ಡಿಜಿಟಲ್ ಕನ್ನಡ ಟೀಮ್:
ಜೆಡಿಎಸ್-ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದ್ದು, ಸಿಎಂ ಕುಮಾರಸ್ವಾಮಿ ಮೈತ್ರಿ ಪಕ್ಷದವರಿಂದಲೇ ಮುಜುಗರ ಅನುಭವಿಸುತ್ತಿರೋದು ಎಲ್ಲರಿಗೂ ಗೊತ್ತಿರೋ ವಿಚಾರ. ಇದೇ ಕಾರಣಕ್ಕೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ನಿನ್ನೆ ಭೇಟಿ ಮಾಡಿ ಖಡಕ್ ಮಾತುಗಳನ್ನು ಆಡಿದ್ದಾರೆ ಎನ್ನಲಾಗಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಉದ್ದೇಶಕ್ಕೆ ನಮಗೆ ಅಧಿಕಾರ ನೀಡಿದ್ದೀರಿ. ಆದ್ರೆ ರಾಜ್ಯದಲ್ಲಿ ನಿಮ್ಮದೇ ಪಕ್ಷದ ನಾಯಕರು ಮನಸ್ಸಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ಸರ್ಕಾರ ಯಾವಾಗ ಬೇಕಾದರೂ ಬಿದ್ದು ಹೋಗಬಹುದು ಅನ್ನೋ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಅವರನ್ನು ಕಂಟ್ರೋಲ್ ಮಾಡಿ, ಇಲ್ಲದಿದ್ರೆ ಈ ಸರ್ಕಾರ ಯಾವಾಗ ಬೇಕಿದ್ರು ಬೀಳಬಹುದು. ಆಗ ಜೆಡಿಎಸ್ ಅನ್ನು ದೂರಬಾರದು, ಇರುವ ವಿಚಾರವನ್ನು ಹೇಳಿದ್ದೇನೆ ಎಂದಿದ್ದಾರೆಂದು ಗೊತ್ತಾಗಿದೆ.
ಕುಮಾರಸ್ವಾಮಿ ಮಾತು ಕೇಳಿ ಗಲಿಬಿಲಿಗೊಂಡ ರಾಹುಲ್ ಗಾಂಧಿ, ಸಿದ್ದರಾಮಯ್ಯನವರ ಮನವೊಲಿಸಲು ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್ಗೆ ಸೂಚಿಸಿದ್ದಾರೆ. ಆದರೆ ಇಷ್ಟಕ್ಕೆ ಸುಮ್ಮನಾಗದ ಕುಮಾರಸ್ವಾಮಿ, ವಿನಾಕಾರಣ ಭಿನ್ನಮತದ ಕಿಡಿ ಹಚ್ಚಲಾಗುತ್ತಿದೆ. ಸಿದ್ದರಾಮಯ್ಯ ವಿದೇಶ ಪ್ರವಾಸ ಮಾಡ್ತಿರೋದು ಸರ್ಕಾರ ಉರುಳಿಸುವ ಯೋಜನೆ ರೂಪಿಸಲೆಂದೇ ಅನ್ನೋ ಮಾತುಗಳೂ ಕೇಳಿ ಬಂದಿವೆ. ಸಿದ್ದರಾಮಯ್ಯ ಬೆಂಬಲಿಗರು ಬಿಜೆಪಿ ನಾಯಕರ ಸಂಪರ್ಕದಲ್ಲಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ ಎಂದೂ ದೂರಿದ್ದಾರೆ. ಇದರಿಂದ ಕುಪಿತಗೊಂಡ ರಾಹುಲ್ ಗಾಂಧಿ ಸಿದ್ದರಾಮಯ್ಯ ಅವರಿಗೆ ತಾವೇ ಕರೆ ಮಾಡಿದ್ದಾರೆ. ವಿದೇಶ ಪ್ರವಾಸಕ್ಕೆ ತೆರಳುವ ಮೊದಲು ಎಲ್ಲಾ ಭಿನ್ನಮತ ಚಟುವಟಿಕೆಗಳಿಗೆ ಮಂಗಳ ಹಾಡಬೇಕು, ತಮ್ಮ ಬೆಂಬಲಿಗರನ್ನು ಸಮಾಧಾನ ಮಾಡಬೇಕು, ಸರ್ಕಾರಕ್ಕೆ ಯಾವುದೇ ಅಡ್ಡಿ ಎದುರಾಗದಂತೆ ನೋಡಿಕೊಳ್ಳುವ ಕೆಲಸ ನಿಮ್ಮದು ಎಂದು ಸೂಚನೆ ನೀಡಿದ್ದಾರಂತೆ.
ಭಿನ್ನಮತದ ದಾಳ ಉರುಳಿಸುತ್ತಿರೋ ಸಿದ್ದರಾಮಯ್ಯ ಅವರಿಗೇ ಭಿನ್ನಮತ ನಿವಾರಣೆ ಜವಾಬ್ದಾರಿಯನ್ನು ರಾಹುಲ್ ಗಾಂಧಿ ವಹಿಸಿರೋದು, ಕಳ್ಳನ ಕೈಗೆ ಬೀಗದ ಕೈ ಕೊಟ್ಟಂತೆ ಆಗಿದೆ. ಇದು ಒಂದು ರೀತಿಯ ರಾಜಕೀಯ ದಾಳವೂ ಹೌದು, ಯಾಕಂದ್ರೆ ಕಳ್ಳತನ ನೋಡಿಯೂ ಸುಮ್ಮನಾದರೆ ಕಳ್ಳ ಕಳವು ಮಾಡುತ್ತಲೇ ಇರುತ್ತಾನೆ, ಕಳ್ಳತನ ಆಗುತ್ತೆ ಅನ್ನೋದು ಗೊತ್ತಾದ ಕೂಡಲೇ ಕಳ್ಳನನ್ನು ಕರೆದು ಕಳವು ಆಗದಂತೆ ನೋಡಿಕೋ ಅನ್ನೋ ಜವಾಬ್ದಾರಿ ಕೊಟ್ಟಾಗ ಕಳ್ಳತನ ತಡೆಯಬಹುದು ಅನ್ನೋದು ರಾಹುಲ್ ಗಾಂಧಿ ತಂತ್ರಗಾರಿಕೆ. ಆದ್ರೆ ಸರ್ಕಾರದಲ್ಲಿ ಸಮನ್ವಯತೆ ಕಾಪಾಡುವ ಸಮಿತಿ ಅಧ್ಯಕ್ಷರಾಗಿರೋ ಸಿದ್ದರಾಮಯ್ಯನವರಿಗೆ ಕೆಲವೊಂದು ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳಬೇಕೆಂಬ ಬಯಕೆ. ಆದರೆ ಅದಕ್ಕೆ ಆಸ್ಪದವಾಗುತ್ತಿಲ್ಲ. ತಮ್ಮ ಮಾತನ್ನು ಸಿಎಂ ಕೇಳಲಿಲ್ಲ ಎಂದರೆ ತೆರೆಮರೆಯ ಭಿನ್ನಮತಕ್ಕೆ ಅಂಕುಶ ಬೀಳುವುದಿಲ್ಲ. ಸಿದ್ದರಾಮಯ್ಯ ಅವರನ್ನು ನಿರ್ಲಕ್ಷ್ಯ ಮಾಡಿ ಲೋಕಸಭೆ ಚುನಾವಣೆ ಎದುರಿಸಲು ಕಾಂಗ್ರೆಸ್ ಹೈಕಮಾಂಡ್ಗೂ ಧೈರ್ಯವಿಲ್ಲ. ಹೀಗಾಗಿ ಸರ್ಕಾರ ಇದೇ ರೀತಿ ಹಗ್ಗಜಗ್ಗಾಟದಲ್ಲೇ ಸಾಗೋದು ಅನಿವಾರ್ಯವಾಗಿದೆ.