ಬಿಜೆಪಿಗೆ ಮತ ಹಾಕವ್ರು ಮುಸಲ್ಮಾನರಲ್ಲ! ಜಮೀರ್ ಹೇಳಿಕೆಗೆ ತೀವ್ರ ಆಕ್ರೋಶ!

ಡಿಜಿಟಲ್ ಕನ್ನಡ ಟೀಮ್:

‘ಮುಸ್ಲಿಮರು ಬಿಜೆಪಿಗೆ ಮತಹಾಕುವುದಿಲ್ಲ. ಒಂದು ವೇಳೆ ಯಾರಾದರೂ ಮತ ಹಾಕಿದರೆ ಅವರು ಮುಸ್ಲಿಮರೇ ಅಲ್ಲ…’ ಇದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಜಮೀರ್ ಅಹ್ಮದ್ ಅವರ ವಿವಾದಾತ್ಮಕ ಹೇಳಿಕೆ.

ಜಮೀರ್ ಅವರ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದು,ಅವರನ್ನು ಸಚಿವ ಸಂಪುಟದಿಂದ ಕೈಬಿಡುವಂತೆ ಮಾಜಿ ಸಚಿವ ಸೊಗಡು ಶಿವಣ್ಣ ಆಗ್ರಹಿಸಿದ್ದಾರೆ.

ಈ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸೊಗಡು ಶಿವಣ್ಣ ಹೇಳಿದ್ದಿಷ್ಟು… ‘ಜನಪ್ರತಿನಿಧಿ ಆಗುವ ಯೋಗ್ಯತೆ ಜಮೀರ್ ಅವರಿಗೆ ಇಲ್ಲ. ವಿಧಾನಸಭಾ ಚುನಾವಣೆ ವೇಳೆ ಬಾಯಿಗೆ ಬಂದಂತೆ ಮಾತಾನಾಡಿದ್ದ ಅವರು, ಈಗ ಇಂತಹ ಹೇಳಿಕೆ ನೀಡಿದ್ದಾರೆ. ಜಮೀರ್ ಅವರು ಪದೇ ಪದೆ ಇಂತಹ ಹೇಳಿಕೆ ನೀಡುತ್ತಿದ್ದರೂ ಚುನಾವಣಾ ಆಯೋಗ ಮೌನವಹಿಸುತ್ತಿರುವುದು ಸರಿಯಲ್ಲ. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ಸಚಿವರ ಬಾಯಿಯಲ್ಲಿ ಇಂತಹ ಹೇಳಿಕೆ ಬಂದಿರುವುದು ದುರದೃಷ್ಟಕರ. ಪ್ರಜಾಪ್ರಭುತ್ವ ದೇಶದಲ್ಲಿ ಬದುಕುತ್ತಿದ್ದೇವೆ ಎಂಬ ವಿವೇಚನೆಯೂ ಅವರಿಗಿಲ್ಲ. ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಹಿಂದು, ಮುಸ್ಲಿಂ ಜನರ ಭಾವನೆಗೆ ಧಕ್ಕೆ ತರುವಂತ ಹೇಳಿಕೆ ನೀಡಿದ್ದರೂ ಚುನಾವಣಾ ಆಯೋಗ ಕೈಗೊಳ್ಳದಿರುವುದು ಸರಿಯಲ್ಲ. ಕುಮಾರಸ್ವಾಮಿ ಅವರು ಕೂಡಲೇ ಜಮೀರ್ ಅಹ್ಮದ್ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಜಮೀರ್ ಅವರ ಹೇಳಿಕೆಗಳು ರಾಜ್ಯ ಸರ್ಕಾರಕ್ಕೆ ಕಪ್ಪು ಚುಕ್ಕಿಯಾಗುತ್ತಿವೆ ರಾಜ್ಯದ ಜನರ ನಡುವೆ ವಿಷ ಬೀಜ ಬಿತ್ತುತ್ತಿರುವ ಜಮೀರ್ ಅವರನ್ನು ತಕ್ಷಣವೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕು.’

Leave a Reply