ಮರೆಯಾಗದಿರಲಿ ಮನೆಯೆಂಬ ಮೊದಲ ಪಾಠ ಶಾಲೆ!

ಆರ್. ಶ್ರೀನಾಗೇಶ್

ನೂರು ವರ್ಷಗಳ ಹಿಂದೆ ಕನ್ನಡಕ್ಕೊಬ್ಬರೇ ಆದ ಕೈಲಾಸಂ ಅವರು ಕೇಳಿದ ಪ್ರಶ್ನೆ, ಮಕ್ಕಳಿಸ್ಕೂಲ್ ಮನೇಲಲ್ವೇ? ಶಿಕ್ಷಣ ಎಂದರೆ ಮಕ್ಕಳ ಒಳಗಿರುವ ಜ್ಞಾನವನ್ನು ಹೊರಗೆ ಎಳೆದು ಹಾಕುವುದು ಎಂದು ವ್ಯಾಖ್ಯಾನಿಸಿ, ಅವರು ಕೇಳುವ ಪ್ರಶ್ನೆ ಇದು.

ಏನೂ ಬೀಳದ ಭಾವಿಯಲ್ಲಿ ಪಾತಾಳಗರಡಿ ಹಾಕಿ ಎಳೆದರೆ, ಹೇಗೆ ಏನೂ ಬರಲ್ವೋ, ಹಾಗೆ, ಮನೆಯಲ್ಲಿ ಮಕ್ಕಳ ತಲೆಯಲ್ಲಿ ಏನನ್ನೂ ತುಂಬಿಸದೇ, ಸ್ಕೂಲಿಗೆ ಕಳುಹಿಸಿದರೆ ಶಿಕ್ಷಕ ಏನು ತಾನೇ ಆಚೆಗೆಳೆದಾನು?

ನಮ್ಮ ಇಂದಿನ ಶಿಕ್ಷಣ ವ್ಯವಸ್ಥೆ ಕೇವಲ ನೌಕರಿಗಳನ್ನು ಹುಡುಕುವ ವ್ಯಕ್ತಿಗಳನ್ನು ಸೃಷ್ಟಿಸುತ್ತಿದೆಯೇ ಹೊರತು ಪ್ರಬಲ, ಸಾಧಕ ವ್ಯಕ್ತಿಗಳನ್ನಲ್ಲ. ತರಗತಿಯ ಮಾನಿಟರ್ ಮಾಡಲಿಲ್ಲ, ಗೆಳೆಯರ ಬಳಿ ಇರುವಂತಹ ಸ್ಮಾರ್ಟ್ ಫೋನ್‍ಕೊಡಿಸಲಿಲ್ಲ, ಪೋಷಕರನ್ನು ಶಾಲೆಗೆ ಕರೆದುಕೊಂಡು ಬಾ ಎಂದರು, ಇಂತಹ ಕಾರಣಗಳಿಗೆ ಮಕ್ಕಳು ಸಾಯುವ ವಯಸ್ಸಿಗೆ ಬರುತ್ತಿದ್ದಾರೆ ಎಂದರೆ, ಎಂತಹ ದುರ್ಬಲ ಮನಸ್ಸಿನ ವ್ಯಕ್ತಿಗಳ ನಿರ್ಮಾಣವಾಗುತ್ತಿದೆ ಎನ್ನುವುದರ ಅಂದಾಜು ಸಿಗುತ್ತದೆ.

ಅದಕ್ಕೆ ಮೊದಲ ಪಾಠಶಾಲೆಯಾದ ಮನೆಯಲ್ಲಿ ಕೆಲವು ಪಾಠಗಳನ್ನು ಕಲಿಸಬೇಕಾಗುವುದು. ಇಂದಿನ ಮಕ್ಕಳಲ್ಲಿ ಎದ್ದು ಕಾಣುವ ಒಂದು ದುರ್ಗುಣ ಎಂದರೆ, ತಮಗೆ ಬೇಕಾದುದು ಸಿಗದೇ ಹೋದರೆ, ಅದನ್ನು ಹೇಗೆ ಸ್ವೀಕರಿಸುವುದು ಎನ್ನುವುದು. ಅದೂ, ಕಾಯುವಷ್ಟೂ ತಾಳ್ಮೆ ಇಲ್ಲದೆ, ಕೂಡಲೇ ಆಗಿ ಬಿಡಬೇಕು ಎನ್ನುವ ತವಕ.
ಪೋಷಕರ ಜವಾಬ್ದಾರಿ ಏನು ಎಂದು ಅರ್ಥ ಮಾಡಿಕೊಳ್ಳದೆ, ಅದಕ್ಕಾಗಿ ತಮ್ಮ ನಡವಳಿಕೆಯಲ್ಲಿ ಎಂತಹ ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಎಂಬ ಅರಿವಿಲ್ಲದೆ ದಂಪತಿಗಳು ಪೋಷಕರಾಗಿ ಬಿಡುತ್ತಿದ್ದಾರೆ. ಈ ಮಕ್ಕಳನ್ನು ಸಾಕುವ ವಿಷಯದಲ್ಲಿ ಸ್ಪಷ್ಟಕಲ್ಪನೆ ಇರದ ಕಾರಣ ಮನೆಯಲ್ಲಿ ಅದು ವಿವಾದಗಳಿಗೆ ಕಾರಣವಾಗುತ್ತದೆ. ಈ ವಿವಾದದಿಂದ ಮಕ್ಕಳ ಮನಸ್ಸಿನಲ್ಲಿಯೂ ಗೊಂದಲಗಳಾಗುವುದು ಸಹಜ. ಜೊತೆಗೆ, ಸೂಕ್ಷ್ಮವಾಗಿ ಗಮನಿಸುವ ಮಕ್ಕಳಿಗೆ ಯಾವ ವಿಷಯದಲ್ಲಿ ಯಾರಿಂದ ತಮಗೆ ಬೆಂಬಲ ಸಿಗುವುದು ಎನ್ನುವ ಅಂದಾಜು ಸಿಕ್ಕಿ, ಅದನ್ನು ಬಳಸಿಕೊಂಡು ಅವರು ಹಿರಿಯರ ನಡುವೆ ತಂದು ಹಾಕಿ, ತಮ್ಮ ಕೆಲಸ ಸಾಧಿಸಿಕೊಳ್ಳುವರು.

ಈ ದೃಷ್ಟಿಯಿಂದ ಮಕ್ಕಳಿಗೆ ಮೊದಲು ಸಿಗಬೇಕಾದ ಶಿಕ್ಷಣ ಎಂದರೆ, ತಮಗೆ ಬೇಕಾದುದೆಲ್ಲ ಸಿಗುವುದಿಲ್ಲ, ಎಲ್ಲವೂ ತಮಗೆ ಇಷ್ಟವಾಗುವ ರೀತಿಯಲ್ಲಿಯೇ ಇರುವುದಿಲ್ಲ, ಅದಕ್ಕೆ ಹೊಂದಿಕೊಂಡು ಹೋಗಬೇಕು ಎನ್ನುವುದು.

ಮತ್ತೊಂದು ಪ್ರಮುಖ ದೋಷ ಎದ್ದು ಕಾಣುತ್ತಿರುವುದು, ತಮ್ಮ ಮಕ್ಕಳು ಇಂಗ್ಲಿಷಿನಲ್ಲಿ ಪ್ರೌಢಿಮೆ ಸಾಧಿಸಿ ಬಿಡಬೇಕು ಎನ್ನುವ ಹಂಬಲ. ಈ ಕಾರಣಕ್ಕಾಗಿ ಅನೇಕ ಪೋಷಕರು ಮಕ್ಕಳೊಟ್ಟಿಗೆ ಮಾತೃಭಾಷೆ ಕಲಿಸದೆ ಇಂಗ್ಲಿಷಿನಲ್ಲಿಯೇ ವ್ಯವಹರಿಸುವರು. ಮಾತೃಭಾಷೆ ಮತ್ತು ಪರಿಸರದ ಭಾಷೆ ಬಾರದಿದ್ದರೆ, ಸಮಾಜದಲ್ಲಿ ಬೆರೆಯುವಿಕೆ ಸಾಧ್ಯವಾಗುವುದಿಲ್ಲ. ಆದುದರಿಂದ ಇಂಗ್ಲಿಷ್‍ ಕಲಿಕೆಯನ್ನು ಶಾಲೆಗೆ ಬಿಟ್ಟು ಮನೆಯಲ್ಲಿ ಮಾತೃಭಾಷೆ ಮತ್ತು ಪರಿಸರದ ಭಾಷೆಯಲ್ಲಿ ವ್ಯವಹರಿಸುವುದು ತುಂಬ ಮುಖ್ಯ.

ಮತ್ತೊಂದು ಶಿಕ್ಷಣ ಕೊಡಬೇಕಾಗಿರುವುದು, ಬಡತನ ಅವಹೇಳನ ಮಾಡುವಂತಹ ವಿಷಯವಲ್ಲ ಎನ್ನುವುದು. ಕೆಲವು ಶಾಲೆಗಳಲ್ಲಿ ಬಡತನದ ಹೀಯಾಳಿಕೆಯಿಂದ ಕುಗ್ಗಿ ಹೋಗಿರುವ ಮಕ್ಕಳನ್ನು ನೋಡಿದ್ದೇನೆ. ಬಡತನ, ಅಂಗವೈಕಲ್ಯ, ಮನೋದೌರ್ಬಲ್ಯಗಳು ಹೀಯಾಳಿಕೆಯ ವಸ್ತುಗಳಾಗಬಾರದು ಎನ್ನುವ ಪಾಠವನ್ನು ಮಕ್ಕಳಿಗೆ ಕಳುಹಿಸಿ ಕೊಡಬೇಕು. ಮಕ್ಕಳು ಪೋಷಕರ ಹಿಡಿತದಲ್ಲಿ ಇರುವುದು ಪ್ರಾಥಮಿಕ ಆರೇಳು ವರ್ಷಗಳು ಮಾತ್ರ. ಅಲ್ಲಿಂದಾಚೆಗೆ ಶಾಲೆಯಲ್ಲಿ ಕಲಿಯುವುದು ಹೆಚ್ಚಾಗುತ್ತದೆ. ಆದುದರಿಂದ ಈ ಆರೇಳು ವರ್ಷಗಳಲ್ಲಿ ಎಂತಹ ಬುನಾದಿ ಹಾಕುತ್ತೇವೆ ಎನ್ನುವುದು ಆ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ.

ಕಥೆಗಳನ್ನು ಹೇಳುವುದರ ಮೂಲಕ ಮಕ್ಕಳಿಗೆ ಹಲವು ಪಾಠಗಳನ್ನು ಹೇಳಿಕೊಡಬಹುದು. ಸಮಯವೇ ಸಿಗುವುದಿಲ್ಲ ಎನ್ನುವ ದೂರನ್ನು ಬದಿಗಿರಿಸಿ, ಪ್ರತಿ ದಿನ ಸ್ವಲ್ಪ ಸಮಯವನ್ನು ಬೆಳೆಯುತ್ತಿರುವ ಮಗುವಿನೊಟ್ಟಿಗೆ ಕಳೆಯುವುದನ್ನು ಅಭ್ಯಾಸ ಮಾಡಿಕೊಳ್ಳ ಬೇಕು.
ಹೆತ್ತವರಿಗೆ ಹೆಗ್ಣ ಮುದ್ದು, ನಿಜ, ಆದರೆ, ಹೆಗ್ಣಕ್ಕೆ ಹೆತ್ತವರು ಮುದ್ದೇ ಎನ್ನುವ ಪ್ರಶ್ನೆಯನ್ನೂ ಕೈಲಾಸಂ ಅವರು ಕೇಳುತ್ತಿದ್ದರು.
ನೀವು ಅತೀ ಮುದ್ದಿನಿಂದ ಸಾಕಿದ ಮಗು ದೊಡ್ಡದಾದ ಮೇಲೆ, ನೀವು ಅದನ್ನು ಸಾಕಿದ ರೀತಿಗೆ ಅದು ನಿಮ್ಮನ್ನು ಇಷ್ಟ ಪಡುವುದೇ ಎಂದು ಯೋಚಿಸಬೇಕು! ಬೆಳೆದು ದೊಡ್ಡದಾದ ನಿಮ್ಮ ಮಗುವನ್ನು ಕಂಡು ನಾಲ್ಕು ಜನ ನಿಮ್ಮ ಬಗ್ಗೆ ಹೆಮ್ಮೆ ಪಡುವರೋ, ಅಥವಾ ನಿಂದಿಸುವರೋ ಎಂದೂ ಯೋಚಿಸಬೇಕಾಗುವುದು.

ಮೌಲ್ಯಗಳು, ಆತ್ಮವಿಶ್ವಾಸ, ಸವಾಲುಗಳನ್ನು ಎದುರಿಸುವ ಸಾಮರ್ಥ್ಯ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಶಕ್ತಿ ಮತ್ತು ಇತರರನ್ನು ಗೌರವಿಸುವುದು ಇವಿಷ್ಟೂ ಮಕ್ಕಳಿಗೆ ಮನೆಯಲ್ಲಿ ಕೊಡಬೇಕಾದ ಶಿಕ್ಷಣ.

Leave a Reply