾ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್:
ಇದು ಮ್ಯಾಮೊಗ್ರಫಿಯ ಮುಂದುವರಿದ ಅಥವಾ ಪೂರಕ ಪರೀಕ್ಷಾ ವಿಧಾನ. ಮ್ಯಾಮೊಗ್ರಾಮ್ ಪರೀಕ್ಷೆಯಲ್ಲಿ ಅಸಹಜತೆ ಇರುವ ಸಂದೇಹ ಕಂಡುಬಂದಾಗ ಸ್ತನದಲ್ಲಿ ಗೆಡ್ಡೆ ಅಥವಾ ಸಿಸ್ಟ್ ಅಂದರೆ ದ್ರವತುಂಬಿದ ಕೋಶಗಳು ಏನಾದರೂ ಇದೆಯೇ ಎನ್ನುವುದನ್ನು ಖಚಿತಪಡಿಸಿ ಕೊಳ್ಳುವ ಸಲುವಾಗಿ ಇದನ್ನು ಮಾಡಲಾಗುತ್ತದೆ.

ನೀಡಲ್ ಬಯಾಪ್ಸಿ:
ಸೋನೋಗ್ರಫಿಯಲ್ಲಿ ಕ್ಯಾನ್ಸರ್ ಇರುವ ಸಾಧ್ಯತೆ ಕಂಡು ಬಂದಾಗ ಅಂಗಾಂಶ ಪರೀಕ್ಷೆ (ನೀಡಲ್ ಬಯಾಪ್ಸಿ) ಮಾಡಲಾಗುತ್ತದೆ.
ಕ್ಯಾನರ್ ಕಾರಕ ಟಿಷ್ಯೂ ಅಥವಾ ಗೆಡ್ಡೆಯ ಭಾಗದಿಂದ ಒಂದು ಸಣ್ಣ ಮಾದರಿಯನ್ನು ಸೂಜಿಯ ಸಹಾಯದಿಂದ ಹೊರಗೆ ತೆಗೆಯಲಾಗುತ್ತದೆ. ಬಳಿಕ ಪೆಥೊಲಾಜಿಸ್ಟ್’ಗಳು ಅದನ್ನು ಪರೀಕ್ಷಿಸಿ ಕ್ಯಾನ್ಸರ್ ಇದ್ದರೆ ಅದನ್ನು ದೃಡಪಡಿಸುತ್ತಾರೆ.

ಶಸ್ತ್ರಚಿಕಿತ್ಸೆ: ಸ್ತನದ ಕ್ಯಾನ್ಸರ್‍ನ್ನು ಮೊದಲನೇ ಹಂತದಲ್ಲೇ ಪತ್ತೆ ಹಚ್ಚಿ ಶಸ್ತ್ರಚಿಕಿತ್ಸೆ ಮಾಡುವುದರಿಂದ ಸಂಪೂರ್ಣವಾಗಿ ವಾಸಿ ಮಾಡಬಹುದು. ಒಂದು ವೇಳೆ ಕ್ಯಾನ್ಸರ್ ಮುಂದುವರಿದ ಹಂತದಲ್ಲಿ ಇದ್ದರೆ ಶಸ್ತ್ರಚಿಕಿತ್ಸೆ ಜೊತೆಗೆ Chemo therapy ಮತ್ತು ರೇಡಿಯೋ ಥೆರಪಿ ಬೇಕಾಗುತ್ತದೆ. ಆದ್ದರಿಂದ ಇದನ್ನು ಮೊದಲನೇ ಹಂತದಲ್ಲೆ ಕಂಡುಹಿಡಿಯುವುದು ಬಹು ಮುಖ್ಯ.

ಮಾಹಿತಿಗೆ :
ಆಲ್ಟಿಯಸ್ ಹಾಸ್ಪಿಟಲ್:
#915, 1ನೇ ಮಹಡಿ, ಧನುಷ್ ಪ್ಲಾಜಾ,
ಐಡಿಯಲ್ ಹೋಮ್ಸ್ ಟೌನ್‍ಶಿಪ್,
ಗೋಪಾಲನ್ ಮಾಲ್ ಸಮೀಪ,
ರಾಜರಾಜೇಶ್ವರಿನಗರ, ಬೆಂಗಳೂರು.
9663311128/ 080-28606789

ಶಾಖೆ: #6/63, 59ನೇ ಅಡ್ಡರಸ್ತೆ,
4ನೇ ಬ್ಲಾಕ್, ರಾಜಾಜಿನಗರ ಎಂಟ್ರೆನ್ಸ್,
ಎಂ.ಇ.ಐ.ಪಾಲಿಟೆಕ್ನಿಕ್ ಎದುರು,
ರಾಮಮಂದಿರದ ಹತ್ತಿರ, ರಾಜಾಜಿನಗರ,
ಬೆಂಗಳೂರು-10,
9900031842/ 080-23151873

altiushospital@yahoo.com, www.altiushospital.com

Leave a Reply