ಲೋಕಸಭಾ ಚುನಾವಣೆ ಅಖಾಡಕ್ಕೆ ಆರ್‌ಎಸ್‌ಎಸ್ ಎಂಟ್ರಿ! ಹೇಗಿದೆ ಗೊತ್ತಾ ಭರ್ಜರಿ ತಯಾರಿ!

ಡಿಜಿಟಲ್ ಕನ್ನಡ ಟೀಮ್:

ಲೋಕಸಭಾ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ತಯಾರಿ ಆರಂಭಿಸಿದೆ. ಸೋಮವಾರವಷ್ಟೇ ದೇಶದ ಅಧಿಕೃತ ರಾಜಕೀಯ ಪಕ್ಷಗಳ ಸಭೆ ನಡೆಸಿ ಪಕ್ಷಗಳ ಅಹವಾಲು ಆಲಿಸಿದೆ. ಇದರ ಜೊತೆಗೆ ರಾಜಕೀಯ ಪಕ್ಷಗಳೂ ಕೂಡ ತನ್ನದೇ ಆದ ತಂತ್ರಗಾರಿಕೆ ಮತ ಬ್ಯಾಂಕ್ ವೃದ್ಧಿ ಸೇರಿದಂತೆ ಸಾಕಷ್ಟು ಕೆಲಸಗಳನ್ನು ಮಾಡಿಕೊಳ್ಳುತ್ತಿವೆ. ಇದೀಗ ಬಿಜೆಪಿ ಗೆಲುವಿಗೆ ಸಹಕಾರಿಯಾಗಲು ರಾಷ್ಟ್ರೀಯ ಸ್ವಯಂ ಸೇವ ಸಂಘ ಅಣಿಯಾಗಿದೆ. ಮತ್ತೆ ಬಿಜೆಪಿ ನೇತೃತ್ವದಲ್ಲಿ ಅಧಿಕಾರ ಹಿಡಿಯಲು ಆರ್‌ಎಸ್‌ಎಸ್ ತಂತ್ರಗಾರಿಕೆ ರೂಪಿಸಲು ಮುಂದಾಗಿದೆ.

ಮಂಗಳವಾರದಿಂದ ಮೂರು ದಿನಗಳ ಕಾಲ ರಾಯಚೂರಿನಲ್ಲಿ ಆರ್‌ಎಸ್‌ಎಸ್ ಬೈಠಕ್ ಹಾಗೂ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಬಳಿಕ ಎರಡು ದಿನ ಮಂತ್ರಾಲಯದಲ್ಲಿ ಆರ್‌ಎಸ್‌ಎದ್ ಬೈಠಕ್ ನಡೆಯಲಿದೆ. ಈಗಾಗಲೇ ರಾಯಚೂರಿಗೆ ಆಗಮಿಸಿರುವ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಲೆಕ್ಕಾಚಾರ ಶುರು ಮಾಡಿದ್ದಾರೆ.

ದೆಹಲಿಯಿಂದ ರಾಜಧಾನಿ ಎಕ್ಸ್‌ಪ್ರೇಸ್ ರೈಲಿನಲ್ಲಿ ರಾಯಚೂರಿಗೆ ಆಗಮಿಸಿದ ಮೋಹನ್ ಭಾಗವತ್, ಲಾಲ್ ಜೀ ಪಟೇಲ್ ಮನೆಯಲ್ಲಿ ತಂಗಿದ್ದು, ಕಾರ್ಯಕಾರಿಣಿ ಮುಕ್ತಾಯವಾಗುವ ತನಕ ಇದೇ ಮನೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಉತ್ತರ ಭಾರತ ಮೂಲದ ಉದ್ಯಮಿ ಆಗಿರುವ ಲಾಲ್ ಜೀ, ರಾಯಚೂರಿನಲ್ಲಿ ವ್ಯಾಪಾರಸ್ಥರಾಗಿದ್ದು, ಆರ್‌ಎಸ್‌ಎಸ್‌ನಲ್ಲಿ ಸಕ್ರಿಯವಾಗಿದ್ದಾರೆ.

ಸೆಪ್ಟೆಂಬರ್ 1 ರಿಂದ ಮಂತ್ರಾಲಯದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಆರ್‌ಎಸ್‌ಎಸ್ ಬೈಠಕ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೂಡ ಭಾಗಿಯಾಗಲಿದ್ದು, ಬಿಜೆಪಿ‌ ಮತಬ್ಯಾಂಕ್ ಸ್ಟ್ರಾಂಗ್ ಮಾಡುವ ಬಗ್ಗೆ ಸ್ವಯಂ ಸೇವಕರ ಜೊತೆ ಚರ್ಚಿಸಲಿದ್ದಾರೆ. ಮಂತ್ರಾಲಯದ ತಿರುಮಲ ವಸತಿ ಗೃಹದಲ್ಲಿ ನಡೆಯಲಿರುವ ಬೈಠಕ್‌ನಲ್ಲಿ ಸುಮಾರು 300 ಜನ ವಿವಿಧ ಹಿಂದು ಪರ ಸಂಘಟನೆಗಳ ಮುಖ್ಯಸ್ಥರು ಭಾಗಿಯಾಗಲಿದ್ದಾರೆ. ಸಂಘ ಪರಿವಾರದ ಅಭಿವೃದ್ಧಿ ಕೆಲಸಗಳು ಹಾಗೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಾಡಬೇಕಿರುವ ಯೋಜನೆಗಳನ್ನು ವಿವಿಧ ಸಂಘಗಳ ಮುಖ್ಯಸ್ಥರಿಗೆ ತಿಳಿಸಲಿದ್ದಾರೆ.

ಹಿಂದುತ್ವವೇ ಬಿಜೆಪಿಯ ಜೀವಾಳವಾಗಿದ್ದು, ತನ್ನೆಲ್ಲಾ ತಂತ್ರಗಾರಿಯನ್ನು ಲೋಕಸಭಾ ಚುನಾವಣೆಯಲ್ಲಿ ಬಳಕೆ ಮಾಡ್ತಿದೆ. ಕೇವಲ ಆರ್‌ಎಸ್‌ಎಸ್, ವಿಶ್ವ ಹಿಂದೂ ಪರಿಷತ್, ಅಖಿಲ ಭಾರತ ವಿದ್ಯರ್ಥಿ ಪರಿಷತ್ ಮಾತ್ರವಲ್ಲದೆ, ಸಣ್ಣ ಸಣ್ಣ ಹಿಂದೂಪರ ಸಂಘಟನೆಗಳು, ದೇವಸ್ಥಾನ ಮೇಲ್ವಿಚಾರಣಾ ಸಮಿತಿ ಸೇರಿದಂತೆ ಸಾಕಷ್ಟು ಬೇರು ಮಟ್ಟದಿಂದ ಮತ ಸೆಳೆಯಲು ನಿರ್ಧರಿಸಿದೆ. ಅದಕ್ಕಾಗಿಯೇ ಮಂತ್ರಾಲಯದಲ್ಲಿ ಬೈಠಕ್ ನಡೆಸುತ್ತಿದ್ದು, ಆ ಬಳಿಕ ದೇಶದ ಇತರೇ ದೇವಸ್ಥಾನಗಳಲ್ಲಿ ಇದೇ ರೀತಿಯ ಕಾರ್ಯಕ್ರಮ ರೂಪಿಸಲಿದೆ ಎಂಬ ಮಾಹಿತಿ ಬಂದಿವೆ.

Leave a Reply