ಸಿದ್ದರಾಮಯ್ಯಗೆ ವೀರಪ್ಪ ಮೊಯ್ಲಿ ಟಾಂಗ್​! ಇದರ ಹಿಂದಿರುವ ಲೆಕ್ಕಾಚಾರಗಳೇನು?

ಡಿಜಿಟಲ್ ಕನ್ನಡ ಟೀಮ್:

‘ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ…’ ಇದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರು ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ಕೊಟ್ಟಿರುವ ಟಾಂಗ್.

ಚಿಕ್ಕಬಳ್ಳಾಪುರದಲ್ಲಿ ಮಾತನಾಡಿರುವ ಅವರು ಸಿದ್ದರಾಮಯ್ಯ ಅವರು ‘ತಾನು ಮತ್ತೆ ಸಿಎಂ ಆಗ್ತೇನೆ’ ಅನ್ನೋ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ‘ರಾಜ್ಯದಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ. ಮುಂದಿನ 5 ವರ್ಷ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಆಗಿ ಇರುತ್ತಾರೆ’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮಾತಿನೇಟು ನೀಡಿದ್ದಾರೆ. ಆದ್ರೆ ಕಾಂಗ್ರೆಸ್​ ಪಕ್ಷದಲ್ಲಿ ವೀರಪ್ಪ ಮೊಯ್ಲಿ ಅವರಿಗೆ ಪ್ರಮುಖ ಸ್ಥಾನಮಾನ ನೀಡಿದ್ದರೂ ಮೊಯ್ಲಿ ಈ ರೀತಿ ಹೇಳಿಕೆ ನೀಡಿದ್ದು ಯಾಕೆ ಅನ್ನೋ ಪ್ರಶ್ನೆ ಕಾರ್ಯಕರ್ತರನ್ನು ಕಾಡುತ್ತಿದೆ. ಇದಕ್ಕೆ ಕಾರಣ ಹೀಗಿದೆ…

‘ಹಾಲಿ ಚಿಕ್ಕಬಳ್ಳಾಪುರ ಸಂಸದರಾಗಿರುವ ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರಿಗೆ ಈ ಬಾರಿ ಲೋಕಸಭಾ ಕ್ಷೇತ್ರ ಸಿಗುವ ಸಾಧ್ಯತೆ ಕಡಿಮೆಯಿದೆ. ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟು ಕೊಡಲು ಮಾಜಿ ಸಿಎಂ ಸಿದ್ದರಾಮಯ್ಯ ಸಮ್ಮತಿ ಸೂಚಿಸಿದ್ದಾರೆ. ತಮ್ಮ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟು ಕೊಡಲು ಯಾವುದೇ ಪ್ರತಿರೋಧ ಒಡ್ಡಲಿಲ್ಲ, ಏಕಾಏಕಿ ಜೆಡಿಎಸ್​ ಕೇಳುತ್ತಿದ್ದ ಹಾಗೆ ಕಾಂಗ್ರೆಸ್​ ಒಪ್ಪಿಕೊಂಡಿದ್ದು, ವೀರಪ್ಪ ಮೊಯ್ಲಿ ಅವರ ಕೋಪಕ್ಕೆ ಕಾರಣ ಎನ್ನಲಾಗಿದೆ. ಈಗಾಗಲೇ ಸಿಎಂ ಆಗ್ತೀನಿ ಅನ್ನೋ ಹೇಳಿಕೆ ಬಳಿಕ ಸಾಕಷ್ಟು ಗೊಂದಲ ಸೃಷ್ಟಿಯಾದ ಬಳಿಕ ನಿನ್ನೆ ಸಮನ್ವಯ ಸಭೆ ನಡೆಸಿ ಸಮಸ್ಯೆಗೆ ಇತಿಶ್ರೀ ಹಾಡುವ ಯತ್ನ ನಡೆಸಲಾಗಿತ್ತು. ಇದೀಗ ಮತ್ತೆ ವೀರಪ್ಪ ಮೊಯ್ಲಿ ಗೊಂದಲಕ್ಕೆ ಮರು ಜೀವ ಕೊಟ್ಟಿದ್ದಾರೆ.

ಒಂದು ವೇಳೆ ಲೋಕಸಭಾ ಕ್ಷೇತ್ರದಿಂದ ಟಿಕೆಟ್​ ಸಿಗದೇ ಹೋದರೂ ರಾಜ್ಯಸಭೆಗೆ ಹೋಗಲು ವೀರಪ್ಪ ಮೊಯ್ಲಿ ಚಿಂತನೆ ನಡೆಸಿದ್ದು, ಜೆಡಿಎಸ್​ ನಾಯಕರ ಬೆಂಬಲ ಇದ್ದರೆ ರಾಜ್ಯಸಭೆಗೆ ಅಭ್ಯರ್ಥಿ ಆಗೋದು ಸುಲಭ ಅನ್ನೋದನ್ನು ಅರಿತಿರುವ ವೀರಪ್ಪ ಮೊಯ್ಲಿ, ಜೆಡಿಎಸ್​ ಪಕ್ಷದ ಪರವಾಗಿ ಹೇಳಿಕೆ ನೀಡುತ್ತಿದ್ದಾರೆ. ಆದ್ರೆ ಇದೇ ರೀತಿ ಕಾಂಗ್ರೆಸ್​ನಲ್ಲಿ ಬಣ ನಾಯಕರ ಹೇಳಿಕೆಗಳು ಹೊರ ಬೀಳುತ್ತಲೇ ಇದ್ದರೆ ಸರ್ಕಾರಕ್ಕೆ ಸಂಕಷ್ಟ ತಂದೊಡ್ಡಿದ್ರೂ ಅಚ್ಚರಿಯಿಲ್ಲ.

Leave a Reply