ಬೀದಿನಾಯಿ ದಾಳಿ, ವೈದ್ಯರ ನಿರ್ಲಕ್ಷ್ಯ; ಹುಟ್ಟುಹಬ್ಬದ ದಿನದಂದೇ ಅಮಾಯಕ ಹಸುಳೆ ಬಲಿ

ಡಿಜಿಟಲ್ ಕನ್ನಡ ಟೀಮ್:

‘ವೈದ್ಯೋ ನಾರಾಯಣೋ ಹರಿಃ’ ಎಂಬುದು ಕೇವಲ ಮಾತಿಗೆ ಸೀಮಿತ ಅನ್ನೋದು ಬೀದಿನಾಯಿಗಳ ಮಾರಣಾಂತಿಕ ದಾಳಿಗೆ ಒಳಗಾದ ಹಸುಳೆ ವೈದ್ಯರ ನಿರ್ಲಕ್ಷ್ಯಕ್ಕೆ ಬಲಿ ಆಗಿರುವುದರ ಮೂಲಕ ಮತ್ತೊಮ್ಮೆ ಸಾಬೀತಾಗಿದೆ.

ಬೆಂಗಳೂರಿನ ಚಿಕ್ಕಲಸಂದ್ರದಲ್ಲಿ ಶನಿವಾರ ಬೆಳಗ್ಗೆ ತನ್ನ ಮೂರನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಪುಟ್ಟ ಹೆಣ್ಣುಮಗು ನೆರೆಮನೆಯ ಗೆಳತಿಗೆ ಚಾಕ್ ಲೆಟ್ ನೀಡಲು ಹೋದಾಗ ಬೀದಿನಾಯಿಯ ರಕ್ಕಸದಾಳಿಗೆ ಒಳಗಾಗಿದ್ದಾಳೆ. ಕುತ್ತಿಗೆಯ ಮಾಂಸಖಂಡ ಕಿತ್ತುಬಂದ ಮಗುವನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದ ಮಗುವಿಗೆ ಹಣ ಕಟ್ಟಲಿಲ್ಲ ಎಂಬ ಕಾರಣಕ್ಕೆ ವೈದ್ಯರು ಚಿಕಿತ್ಸೆ ಕೊಡದಿದ್ದು, ಮಗು ಮೃತಪಟ್ಟಿದೆ.

ಏನಿದು ಪ್ರಕರಣ?

ಚಿಕ್ಕಲಸಂದ್ರದ ನಿವಾಸಿ ಆಟೋ ಚಾಲಕ ರವಿ ಎಂಬುವವರ 3 ವರ್ಷದ ಹೆಣ್ಣು ಮಗು ಅಂಬಿಕಾಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಹುಟ್ಟುಹಬ್ಬಕ್ಕೆ ಅಕ್ಕಪಕ್ಕದ ಮನೆಯವರಿಗೆ ಚಾಕ್ಲೆಟ್ ಹಂಚಲು ಹೋದ ಮಗು ಮೇಲೆ ನಾಲ್ಕೈದು ಬೀದಿ ನಾಯಿಗಳು ದಾಳಿ ಮಾಡಿದ್ದು, ಮಗುವಿನ ಕುತ್ತಿಗೆ ಭಾಗಕ್ಕೆ ಕಚ್ಚಿವೆ. ಪರಿಣಾಮ ಮಗುವಿನ ಕುತ್ತಿಗೆ ಭಾಗದ ಮಾಂಸ ಹೊರ ಬಂದು ಪರಿಸ್ಥಿತಿ ಗಂಭೀರವಾಗಿದೆ.

ತಕ್ಷಣ ಆಕೆಯನ್ನು ತಂದೆ ರವಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಮಗುವಿಗೆ ಚಿಕಿತ್ಸೆ ನೀಡಲು ₹5800 ಕಟ್ಟುವಂತೆ ಹೇಳಿದ್ದಾರೆ. ಆ ಕ್ಷಣಕ್ಕೆ ತಮ್ಮ ಬಳಿ ಹಣವಿಲ್ಲ. ಅದನ್ನು ಸಂಜೆ ವೇಳೆಗೆ ಹೊಂದಿಸಿಕೊಂಡು ಬಂದು ಕಟ್ಟುವುದಾಗಿ ಹೇಳಿದರೂ ಸಿಬ್ಬಂದಿ ಮಾತ್ರ ಹಣ ಪಾವತಿ ಮಾಡುವವರೆಗೂ ಚಿಕಿತ್ಸೆ ನೀಡಲಾಗದು ಎಂದು ಖಡಾಖಂಡಿತವಾಗಿ ನಿರಾಕರಿಸಿದ್ದಾರೆ. ಸೂಕ್ತ ಸಂದರ್ಭದಲ್ಲಿ ಚಿಕಿತ್ಸೆ ಸಿಗದ ಪರಿಣಾಮ ಮಗು ಮೃತಪಟ್ಟಿದೆ.

ರವಿ ದಂಪತಿಗೆ ಮದುವೆಯಾದ ಹತ್ತು ವರ್ಷಗಳ ನಂತರ ಅಂಬಿಕಾ ಜನಿಸಿದ್ದಳು. ಇಂದು ಅವರ ಮನೆಯಲ್ಲಿ ಆಕೆಯ ಹುಟ್ಟುಹಬ್ಬದ ಸಂಭ್ರಮವಿತ್ತು. ಆದರೆ ಬೀದಿ ನಾಯಿಗಳ ದಾಳಿ ಹಾಗೂ ವೈದ್ಯರ ಹಣದ ದಾಹ ಮಗುವನ್ನು ಬಲಿ ಪಡೆದಿದ್ದು, ಮನೆಯಲ್ಲಿ ಶೋಕ ಮಡುಗಟ್ಟಿದೆ.

ಆಸ್ಪತ್ರೆ ಸಿಬ್ಬಂದಿ ತಕ್ಷಣ ಚಿಕಿತ್ಸೆ ನೀಡಿದಿದ್ದರೆ ಮುಗ್ಧ ಮಗುವಿನ ಪ್ರಾಣ ಉಳಿಯುತ್ತಿತ್ತು. ಆದರೆ ಅವರಿಗೆ ₹5800ಯೇ ಹೆಚ್ಚಾಗಿದ್ದು, ಅವರ ಅಮಾನವೀಯ ವರ್ತನೆಗೆ ಅಮಾಯಕ ಜೀವ ಹಾರಿಹೋಗಿದೆ.

Leave a Reply