ಸಿದ್ದರಾಮಯ್ಯ ದಾಳಕ್ಕೆ ಮೈತ್ರಿ ಚಿತ್ತಶಾಂತಿ ಚಿತಲ್-ಪತಲ್!

 ಹಳ್ಳಿ ಕಡೆ ಒಂದು ಮಾತಿದೆ. ಇದು ಬರೀ ಮಾತಾದರೂ ಆಗಿರಬಹುದು, ಇಲ್ಲವೇ ನಂಬಿಕೆ ಅಂತಾದರೂ ಕರೆಯಬಹುದು. ಈ ವಶೀಕರಣ ವಿದ್ಯೆ ಪ್ರಯೋಗ, ಮಾಟ-ಮದ್ದು, ಮಂತ್ರ-ತಂತ್ರ ಮಾಡುವ ಪರಿಪಾಠ ಇರುವವರಿಗೆ ಅದನ್ನು ಬಿಟ್ಟಿರಲು ಸಾಧ್ಯವೇ ಇಲ್ಲವಂತೆ. ಅವರಿಗೆ ಸಂಬಂಧ ಇರಲಿ, ಬಿಡಲಿ, ಯಾರಾದರೂ ಕೇಡು ಮಾಡಿರಲಿ, ಮಾಡದಿರಲಿ ಸುಖಾ-ಸುಮ್ಮನೆ ಮಾಟ-ಮದ್ದು ಮಾಡುತ್ತಲೇ ಇರುತ್ತಾರಂತೆ. ಯಾರಿಗಾದರೂ ಮಾಟ ಮಾಡಲಿಲ್ಲ ಅಂದರೆ ಅವರಿಗೆ ಚಿತ್ತಶಾಂತಿ ಇರುವುದಿಲ್ಲವಂತೆ. ಕೊನೆಗೆ ಯಾರೂ ಸಿಗಲಿಲ್ಲ ಅಂದರೆ ಅವರಿಗೆ ಅವರೇ ಮಾಟ ಮಾಡಿಕೊಳ್ಳುತ್ತಾರಂತೆ. ಕಲಿತ ವಿದ್ಯೆ ವ್ಯರ್ಥವಾಗಬಾರದು ಅಂತ!

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಆಗಾಗ್ಗೆ ಬೀಸುತ್ತಿರುವ ಭಿನ್ನಮತದ ಚಂಡಮಾರುತ, ಇನ್ನೊಂದೆಡೆ ಕಾಂಗ್ರೆಸ್‌ನೊಳಗೇ ಅಧಿಕಾರಸ್ಥರು ಮತ್ತು ಅಧಿಕಾರವಂಚಿತರ ನಡುವೆ ಆಗುತ್ತಿರುವ ಪ್ರತಿಷ್ಠೆ ಕಾಳಗದ ಭೂಕಂಪ ನೋಡಿದಾಗ, ‘ಕಲಿತದ್ದು ಬಿಡದಿರುವ ಮಾಂತ್ರಿಕರ ಮಾಟದ ಪರಿಪಾಠ’ ನೆನಪಿಗೆ ತರುವಂತಿದೆ. ಹೀಗಾಗಿ ಮೈತ್ರಿ ಸರಕಾರಕ್ಕೆ ಮಾತ್ರ ನೂರು ದಿನಗಳಾಗಿಲ್ಲ, ಈ ಸರಕಾರದ ರಗಳೆಗೂ..!

ಅಧಿಕಾರದಿಂದ ಬಿಜೆಪಿಯನ್ನು ದೂರವಿಡುವ ಏಕೈಕ ಕಾರಣದಿಂದ ಹತ್ತಿರಾದ ಕಾಂಗ್ರೆಸ್-ಜೆಡಿಎಸ್ ನಿಜ ಅರ್ಥದಲ್ಲಿ ಅವುಗಳೇ ಪರಸ್ಪರ ದೂರ ಉಳಿದಿವೆ. ಅಧಿಕಾರವಂಚಿತರು ತಮಗೆ ಅಧಿಕಾರ ಸಿಗಲಿಲ್ಲ ಎಂಬ ಕೊರಗಿಗಿಂತ ಮತ್ತೊಬ್ಬರಿಗೆ ಅದು ಸಿಕ್ಕಿರುವುದನ್ನು ಅರಗಿಸಿಕೊಳ್ಳಲಾಗದೆ ಕರುಬುತ್ತಿರುವುದರಿಂದ, ಈ ಕರುಬುವಿಕೆ ಅಸಮಾಧಾನದ ಬುಗ್ಗೆಯಾಗಿ ಚಿಮ್ಮುತ್ತಿರುವುದರಿಂದ ‘ಮೈತ್ರಿ’ ಎಂಬ ಪದಕ್ಕೆ ಹೊಸ ಅರ್ಥ ಹುಡುಕುವ ಅನಿವಾರ್ಯ ಉಂಟಾಗಿದೆ. ಯಾವ ಪಕ್ಷವನ್ನು ದೂರವಿಡಬೇಕು ಎಂದು ಒಂದಾಗಿದ್ದರೋ ಅವರೇ ಈಗ, ಅದೇ ಪಕ್ಷದ ಜತೆ ರಹಸ್ಯ ಸಂಪರ್ಕ ಇಟ್ಟುಕೊಂಡು ಅಧಿಕಾರ ಗಳಿಕೆ ಕಾರ್ಯಸಾಧನೆಗೆ ಹೊಂಚು ಹಾಕುತ್ತಿದ್ದಾರೆ. ಈಗಿರುವವರಿಗೆ ಅಧಿಕಾರ ತಪ್ಪಿಸುವುದರ ಜತೆಗೆ ತಮಗೆ ಇಲ್ಲದಿರುವ ಅಧಿಕಾರ ಪಡೆದುಕೊಳ್ಳಬೇಕು ಎಂಬ ಹವಣಿಕೆ ನಿರಂತರವಾಗಿರುವುದರ ಪ್ರಯುಕ್ತ ಮೈತ್ರಿ ಸರಕಾರ ಕುಂಟುತ್ತಾ, ತೆವಳುತ್ತಾ ಸಾಗಿದೆ. ಸರಕಾರದ ಅಸ್ತಿತ್ವಕ್ಕೆ ಭಯ ಹುಟ್ಟಿಸುವವರಿಗೇ ಪ್ರತಿಭಯ ಹುಟ್ಟಿಸುವ ಏಟು-ಏದಿರೇಟು ಸಮರಕಲೆ ಸರಕಾರ ಹಾಗೂ ಕಾಂಗ್ರೆಸ್ ಎರಡರೊಳಗೂ ಚಾಲನೆಯಲ್ಲಿರುವುದರಿಂದ ಬಿಜೆಪಿ ಆಸೆಗಣ್ಣು ಬಿಟ್ಟುಕೊಂಡು, ನಾಲಗೆಯನ್ನು ಅತ್ತಿಂದಿತ್ತ, ಇತ್ತಿಂದತ್ತ ಆಡಿಸಿಕೊಂಡು ಕಾಯುತ್ತಿದೆ. ಸರಕಾರ ಉರುಳಿಸಿ, ಅಧಿಕಾರ ಹಿಡಿಯುವ ತಮ್ಮ ಬಯಕೆ, ಸಾಧನೆಗೆ ಸಾಥ್ ಕೊಡುವ ವಿರೋಧಿ ಪಕ್ಷಗಳಲ್ಲಿನ ಮಿತ್ರರು ಯಾವಾಗ ಬರುವರೆಂದು!

ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ಚುನಾವಣೆ ಸಂಬಂಧ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸಚಿವ ರಮೇಶ್ ಜಾರಕಿಹೊಳಿ, ಅವರ ಸಹೋದರ ಸತೀಶ್ ಜಾರಕಿಹೊಳಿ ನಡುವೆ ಏರ್ಪಟ್ಟಿರುವ ಪ್ರತಿಷ್ಠೆ ಕದನ ಮೈತ್ರಿ ಸರಕಾರ ಅಸ್ಥಿರಗೊಳಿಸುವ ಒಳತಂತ್ರಗಳಿಗೆ ಮತ್ತೊಂದು ನೆಪವಾಗಿದೆ. ನಿಜ, ಪಿಎಲ್‌ಡಿ ಬ್ಯಾಂಕ್ ಮೇಲಿನ ಹಿಡಿತವೆಲ್ಲಿ ತಪ್ಪಿ ಹೋಗುತ್ತದೋ ಎಂಬ ಕಾರಣಕ್ಕೆ ಜಾರಕಿಹೊಳಿ ಸಹೋದರರು ಚುನಾವಣೆಯನ್ನೇ ಮುಂದಕ್ಕೆ ಹಾಕಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಚುನಾವಣೆ ನಡೆಸಿಯೇ ಸಿದ್ಧ ಎಂಬ ಹೆಬ್ಬಾಳ್ಕರ್ ಹಠಕ್ಕೆ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಸಾಥ್ ನೀಡಿರುವುದರಿಂದ ವಿಷಯ ಬೆಳಗಾವಿ ದಾಟಿ ಕೆಪಿಸಿಸಿ ಅಂಗಳಕ್ಕೆ ಬಂದು ಕಾಂಗ್ರೆಸ್‌ನೊಳಗೇ ಸಮರ ಹುಟ್ಟುಹಾಕಿದೆ. ಬೆಳಗಾವಿಗೂ ಶಿವಕುಮಾರ್ ಅವರಿಗೂ ಏನು ಸಂಬಂಧ? ಈ ವಿಷಯದಲ್ಲಿ ತಲೆಹಾಕಲು ಅವರು ಯಾರು ಎಂದು ರಮೇಶ್ ಜಾರಕಿಹೊಳಿ ಪ್ರಶ್ನಿಸಿದ್ದಾಗಿದೆ. ತಾವೊಬ್ಬ ಸಚಿವ, ಅದಕ್ಕೂ ಮಿಗಿಲಾಗಿ ಕಾಂಗ್ರೆಸ್ ಹಿರಿಯ ಮುಖಂಡ. ಈ ಎರಡೂ ಹುದ್ದೆಗಳ ಕಾರಣದಿಂದ ಇಡೀ ಕರ್ನಾಟಕಕ್ಕೆ ವಿಸ್ತೃತವಾಗಿರುವ ತಮ್ಮ ನಾಯಕತ್ವವನ್ನು ಪ್ರಶ್ನಿಸಲು ರಮೇಶ್ ಜಾರಕಿಹೊಳಿಗೆ ಯಾವುದೇ ಅಧಿಕಾರ ಇಲ್ಲ ಎಂದು ಶಿವಕುಮಾರ್ ಕೂಡ ತಿರುಗಿಸಿ ಝಾಡಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲೇ ನಡೆದ ಈ ಪ್ರಹಸನಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ಕೆ.ಸಿ. ವೇಣುಗೋಪಾಲ್ ಪ್ರತ್ಯಕ್ಷ ಸಾಕ್ಷಿಯಾಗಿದ್ದು, ವಿವಾದ ಇತ್ಯರ್ಥಪಡಿಸುವ ಹೊಣೆಯನ್ನು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೆಗಲಿಗೆ ವಹಿಸಿದ್ದಾರೆ. ಬೇಸರವಾದಾಗಲೆಲ್ಲ ಮೈತ್ರಿ ಸರಕಾರದ ಬುಡ ಅಲ್ಲಾಡಿಸುತ್ತಿರುವ ಸಿದ್ದರಾಮಯ್ಯನವರಿಗೇ ಈ ಜವಾಬ್ದಾರಿ ವಹಿಸಿರುವುದು ಕತ್ತಿ ಹಿಡಿದು ನಿಂತವನ ಮುಂದೆ ಕುರಿ ತಾನಾಗಿಯೇ ಹೋಗಿ ತಲೆ ಬಗ್ಗಿಸಿ ನಿಂತಂತಾಗಿದೆ!

ಹೇಳಿ-ಕೇಳಿ ರಮೇಶ್ ಜಾರಕಿಹೊಳಿ ಸಿದ್ದರಾಮಯ್ಯನವರ ಕಟ್ಟಾ ಬೆಂಬಲಿಗ. ಸಿದ್ದರಾಮಯ್ಯನವರ ಕಣ್ಣು ಮತ್ತು ಹುಬ್ಬು ಸನ್ನೆಯನ್ನೇ ಆಧರಿಸಿ ದಾಳ ಉರುಳಿಸುವ ಕಲಾಕೋವಿದ. ಸಿದ್ದರಾಮಯ್ಯನವರ ಬಳಿ ನ್ಯಾಯ ಪಡೆಯಬೇಕೆಂದು ಸೂಚಿಸಿದರೆ ಸುಮ್ಮನೆ ಬಿಟ್ಟಾರೆಯೇ? ಯುರೋಪ್ ಪ್ರವಾಸ ಹೊರಟು ನಿಂತಿದ್ದ ಸಿದ್ದರಾಮಯ್ಯನವರ ಮನೆಗೆ ಹೋಗಿರುವ ರಮೇಶ್ ಜಾರಕಿಹೊಳಿ ನೇತೃತ್ವದ ಬೆಳಗಾವಿ ಕಾಂಗ್ರೆಸ್ ಮುಖಂಡರ ನಿಯೋಗ, ಶಿವಕುಮಾರ್ ವಿರುದ್ಧ ದೂರುಗಳ ಕಾಗದ ಭಂಡಾರವನ್ನೇ ಉರುಳಿಸಿದೆ. ಬೆಳಗಾವಿ ಕಾಂಗ್ರೆಸ್ ವಿಚಾರದಲ್ಲಿ ಶಿವಕುಮಾರ್ ಹಸ್ತಕ್ಷೇಪ ತಡೆಯದಿದ್ದರೆ ತಮ್ಮ ನೇತೃತ್ವದಲ್ಲಿ ಕಾಂಗ್ರೆಸ್‌ನ 13 ಮಂದಿ ಶಾಸಕರು ಬಿಜೆಪಿಗೆ ಹೋಗುವುದು ಗ್ಯಾರಂಟಿ. ಸರಕಾರ ಬಿದ್ದು ಹೋದರೆ ತಮ್ಮನ್ನು ಹೊಣೆ ಮಾಡಬೇಡಿ ಎಂದು ಸಿದ್ದರಾಮಯ್ಯನವರ ಆತ್ಮಸಂತೃಪ್ತವಾಗುವಂತೆ ನಿವೇದಿಸಿಕೊಂಡಿದ್ದಾರೆ. ಆದರೆ ಹನ್ನೆರಡು ದಿನಗಳ ಯುರೋಪ್ ಪ್ರವಾಸ ಕೈಗೊಳ್ಳುತ್ತಿರುವ ಸಿದ್ದರಾಮಯ್ಯನವರು ತಾವು ವಿದೇಶಯಾತ್ರೆಯಿಂದ ಬರುವವರೆಗೆ ಸುಮ್ಮನಿರುವಂತೆಯೂ, ಬಂದಮೇಲೆ ಎಲ್ಲ ಸರಿಮಾಡುವುದಾಗಿಯೂ ಹೇಳಿ ಹೋಗಿದ್ದಾರೆ. ಸಿದ್ದರಾಮಯ್ಯನವರ ಹೇಳಿಕೆಯನ್ನು ಯಾರು ಹೇಗೆ ಬೇಕಾದರೂ ಅರ್ಥ ಮಾಡಿಕೊಳ್ಳಬಹುದು. ಅದು ಅವರವರ ಶಕ್ತಿ, ವಿವೇಚನೆಗೆ ಬಿಟ್ಟದ್ದು ಎಂಬ ಮಾತು ಕಾಂಗ್ರೆಸ್ ಅಂಗಳದಲ್ಲೇ ಜಿಗಿದಾಡುತ್ತಿದೆ.

ಹೌದು, ಈ ಮಾತು ಸುಮ್ಮ, ಸುಮ್ಮನೆ ಚಾಲ್ತಿಗೆ ಬಂದಿಲ್ಲ. ಈ ಹಿಂದೆ ಸಿದ್ದರಾಮಯ್ಯನವರು ಹನ್ನೆರಡು ದಿನ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯದಲ್ಲಿ ಕುಳಿತು ಚಿಮುಕಿಸಿದ ಮಂತ್ರದ ನೀರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಬುಡವನ್ನೇ ಅಲ್ಲಾಡಿಸಿತ್ತು. ಈ ಸರಕಾರ ಹೆಚ್ಚು ದಿನ ಬಾಳಲ್ಲ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿಯೂ ಜಾಸ್ತಿ ದಿನ ಇರಲ್ಲ, ಲೋಕಸಭೆ ಚುನಾವಣೆ ಮುಗಿಯುವರೆಗೆ ಇದ್ದರೆ ಅದೇ ಹೆಚ್ಚು ಎಂದು ಆಪ್ತರ ಬಳಿ ಹೇಳಿದ್ದ ವಿಡಿಯೋ ವೈರಲ್ ಆಗಿ ಮಲಗಿದ್ದ ಬಿಜೆಪಿಯವರು ಛಂಗನೆ ಎದ್ದು ಕುಳಿತ್ತಿದ್ದರು. ಸಿದ್ದರಾಮಯ್ಯನವರ ಈ ಪಟಾಕಿ ಸಿಡಿತ ದಿಲ್ಲಿವರೆಗೂ ಮದ್ದಿನ ವಾಸನೆ ಹಬ್ಬಿಸಿ ಸ್ವತಃ ರಾಹುಲ್ ಗಾಂಧಿ ಅವರೇ ನವಿಲುಗರಿ ಬೀಸಿ ಹೊಗೆ ದೂರ ತಳ್ಳಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯನವರು ಆಗಾಗ್ಗೆ ಈ ರೀತಿ ‘ಸಮನ್ವಯ’ ಕಲಕುವುದರಲ್ಲಿ ಸಿದ್ಧಹಸ್ತರು. ಇದರಿಂದ ತಮ್ಮ ಅಸ್ತಿತ್ವಕ್ಕೂ ಬಲ ಬರುತ್ತದೆ, ಅನ್ಯರನ್ನು ಹತೋಟಿಯಲ್ಲಿಡಲೂ ಅಸ್ತ್ರವಾಗುತ್ತದೆ ಎಂಬುದನ್ನು ಚೆನ್ನಾಗಿ ಅರಿತಿರುವ ಸಿದ್ದರಾಮಯ್ಯನವರು ತಮಗೆ ತಪ್ಪಿಹೋದ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕೆನ್ನುವ ಬಯಕೆಯನ್ನು ಹೀಗೆಲ್ಲ ತೀರಿಸಿಕೊಳ್ಳುತ್ತಿರುತ್ತಾರೆ. ಮೈತ್ರಿ ಸರಕಾರ ಸದಾ ಭಯ-ಭಕ್ತಿಯಲ್ಲಿದ್ದರಷ್ಟೇ ತಮಗೆ ಬೆಲೆ ಎಂಬುದು ಅವರಿಗೆ ವೇದ್ಯವಾಗಿ ಹೋಗಿದೆ.

ಈ ಹಳೇ ಅನುಭವದ (ಧರ್ಮಸ್ಥಳ ಪ್ರಹಸನ) ಆಧಾರದ ಮೇಲೆ ಸಿದ್ದರಾಮಯ್ಯನವರ ಯುರೋಪ್ ಪ್ರವಾಸವನ್ನೂ ಕೆಲವರು ತಮ್ಮದೇ ಆದ ಕಣ್ಣುಗಳಿಂದ ನೋಡುತ್ತಿದ್ದಾರೆ. ಆ ಕಣ್ಣುಗಳಲ್ಲಿ ಅನುಮಾನದ ಛಾಯೆ ತುಂಬಿದೆ. ಈ ಪ್ರವಾಸ ಬಹಳ ಹಿಂದೆಯೇ ನಿಗದಿಯಾಗಿತ್ತಾದರೂ ಸಿದ್ದರಾಮಯ್ಯ ನವರು ವಿದೇಶದಲ್ಲಿದ್ದುಕೊಂಡು ಇನ್ಯಾವ ದಾಳ ಉರುಳಿಸುತ್ತಾರೋ, ಇನ್ನೇನು ಕೋಲಾಹಲ ಎಬ್ಬಿಸುತ್ತಾರೋ, ವಿದೇಶದಲ್ಲಿದ್ದುಕೊಂಡೇ ಬೆಂಬಲಿಗರಿಗೆ ಯಾವ ಸುಪಾರಿ ಕೊಡುತ್ತಾರೋ, ಮೈತ್ರಿ ಸರಕಾರಕ್ಕೆ ಮತ್ತೇನು ಗ್ರಹಚಾರ ಕಾದಿದೆಯೋ ಎಂದೆಲ್ಲ ಮಾತಾಡಿಕೊಳ್ಳುತ್ತಿದ್ದಾರೆ. ಕೆಲವೊಮ್ಮೆ ಸತ್ಯವನ್ನೂ ಹಿಂದಿನ ಕಹಿ ಅನುಭವಗಳು ನುಂಗಿ ನೀರು ಕುಡಿಯುತ್ತವೆ. ಹೀಗಾಗಿ ಪುತ್ರ ಡಾ.ಯತೀಂದ್ರ, ಪರಮಾಪ್ತ ಗೋವಿಂದರಾಜ್, ಗೋವಿಂದರಾಜ್ ಪುತ್ರನ ಜತೆ ಹೊರಟಿರುವ ಸಿದ್ದರಾಮಯ್ಯನವರ ವಿದೇಶ ಯಾತ್ರೆ ದಿಟವೇ ಆಗಿದ್ದರೂ ರಾಜಕೀಯ ಅನುಮಾನದ ಕಣ್ಣುಗಳ ಅನ್ವೇಷಣೆ ಮಾತ್ರ ನಿಂತಿಲ್ಲ. ಸಿದ್ದರಾಮಯಯನವರೂ ಅಷ್ಟೇ, ಅನ್ಯರನ್ನು ಆತಂಕದಲ್ಲಿಡುವ ಪರಿಪಾಠ ಬಿಡುವುದಿಲ್ಲ. ಹೀಗಾಗಿಯೇ ಇತ್ತೀಚೆಗೂ ಇಂತಹುದೇ ಮತ್ತೊಂದು ಅಸ್ತ್ರವನ್ನು ಅವರು ಪ್ರಯೋಗ ಮಾಡಿದ್ದರು. ‘ನಾನು ಮತ್ತೆ ಮುಖ್ಯಮಂತ್ರಿ ಆಗುತ್ತೇನೆ’ ಎಂದು ಅವರು ಹೇಳಿದ್ದು ಮತ್ತೆ ಮೈತ್ರಿ ಸರಕಾರದಲ್ಲಿ ಗೊಂದಲ ಮೂಡಿಸಿತ್ತು. ಮತ್ತೆ ಸ್ಥಿರತೆಯನ್ನು ಅಲ್ಲಾಡಿಸಿತ್ತು. ಕುಮಾರಸ್ವಾಮಿ ಮುಜುಗರ ಅನುಭವಿಸಿದ್ದರೆ, ಸಿದ್ದರಾಮಯ್ಯನವರ ಬೆಂಬಲಿಗರು ತಮ್ಮ ನಾಯಕರು ಇನ್ನೇನು ಸಿಎಂ ಆಗಿಯೇ ಬಿಟ್ಟರು ಎಂಬಂತೆ ಸಂಭ್ರಮಿಸಿದರು. ಇನ್ನೂ ಕೆಲವರು ಇದರಲ್ಲಿ ತರ್ಕವೇ ಎಲ್ಲ, ಬರೀ ಭ್ರಮೆ ಎಂದೂ ಹೇಳಿದರು. ಏಕೆಂದರೆ ಸಿದ್ದರಾಮಯ್ಯನವರು ಈ ಸರಕಾರದಲ್ಲೇ ಮತ್ತೆ ಮುಖ್ಯಮಂತ್ರಿ ಆಗಬೇಕಾದರೆ ಕುಮಾರಸ್ವಾಮಿ, ರೇವಣ್ಣನವರ ಆದಿಯಾಗಿ ಇಡೀ ಜೆಡಿಎಸ್ ಶಾಸಕರು ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಬೇಕು. ಇಲ್ಲವೇ ಅರ್ಧದಷ್ಟು ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಬರಬೇಕು. ಎರಡೂ ಆಗದ-ಹೋಗದ ಮಾತು. ಆದರೂ ಸಿದ್ದರಾಮಯ್ಯನವರು ಮಂತ್ರದ ನೀರು ಚಿಮುಕಿಸಿದರು. ಒಂದಷ್ಟು ಮಂದಿ ಅವರ ಬೆಂಬಲಿಗರು ತಲೆ ಅಲ್ಲಾಡಿಸಿದರು. ಇದು ಅನುಷ್ಠಾನಕ್ಕೆ ಬರಲು ದುಸ್ಸಾಧ್ಯವಾದ ಮಾತಾದರೂ ದಿಲ್ಲಿಗೆ ದೂರು ಹೋಯಿತು. ಬಿಜೆಪಿ ದೂರವಿಡಲು ಎರಡೂ ಪಕ್ಷ ಸೇರಿ ಸರಕಾರ ಮಾಡಿದ್ದಾಗಿ ನೀವು ಹೇಳುತ್ತೀರಿ. ಆದರೆ ನಿಮ್ಮದೇ ಪಕ್ಷದ ನಾಯಕರು ಸರಕಾರ ಅಸ್ಥಿರಗೊಳಿಸುವ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಹೀಗಾದರೆ ಹೇಗೆ? ಅಧಿಕಾರಕ್ಕಾಗಿ ನಾನೇನು ಅಂಟಿ ಕೂತಿಲ್ಲ. ಸರಕಾರ ಹೋದರೆ ಅದು ನಿಮ್ಮ ಪಕ್ಷದವರಿಂದಲೇ ಹೊರತು ಬೇರೆಯವರಿಂದಂತೂ ಅಲ್ಲ ಎಂದು ಕುಮಾರಸ್ವಾಾಮಿ ಖುದ್ದು ರಾಹುಲ್ ಗಾಂಧಿ ಅವರಿಗೆ ಹೇಳಿದ್ದಾರೆ. ತಮ್ಮ ಹೇಳಿಕೆಯಿಂದ ಪರಿಸ್ಥಿತಿ ಹಳಿ ತಪ್ಪುತ್ತಿರುವುದನ್ನು ಅರಿತ ಸಿದ್ದರಾಮಯ್ಯನವರು ಮಾತು ಬದಲಿಸಿದರು. 2023 ರ ವಿಧಾನಸಭೆ ಚುನಾವಣೆ ನಂತರ ಸಿಎಂ ಆಗುವುದಾಗಿ ಹೇಳಿದ್ದಾಗಿ ತಿಪ್ಪೆ ಸಾರಿಸಿದರು. ಸಮನ್ವಯ ಸಮಿತಿ ಸಭೆಯಲ್ಲಿ ಕಾಂಗ್ರೆಸ್-ಜೆಡಿಎಸ್ ನಾಯಕರ ನಡುವೆ ಜಟಾಪಟಿಯೂ ಆಯಿತು. ಈ ರೀತಿ ಹೇಳಿಕೆಗಳನ್ನು ಕೊಟ್ಟು ಗೊಂದಲ ಮೂಡಿಸುವುದು ಎಷ್ಟು ಸರಿ? ಸಮನ್ವಯ ಕಾಪಾಡಬೇಕಾದ ನಾಯಕರೇ ಹೊರಗೆ ಹೀಗೆ ಮಾತಾಡಿದರೆ ಬೆಂಬಲಿಗರು ಹಾಗೂ ಕಾರ್ಯಕರ್ತರಿಗೆ ಯಾವ ಸಂದೇಶ ಹೋಗುತ್ತದೆ? ನೆಮ್ಮದಿಯಾಗಿ ಸರಕಾರ ನಡೆಸುವುದು ಹೇಗೆ ಎಂಬೆಲ್ಲ ಪ್ರಶ್ನೆಗಳು ತೂರಿ ಬಂದಿವೆ. ತದನಂತರ ಇನ್ನು ಮುಂದೆ ನಾಯಕರು ಬಹಿರಂಗ ಹೇಳಿಕೆ ನೀಡಬಾರದು ಎಂಬ ನಿಲುವಿನೊಂದಿಗೆ ಸಭೆ ಬರಖಾಸ್ತಾಗಿದೆ. ಆದರೆ ಇಂಥ ನಿಲುವು, ನಿರ್ಣಯಗಳು ಹಿಂದೆಯೂ ಬೇಕಾದಷ್ಟು ಬಾರಿ ಆಗಿವೆ. ಹೇಳಿಕೆಗಳು ಮಾತ್ರ ಮರುಕಳಿಸುತ್ತಲೇ ಇವೆ. ಅಂದರೆ ಸಮನ್ವಯ ಅನ್ನೋದು ಬರೀ ಬಾಯಿ ಮಾತು. ಹೊರಗೆ ಬಾಯಿಗೆ ಬಂದಂತೆ ಮಾತಾಡುವುದು. ಸಭೆಯಲ್ಲಿ ಬಂದು ಪರಿತಾಪ, ಪಶ್ಚಾತ್ತಾಪದ ಮಾತಾಡುವುದು, ಇಲ್ಲವೇ ಆ ಮಾತನ್ನೇ ತಿರುಚುವುದು. ಈ ಬಾರಿ ಕೂಡ ಆದದ್ದೂ ಅದೇ.

ಮೈತ್ರಿ ಸರಕಾರದ ಈ ಬೆಳವಣಿಗೆಗಳು ಅರ್ಧದಲ್ಲೇ ಅಧಿಕಾರದ ಆಶಾಭಂಗವಾಗಿ ತ್ರಿಶಂಕು ಸ್ವರ್ಗದಲ್ಲಿ ವಿಹರಿಸುತ್ತಿರುವ ಬಿಜೆಪಿ ಮಂದಿಗೆ, ಅದರಲ್ಲೂ ವಿಶೇಷವಾಗಿ ಯಡಿಯೂರಪ್ಪನವರಿಗೆ ಮತ್ತೆ ಮತ್ತೆ ಸಿಎಂ ಕುರ್ಚಿಯತ್ತ ಚಿತ್ತವನ್ನು ಗಾಳ ಹಾಕಿ ಎಳೆಯುತ್ತಿದೆ. ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಶ್ರಾವಣ ಮುಗಿಯುವುದೊಳಗೆ ಯಡಿಯೂರಪ್ಪ ಸಿಎಂ ಆಗುತ್ತಾರೆ ಎಂದು ಕಣಿ ಹೇಳಿದರೆ, ಯತ್ನಾಳ್ ಆಶಯ ಫಲಿಸಲಿ ಎಂದು ಹಾರೈಸುವುದಾಗಿ ಯಡಿಯೂರಪ್ಪನವರು ಮನಸ್ಸಿನಲ್ಲೇ ಮಂಡಕ್ಕಿ ಹುರಿದಿದ್ದಾರೆ. ಪಾಪ, ಇಬ್ಬರ ಆಶಾಗೋಪುರದ ತುದಿಯಲ್ಲಿರುವುದು ಬಿಜೆಪಿಯ ಅಧಿಕಾರಸೌಧ. ಆ ಸೌಧದಲ್ಲಿ ಇವರ ವಿಹಾರದ ಬಯಕೆ. ಸಿದ್ದರಾಮಯ್ಯನವರ ಹೇಳಿಕೆಗಳನ್ನು, ಯಡಿಯೂರಪ್ಪನವರ ಬಯಕೆಗಳನ್ನು ತಾಳೆ ಹಾಕಿ ನೋಡುವ ರಾಜಕೀಯ ಪರಿಣತರು ತಮ್ಮದೇ ಆದ ಪರಿಭಾಷೆಯಲ್ಲಿ ಅದನ್ನು ಪರಾಮರ್ಶಿಸುತ್ತಾರೆ. ಮೈತ್ರಿ ಸರಕಾರ ಬಂದಾಗಿನಿಂದಲೂ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪನವರು ಸದನದ ಒಳಗಾಗಲಿ, ಹೊರಗಾಗಲಿ ಪರಸ್ಪರ ಬೈದುಕೊಂಡಿಲ್ಲ. ಪರಸ್ಪರ ಸ್ನೇಹಮಯಿಗಳಾಗಿದ್ದಾರೆ, ಪರಸ್ಪರ ಮೃದು ಧೋರಣೆ ಪ್ರದರ್ಶಿಸುತ್ತಿದ್ದಾರೆ. ಒಂದೊಮ್ಮೆ ಯಾರಾದರೂ ಕಾಂಗ್ರೆಸ್‌ನಿಂದ ಬಿಜೆಪಿಗೆ ಪಲಾಯನ ಮಾಡಿದರೆ, ಮೈತ್ರಿ ಸರಕಾರ ಉರುಳಿ ಹೋಗಿ, ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದರೆ ಖಂಡಿತವಾಗಿಯೂ ಅದಕ್ಕೆ ಸಿದ್ದರಾಮಯ್ಯನವರ ಪರೋಕ್ಷ ಕೃಪಾಕಟಾಕ್ಷವಿರುತ್ತದೆ. ಮೈತ್ರಿ ಸರಕಾರದಲ್ಲಿ ಅಧಿಕಾರ ವಂಚಿತ ಸಿದ್ದರಾಮಯ್ಯ ಬೆಂಬಲಿಗರು ಇವತ್ತಲ್ಲ, ನಾಳೆ ಬಿಜೆಪಿಯತ್ತ ತೆರಳುತ್ತಾರೆ. ಅದರ ಮೊದಲ ಹೆಜ್ಜೆಯೇ ರಮೇಶ್ ಜಾರಕಿಹೊಳಿ ಅವರು ಬೆಳಗಾವಿ ವಿಚಾರದಲ್ಲಿ ಡಿ.ಕೆ. ಶಿವಕುಮಾರ್ ಹಸ್ತಕ್ಷೇಪ ತಡೆಯದಿದ್ದರೆ ಬಿಜೆಪಿಗೆ ಹೋಗುವುದಾಗಿ ಸಿದ್ದರಾಮಯ್ಯನವರಿಗೆ ನೇರವಾಗಿ ಹೇಳಿರುವುದು. ಇಲ್ಲಿ ಇನ್ನೊಂದು ವಿಚಾರವಿದೆ. ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಡಿ.ಕೆ. ಶಿವಕುಮಾರ್ ಅವರು ದೇವೇಗೌಡರ ಕುಟುಂಬದ ಜತೆ ಆಪ್ತ ಸಂಬಂಧ ಸಾಧಿಸಿರುವುದು ಸಿದ್ದರಾಮಯ್ಯನವರ ಆತ್ಮವನ್ನು ಕುಕ್ಕಿದೆ. ತಮ್ಮ ಕಡುವಿರೋಧಿ ದೇವೇಗೌಡ ಮತ್ತು ಕುಮಾರಸ್ವಾಮಿ ಜತೆ ಶಿವಕುಮಾರ್ ಆತ್ಮೀಯರಾಗಿರುವುದನ್ನು ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಇದೇ ಸಂದರ್ಭದಲ್ಲಿ ಶಿವಕುಮಾರ್ ವಿರುದ್ಧದ ರಮೇಶ್ ಜಾರಕಿಹೊಳಿ ದೂರು, ಬಿಜೆಪಿ ಜತೆ ಒಡನಾಟದ ನೇರ ಪ್ರಸ್ತಾಪ ಸಿದ್ದರಾಮಯ್ಯನವರ ಅಂಗಳಕ್ಕೆ ಬಂದು ಬಿದ್ದಿದೆ. ಅಧಿಕಾರದ ಬಸುರಿ ಬಯಕೆಯಲ್ಲಿರುವ ಯಡಿಯೂರಪ್ಪನವರಿಗೆ ಸಿದ್ದರಾಮಯ್ಯನವರು ಸೀಮಂತ ಮಾಡುತ್ತಾರೋ ಇಲ್ಲ ಅವರಿಗೂ ಮಂತ್ರದ ನೀರು ಚಿಮುಕಿಸಿ ರಾಜಕೀಯ ಕಾಲ ಉರುಳಿಸುತ್ತಾರೋ ನೋಡಬೇಕು.

Leave a Reply