ಸಮನ್ವಯ ಸಮಿತಿ ಸಭೆಯಲ್ಲಿ ಏನೇನಾಯ್ತು?

ಡಿಜಿಟಲ್ ಕನ್ನಡ ಟೀಮ್:

ಎರಡು ತಿಂಗಳಿಂದ ಸಮನ್ವಯ ಸಮಿತಿ ಸಭೆ ನಡೆದಿಲ್ಲ, ಕಾಂಗ್ರೆಸ್​ ಜೆಡಿಎಸ್​ ನಡುವೆ ಹೊಂದಾಣಿಕೆಯಿಲ್ಲ ಅನ್ನೋ ಬಗ್ಗೆ ಸಾಕಷ್ಟು ಗಾಸಿಪ್​ಗಳು ಓಡಾಡ್ತಿದ್ವು. ಮಾಧ್ಯಮಗಳಲ್ಲೂ ಬಿಸಿಬಿಸಿ ಚರ್ಚೆ ನಡೆದಿತ್ತು.. ಕೊನೆಗೂ ಶುಕ್ರವಾರ ಕುಮಾರಕೃಪಾ ಗೆಸ್ಟ್​ಹೌಸ್​ನಲ್ಲಿ ಸಭೆ ನಡೀತು. ಸಭೆ ಬಳಿಕ ಮಾತನಾಡಿದ ಸಮನ್ವಯ ಸಮಿತಿ ಅಧ್ಯಕ್ಷ ಹಾಗು ಮಾಜಿ ಸಿಎಂ ಸಿದ್ದರಾಮಯ್ಯ, ಮೈತ್ರಿ ಸರ್ಕಾರದಲ್ಲಿ ಯಾವುದೇ ಭಿನ್ನಮತಗಳಿಲ್ಲ, ಮೈತ್ರಿ ಸರ್ಕಾರ ಸಂಪೂರ್ಣ 5 ವರ್ಷ ಪೂರೈಸಲಿದೆ ಎಂದಿದ್ದಾರೆ. ಕಾಂಗ್ರೆಸ್​, ಜೆಡಿಎಸ್​ ನಾಯಕರಲ್ಲಿ ಭಿನ್ನಾಭಿಪ್ರಾಯ ಇಲ್ಲ, ಸಮನ್ವಯ ಸಮಿತಿಗೆ ಎರಡೂ ಪಕ್ಷಗಳ ಅಧ್ಯಕ್ಷರ ಸೇರ್ಪಡೆ ಸದ್ಯಕ್ಕಿಲ್ಲ, ಅದನ್ನು ಕೇಂದ್ರ ನಾಯಕರು ನಿರ್ಧರಿಸಲಿದ್ದಾರೆ ಎಂದಿರುವ ಅವರು, ಸೆಪ್ಟೆಂಬರ್ 3ನೇ ವಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇವೆ, ಕಾಂಗ್ರೆಸ್​ ಪಾಲಿನ ಆರೂ ಸ್ಥಾನಗಳನ್ನು ಭರ್ತಿ ಮಾಡಲು ಸಮನ್ವಯ ಸಮಿತಿ ನಿರ್ಧರಿಸಿದೆ ಎಂದಿದ್ದಾರೆ.

ಅನ್ನಭಾಗ್ಯ ಅಕ್ಕಿಗೆ ರಾಜ್ಯ ಸರ್ಕಾರ ಕತ್ತರಿ ಪ್ರಯೋಗ ಮಾಡಲು ಮುಂದಾಗಿದೆ ಅನ್ನೋ ಸುದ್ದಿ ಬಗ್ಗೆಯೂ ಸಮನ್ವಯ ಸಮಿತಿ ಸಭೆಯಲ್ಲಿ ಬಿಸಿಬಿಸಿ ಚರ್ಚೆಯಾಗಿದೆ. ಈ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಅನ್ನಭಾಗ್ಯದ ಅಕ್ಕಿಗೆ ಕತ್ತರಿ ಹಾಕೋ ಪ್ರಶ್ನೆಯೇ ಇಲ್ಲ, ಅನ್ನಭಾಗ್ಯದಡಿ ಪ್ರತಿ ಸದಸ್ಯರಿಗೆ 7 ಕೆಜಿ ಅಕ್ಕಿ ನೀಡುವುದು ನಿಶ್ಚಿತ ಎಂದಿದ್ದಾರೆ. ಸಮನ್ವಯ ಸಮಿತಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರವಾಗಿದ್ದು, ಹಿಂದಿನ ಸರ್ಕಾರದ ಜನಪ್ರಿಯ ಯೋಜನೆಗಳು ಮುಂದುವರಿಕೆ ಮಾಡಲಿದೆ ಎಂದಿದ್ದಾರೆ. ಕಾಂಗ್ರೆಸ್​ ಸರ್ಕಾರದ ಜನಪ್ರಿಯ ಯೋಜನೆಗಳ ಬಗ್ಗೆ ಊಹಾಪೋಹ ಬೇಡ ಅಂತಾನೂ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ಸಭೆಗೂ ಮೊದಲು ಕುಮಾರ ಕೃಪಾ ಅತಿಥಿ ಗೃಹಕ್ಕೆ ಆಗಮಿಸಿದ, ಸಮನ್ವಯ ಸಮಿತಿ ಸಭೆಗೆ ಅಧ್ಯಕ್ಷರಾದ ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿ, ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್​, ಡಿಸಿಎಂ ಡಾ.ಜಿ. ಪರಮೇಶ್ವರ್ ಹಾಗೂ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ ಪರಸ್ಪರ ಹಸ್ತಲಾಘವ ಮಾಡಿದ್ರು. 100 ದಿನ ಪೂರೈಸಿದ್ದಕ್ಕೆ ಸಿದ್ದರಾಮಯ್ಯ ಕುಮಾರಸ್ವಾಮಿಗೆ ಶುಭಾಶಯ ತಿಳಿಸಿದ್ರು. ಈ ವೇಳೆ ಮಾಧ್ಯಮಗಳತ್ತ ನೋಡಿದ ಸಿಎಂ ಈಗಲಾದರೂ ಗಟ್ಟಿಯಾಗಿದ್ದೇವೆ ಎಂದು ಒಪ್ಪಿಕೊಳ್ತೀರಾ ಎಂದು ಪ್ರಶ್ನಿಸಿದ್ರು. ಈ ವೇಳೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್​, ನಾವೆಲ್ಲಾ ಒಂದೇ ಎಂದು ಹೇಳುತ್ತಾ ಒಗ್ಗಟ್ಟು ಪ್ರದರ್ಶನ ಮಾಡಿದ್ರು.

ಒಟ್ಟಾರೆ ಸಮನ್ವಯ ಸಮಿತಿ ಸಭೆ ಬಳಿಕ ಸರ್ಕಾರಕ್ಕೆ ಮರುಜೀವ ಬಂದಿದೆ. ಇದು ಎಲ್ಲಿವರೆಗೂ ಇರುತ್ತೇ ಅನ್ನೋದು ಮಾತ್ರ ಅನುಮಾನ. ಯಾಕಂದ್ರೆ ಜೋಡಿ ಎತ್ತಿನ ಗಾಡಿ ಈ ಮೈತ್ರಿ ಸರ್ಕಾರ, ಒಂದು ಆ ಕಡೆ ಎಳೆದು ಇನ್ನೊಂದು ಈ ಕಡೆ ಎಳೆದ್ರೆ ಮುಂದೆ ಸಾಗುತ್ತಿರುವ ಜೋಡಿ ಎತ್ತಿನ ಬಂಡಿ ಹಳಿ ತಪ್ಪೋದು ಸಾಮಾನ್ಯ.

Leave a Reply