ಜನಪ್ರಿಯ ಯೋಜನೆಗಳೇ ಕುಮಾರಸ್ವಾಮಿ ಸರ್ಕಾರಕ್ಕೆ ಕಂಟಕವಾಗುತ್ತಿವೆಯೇ?

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ಕಂಟಕ ಎದುರಾಗಿದೆ. ಕುಮಾರಸ್ವಾಮಿ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ತೆರೆಹಿಂದೆ ಯೋಜನೆ ಸಿದ್ಧವಾಗ್ತಿದೆ. ಯಾವುದೇ ಪಕ್ಷಕ್ಕೆ ನಿಖರ ಬಹುಮತ ಬಾರದೇ ಇದ್ದಾಗ, ಬೇಷರತ್ ಬೆಂಬಲ ಘೋಷಣೆ ಮಾಡಿದ್ದ ಕಾಂಗ್ರೆಸ್ ನಲ್ಲಿ ಇದೀಗ ಬೆಂಬಲವನ್ನು ವಾಪಸ್ ಪಡೆಯಲು ಪ್ರಯತ್ನ ನಡೆಯುತ್ತಿದೆ. ಕಾಂಗ್ರೆಸ್‌ನಲ್ಲೇ ಒಂದು ಬಣ ಬೆಂಬಲ ಕೊಡಲು ಮುಂದಾಗಿದ್ದರೂ ಮತ್ತೊಂದು ತಂಡ ಏನಾದರೂ ಆಗಲಿ ಸರ್ಕಾರ ಬೀಳಿಸಿಯೇ ಸಿದ್ಧ ಎಂದು ಪಣತೊಟ್ಟಿದೆ. ಕುಮಾರಸ್ವಾಮಿ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸಲು ಪ್ರಮುಖ ಕಾರಣ ಜನಪ್ರಿಯ ಯೋಜನೆಗಳು ಅನ್ನೋದು ಗೊತ್ತಾಗಿದೆ.

ಕುಮಾರಸ್ವಾಮಿ ಚುನಾವಣೆಗೂ ಮುನ್ನವೇ ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡಿದ್ರು.. ಅದರಲ್ಲೂ ರೈತರ ಸಂಪೂರ್ಣ ಸಾಲಮನ್ನಾ, ಗರ್ಭಿಣಿಯರಿಗೆ ಮಾಸಿಕ ಆರು ಸಾವಿರ ಸಹಾಯಧನ, ವೃದ್ಧಾಪ್ಯ ವೇತನ ಹೆಚ್ಚಳ ಸೇರಿದಂತೆ ಪ್ರಣಾಳಿಕೆ ತುಂಬಾ ಜನರಿಗೆ ಮೆಚ್ಚುಗೆಯಾಗುವಂತಹ ಯೋಜನೆಗಳನ್ನೇ ಪ್ರಕಟಿಸಿದ್ರು. ಜನರು ಪ್ರಣಾಳಿಕೆಯನ್ನು ಮೆಚ್ಚಿಕೊಂಡರೂ ಮತ ಹಾಕಲಿಲ್ಲ. ಕುಮಾರಸ್ವಾಮಿ ಸ್ವಂತ ಬಲದಲ್ಲಿ‌ ಅಧಿಕಾರಕ್ಕೆ ಬರಲೂ ಇಲ್ಲ. ಒಂದು ವೇಳೆ ಯಾವುದೇ ಪಕ್ಷಕ್ಕೆ ಬಹುಮತ ಬಾರದೇ ಹೋದಲ್ಲಿ, ರೈತರ ಸಾಲಮನ್ನಾ ಮಾಡಲು ಯಾರು ಒಪ್ಪಿಕೊಳ್ತಾರೋ ಅವರಿಗೆ ನಾವು ಬೆಂಬಲ ಕೊಡ್ತೇವೆ ಅಂತಾ ಚುನಾವಣಾ ಪೂರ್ವದಲ್ಲೇ ಕುಮಾರಸ್ವಾಮಿ ಘೋಷಣೆ ಮಾಡಿದ್ರು. ಆದ್ರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕುಮಾರಸ್ವಾಮಿಯೇ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ರು. ಇದೀಗ ಜೆಡಿಎಸ್ ಪ್ರಣಾಳಿಕೆಯ ಒಂದೊಂದೇ ಕಾರ್ಯಕ್ರಮಗಳ ಜಾರಿ ಆಗ್ತಿವೆ.

ಮೊದಲಿಗೆ ಸಹಕಾರ ಸಂಘದ ಸಾಲ ಮನ್ನಾ, ಬಳಿಕ ರಾಷ್ಟ್ರೀಯ ಬ್ಯಾಂಕ್‌ನ ಸಾಲಮನ್ನಾ, ಗರ್ಭಿಣಿಯರಿಗೆ ಸಹಾಯಧನ, ಇದೀಗ ಕೈಸಾಲ ಮನ್ನಾ ಮಾಡಲು ಸುಗ್ರೀವಾಜ್ಞೆ ಮೂಲಕ ಕಾನೂನು ತಿದ್ದುಪಡಿಗೆ ನಿರ್ಧಾರ ಹೀಗೆ ಒಂದೊಂದೇ ಕಾರ್ಯಕ್ರಮಗಳನ್ನು ಕುಮಾರಸ್ವಾಮಿ ಜಾರಿ ಮಾಡುತ್ತಿದ್ದು, ರಾಜ್ಯದಲ್ಲಿ ಕುಮಾರಸ್ವಾಮಿ ನಿರ್ಧಾರವನ್ನು ಜನರು ಸ್ವಾಗತ ಮಾಡುತ್ತಾ ಹೋಗ್ತಿದ್ದಾರೆ. ಇದರಿಂದ ಮೈತ್ರಿ ಪಕ್ಷದ ನಾಯಕರಲ್ಲಿ ತಳಮಳ ಶುರುವಾಗಿದ್ದು, ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಕಷ್ಟ ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ. ಕುಮಾರಸ್ವಾಮಿ ಓಟಕ್ಕೆ ಬ್ರೇಕ್ ಹಾಕಬೇಕು, ಇಲ್ಲದಿದ್ರೆ ಸರ್ಕಾರವನ್ನು ಉರುಳಿಸಿ ಮತ್ತೊಮ್ಮೆ ಬಿಜೆಪಿ ಬೆಂಬಲಿಸಬೇಕು ಎಂದು ಕಾಂಗ್ರೆಸ್‌ನ ಸಿದ್ದರಾಮಯ್ಯ ಬಣ ನಿರ್ಧರಿಸಿದೆ ಎನ್ನಲಾಗಿದೆ. ಈ ಎಲ್ಲ ಪ್ರಯತ್ನಗಳಿಗೆ ಕುಮಾರಸ್ವಾಮಿ ಯಾವ ರೀತಿ ಕೌಂಟರ್ ಕೊಡ್ತಾರೆ ಕಾದು ನೋಡ್ಬೇಕು.

Leave a Reply