ಮಾಜಿ ಸಿಎಂ ಸಿದ್ದರಾಮಯ್ಯಗೆ ಸರ್ಕಾರದ ಮೇಲೆ ಕೋಪವೇಕೆ?

ಡಿಜಿಟಲ್ ಕನ್ನಡ ಟೀಮ್:

ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊಂದಿದ್ದಾರೆ. ಇದನ್ನು ಸಿದ್ದರಾಮಯ್ಯ ಇಲ್ಲಾ ಎಂದು ಹೇಳಿದರೂ ಅವರ ಮಾತುಗಳಲ್ಲೇ ಎಲ್ಲರಿಗೂ ಅರ್ಥವಾಗ್ತಿದೆ. ಇದೀಗ ಯೂರೋಪ್ ಪ್ರವಾಸದ ನೆಪದಲ್ಲಿ ರಾಜಕೀಯ ಲೆಕ್ಕಾಚಾರ ಹಾಕಲು ತೆರಳುತ್ತಿದ್ದಾರೆ ಅನ್ನೋ ಮಾತುಗಳೂ ಕೂಡ ಕೇಳಿಬರುತ್ತಿವೆ. ಅದಕ್ಕೆ ಸಾಕ್ಷಿ ಎಂಬಂತೆ ಸಿದ್ದರಾಮಯ್ಯ ಜೊತೆ ವಿದೇಶ ಪ್ರವಾಸ ಕೈಗೊಳ್ಳುವವರ ಪಟ್ಟಿಯೂ ಬೆಳೆಯುತ್ತಿದೆ. ಹತ್ತಾರು ಜನ ಶಾಸಕರು ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರ ಜೊತೆ ಸಿದ್ದರಾಮಯ್ಯ ಪ್ರವಾಸ ಬೆಳೆಸುತ್ತಿದ್ದು, ಮುಂದಿನ ರಾಜಕೀಯ ನಡೆ ಬಗ್ಗೆ ಯೋಜನೆ ರೂಪಿಸಲಿದ್ದಾರೆ ಎನ್ನಲಾಗಿದೆ.

ರಾಜ್ಯ ಸರ್ಕಾರದಲ್ಲಿ ಸಿದ್ದರಾಮಯ್ಯ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಸಿಗುತ್ತಿಲ್ಲ ಅನ್ನೋದು ಸಿದ್ದರಾಮಯ್ಯ ಬೆಂಬಲಿಗರ ಅರೋಪ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ವಿಶ್ವವಿದ್ಯಾಲಯಕ್ಕೆ ಮಾಡಿದ್ದ ನೇಮಕಾತಿನ್ನು ಕುಮಾರಸ್ವಾಮಿ ಸರ್ಕಾರ ರದ್ದು ಮಾಡಿದ್ದು, ಕುರುಬ ಸಮಾಜದ ಮುಖಂಡರಾದ ಹೆಚ್. ವಿಶ್ವನಾಥ್ ಅವರನ್ನು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಮೂಲಕ ಕುರುಬ ಸಮಾಜದ ಮೇಲೆ ಹಿಡಿತ ಹೊಂದಿದ್ದ ಸಿದ್ದರಾಮಯ್ಯ ಅವರ ಶಕ್ತಿ ಕುಂದಿಸುವ ಕೆಲಸ ಮಾಡಿದ್ದು, ಮಾಜಿ ಸಿಎಂ ಕಣ್ಣನ್ನು ಕೆಂಪಾಗಿಸಿದೆ. ಇಷ್ಟೇ ಅಲ್ಲದೆ ವಿಶ್ವನಾಥ್ ಅವರನ್ನು ಸಮನ್ವಯ ಸಮಿತಿ ಸದಸ್ಯರನ್ನಾಗಿ ಮಾಡಬೇಕು ಅನ್ನೋದು ಜೆಡಿಎಸ್ ಆಗ್ರಹ ಕೂಡ ಆಗಿದೆ. ಇದೇ ರೀತಿ ಕಾಂಗ್ರೆಸ್ ಅಧ್ಯಕ್ಷರ ದಿನೇಶ್ ಗುಂಡೂರಾವ್ ಅವರನ್ನೂ ಸದಸ್ಯರನ್ನಾಗಿ ಮಾಡುವಂತೆ ಆಗ್ರಹ ಮಾಡಿದೆ. ಇದೂ ಕೂಡ ಕುಮಾರಸ್ವಾಮಿ ವಿರುದ್ಧ ಸಿದ್ದರಾಮಯ್ಯ ಕೋಪಗೊಳ್ಳಲು ಪ್ರಮುಖ ಕಾರಣವಾಗಿದೆ.

ಹೀಗೆ ಸರ್ಕಾರದಲ್ಲಿ ಜೆಡಿಎಸ್ ನ ಪ್ರತಿ ನಡೆಯೂ ಸಿದ್ದರಾಮಯ್ಯ ಅವರ ಹಿಡಿತ ಸಡಿಲವಾಗುವಂತೆ ಮಾಡುತ್ತಿದೆ. ಪರಿಣಾಮ ಸಿದ್ದರಾಮಯ್ಯ ಹಾಗೂ ಬೆಂಬಲಿಗರು ಮಾಧ್ಯಮಗಳ ಮುಂದೆ ಬಂದು ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿ ನಂತರ ತಮ್ಮ ಹೇಳಿಕೆಗೆ ಬೇರೆಯದೇ ಸಮರ್ಥನೆ ನೀಡುತ್ತಿದ್ದಾರೆ.

Leave a Reply