ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ ಮಾಡೋ ಅದೃಷ್ಟ ಇಲ್ವಾ?

ಡಿಜಿಟಲ್ ಕನ್ನಡ ಟೀಮ್:

ಬಿಜೆಪಿ ರಾಜಕೀಯ ತಂತ್ರಗಾರಿಕೆ ಮಾಡೋದ್ರಲ್ಲಿ ನಿಪುಣತೆ ಸಾಧಿಸಿದೆ ಅನ್ನೋದು ಚುನಾವಣಾ ಫಲಿತಾಂಶದಲ್ಲಿ ಗೊತ್ತಾಗುತ್ತದೆ. ಆದೇ ರೀತಿ ವಿರೋಧಿಗಳನ್ನೂ ಹೆಚ್ಚಾಗಿ ಹುಟ್ಟುಹಾಕಿಕೊಳ್ಳುತ್ತಿದೆ ಅನ್ನೋದು ಕೂಡ ಅಷ್ಟೇ ಸತ್ಯ. ಯಾಕಂದ್ರೆ ಬಿಜೆಪಿ ಹಿಂದೂಗಳ ಪರ ಎಂದು ಹೇಳಿಕೊಂಡು ಪ್ರಚಾರ ಮಾಡುತ್ತೆ, ಮುಸ್ಲಿಂ ಸಮುದಾಯ ಸೇರಿದಂತೆ ಸಾಕಷ್ಟು ಸಮುದಾಯದ ಜನರು ಬಿಜೆಪಿ ನಿಲುವನ್ನು ವಿರೋಧಿಸುತ್ತಾರೆ. ನಾವೆಲ್ಲರೂ ಕನ್ನಡಿಗರು, ನಾವೆಲ್ಲರೂ ಭಾರತೀಯರು, ನಾವೆಲ್ಲರೂ ಒಂದೇ ಎನ್ನುವ ಭಾವನೆ ಹೊಂದಿರುವ ಜನ ಬಿಜೆಪಿಯಿಂದ ದೂರ ಉಳಿಯುತ್ತಾರೆ. ಆ ಮತಗಳು ಬೇರೆ ಪಕ್ಷಗಳ ಪಾಲಾಗುತ್ತವೆ. ಆದ್ರೆ ಹಿಂದೂ ಪರ ಮತಗಳು ಒಟ್ಟಾಗುತ್ತವೆ ಅನ್ನೋ ಭಾವನೆ ಬಿಜೆಪಿಯಲ್ಲಿದೆ. ಅದು ಸತ್ಯವೂ ಕೂಡ. ಆದ್ರೆ ಅಧಿಕಾರ ಹಿಡಿಯಲು ಬಿಜೆಪಿ ನಾಯಕರಿಗೆ ಅದೃಷ್ಟ ಕಡಿಮೆ ಎಂದರೆ ತಪ್ಪಲ್ಲ. ವಿಧಾನಸಭೆ ಚುನಾವಣೆ ಅತಂತ್ರ ಫಲಿತಾಂಶ ಹಾಗೂ ಸೋಮವಾರ ಪ್ರಕಟವಾದ ಸ್ಥಳೀಯ ಸಂಸ್ಥೆಗಳ ಚುನಾವಣಾ ರಿಸಲ್ಟ್ ಇದಕ್ಕೆ ಸಾಕ್ಷಿ.

ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಅಬ್ಬರಿಸಿ ಬೊಬ್ಬಿರುದು ಬರೋಬ್ಬರಿ 98 ಸ್ಥಾನಗಳನ್ನು ಪಡೆದುಕೊಂಡು ಆದ್ರೆ ಅಧಿಕಾರ ಹಿಡಿಯಲು ಬೇಕಾದ ಸಂಖ್ಯಾಬಲ ಬಿಜೆಪಿ ಪಾಲಿಗೆ ಇರಲಿಲ್ಲ. ಇದೇ ಲೆಕ್ಕಾಚಾರಕ್ಕೆ ಕಾದು ಕುಳಿತಿದ್ದ ಜೆಡಿಎಸ್ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡು ಅಧಿಕಾರದ ಗದ್ದುಗೆ ಏರಿದ್ರು. ಅದೇ ರೀತಿ ಈ ಬಾರಿ ವಿಧಾನ ಸಭಾ ಚುನಾವಣೆಯಲ್ಲೂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಅಬ್ಬರದ ಪ್ರಚಾರ ನಡೆಸಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸಿದ್ರು ಆದ್ರೆ ಸರಳ ಬಹುಮತಕ್ಕೆ ಬೇಕಾದ ಸಂಖ್ಯಾಬಲ ಗಳಿಸಲು ಬಿಜೆಪಿ ಶಕ್ತವಾಗಲಿಲ್ಲ. ಕೇವಲ 104 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡ ಕೇಸರಿ‌ ಪಾಳಯ ವಿರೋಧಿ ಬಣದ ಶಾಸಕರನ್ನ ಸೆಳೆಯುವ ಯತ್ನ ಮಾಡಿ ಅದರಲ್ಲೂ ವಿಫಲವಾಯ್ತು. ಅದೇ ರೀತಿ ಈ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲು ಕಮಲ ನಾಯಕರು ಬಹುತೇಕ ಕಡೆ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಮೂರು ಮಹಾನಗರ ಪಾಲಿಕೆ ಚುಮಾವಣೆಯಲ್ಲಿ ಶಿವಮೊಗ್ಗದಲ್ಲಿ ಬಿಜೆಪಿ ಸರಳ ಬಹುಮತ ಗಳಿಸಿದ್ದು, ಬಿಎಸ್ ಯಡಿಯೂರಪ್ಪ ಹಾಗೂ ಈಶ್ವರಪ್ಪ ಭರ್ಜರಿ ಯಶಸ್ಸು ಗಳಿಸಿದ್ದಾರೆ. ಅಲ್ಲಿ ಅಧಿಕಾರಕ್ಕೇನು ಸಮಸ್ಯೆಯಿಲ್ಲ. ಆದ್ರೆ ಮೈಸೂರು ಹಾಗು ತುಮಕೂರಿನ ಎರಡೂ ಪಾಲಿಕೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಸರಳ ಬಹುಮತಕ್ಕೆ ಬೇಕಾದ ಸಂಖ್ಯಾಬಲವನ್ನು ತಲುಪುವಲ್ಲಿ ವಿಫಲವಾಗಿದೆ. ಹೀಗಾಗಿ ಮೈಸೂರು ಹಾಗು ತುಮಕೂರಿನಲ್ಲಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಆಡಳಿತ ನಡೆಸೋದು ಕನ್ಫರ್ಮ್ ಆಗಿದೆ. ಅದೇ ರೀತಿ ನಗರಸಭೆಯಲ್ಲೂ ಕಾಂಗ್ರೆಸ್ ಕೇವಲ ಐದು ಕಡೆ ಅಧಿಕಾರ ಹಿಡಿಯುತ್ತಿದ್ದು, ಬಿಜೆಪಿ 9 ಕಡೆ ಹಾಗು ಜೆಡಿಎಸ್ 2 ಮತ್ತು ಪಕ್ಷೇತರರು ಎರಡು ಕಡೆ ಅಧಿಕಾರ ಹಿಡಿಯುತ್ತಿದ್ದಾರೆ. ಇನ್ನುಳಿದ 11 ನಗರಸಭೆಯಲ್ಲಿ ಅತಂತ್ರ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ ಜೆಡಿಎಸ್ ಹಿಂದಾಣಿಕೆ ಮಾಡಿಕೊಂಡರೆ ಸ್ಥಳೀಯ ಸಂಸ್ಥೆಗಳಲ್ಲಿ ಮೈತ್ರಿ ಪಕ್ಷಗಳ ಅಧಿಕಾರ ರಾರಾಜಿಸಲಿದೆ. ಎಷ್ಟೇ ಪ್ರಚಾರ ಮಾಡಿದರೂ. ಎಷ್ಟೇ ಹೋರಾಟ ಮಾಡಿದರೂ. ಹೆಚ್ಚು ಸ್ಥಾನ ಗಳಿಸಿದರೂ ಬಿಜೆಪಿಗೆ ಅಧಿಕಾರ ನಡೆಸುವ ಯೋಗ ಮಾತ್ರ ಇದ್ದಂತೆ ಕಾಣ್ತಿಲ್ಲ.

1 COMMENT

Leave a Reply