ಬೆಳಗಾವಿ ವಿಚಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ, ಮಾಡುವುದೂ ಇಲ್ಲ: ಡಿಕೆಶಿ! ಬಗೆಹರಿಯಿತೇ ಬೆಳಗಾವಿ ಗೊಂದಲ?

ಡಿಜಿಟಲ್ ಕನ್ನಡ ಟೀಮ್:

‘ಬೆಳಗಾವಿ ಕಾಂಗ್ರೆಸ್ ವಿಚಾರದಲ್ಲಿ ನಾನು ಹಸ್ತಕ್ಷೇಪ ಮಾಡಿಲ್ಲ, ಮಾಡುವುದೂ ಇಲ್ಲ…’ ಇದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ನೀಡಿರುವ ಸ್ಪಷ್ಟನೆ.

ಕಳೆದ ಕೆಲವು ದಿನಗಳಿಂದ ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಹಾಗೂ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಸಂಬಂಧ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ರಮೇಶ್-ಸತೀಶ್ ಜಾರಕಿಹೊಳಿ ಸಹೋದರರ ನಡುವೆ ವಾಗ್ಸಮರ ನಡೆಯುತ್ತಿದ್ದು, ಈ ಮಧ್ಯೆ ಸಚಿವ ಡಿ.ಕೆ ಶಿವಕುಮಾರ್ ಅವರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಈ ವಿಚಾರವಾಗಿ ಬುಧವಾರ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಿಷ್ಟು…

‘ನಾನೊಬ್ಬ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ಒಬ್ಬ ಕಾರ್ಯಕರ್ತನಾಗಿ ಪಕ್ಷದ ನಾಯಕರು ಹೇಳುವ ಕೆಲಸವನ್ನು ಮಾಡುತ್ತಿದ್ದೇನೆ. ಅದನ್ನು ಬಿಟ್ಟು ಯಾವುದೇ ವೈಯಕ್ತಿಕ ಹಿತಾಸಕ್ತಿ ಇಟ್ಟುಕೊಂಡು ಬೆಳಗಾವಿಯಷ್ಟೇ ಅಲ್ಲ, ಎಲ್ಲಿಯೂ ಹಸ್ತಕ್ಷೇಪ ಮಾಡುತ್ತಿಲ್ಲ. ಬೆಳಗಾವಿಯಷ್ಟೇ, ಮೈಸೂರು, ತುಮಕೂರು, ಮಂಡ್ಯ ಸೇರಿದಂತೆ ಬೇರೆ ಬೇರೆ ಕಡೆ ಹೋಗಿ ಕೆಲಸ ಮಾಡು ಎಂದು ನಾಯಕರು ಸೂಚಿಸಿದರೆ ಅಲ್ಲಿಗೆ ಹೋಗುತ್ತೇನೆ. ಇದಿಷ್ಟೇ ನನ್ನ ಕೆಲಸ. ಈ ಹಿಂದೆ ರಮೇಶ್‍ ಜಾರಕಿಹೊಳಿ ಅವರು ಕರೆದಿದ್ದರು, ಹೋಗಿದ್ದೆ. ನಾಳೆ ಕರೆದರೂ ಹೋಗುತ್ತೇನೆ. ರಮೇಶ್ ಅವರೊಬ್ಬರೇ ಅಲ್ಲ, ಚುನಾವಣೆ ಮತ್ತು ಸಮಸ್ಯೆಗಳು ಎದುರಾದಾಗ ಯಾರು ಬೇಕಾದರೂ ಕರೆದರೂ ಹೋಗಿ ಬಗೆಹರಿಸುವ ಪ್ರಯತ್ನ ಮಾಡುತ್ತಿದ್ದೇನೆ. ಪಿಎಲ್‍ಡಿ ಬ್ಯಾಂಕ್ ಚುನಾವಣೆಗೆ ಸಂಬಂಧಿಸಿದಂತೆ ಲಕ್ಷ್ಮೀ ಹೆಬ್ಬಾಳ್ಕರ್ ವಿಚಾರದಲ್ಲಿ ನಾನು ಹಸ್ತಕ್ಷೇಪ ಮಾಡಿಲ್ಲ. ಅವರು ನಮ್ಮ ಶಾಸಕರಿದ್ದಾರೆ. ಅವರು ಚುನಾವಣೆ ನಡೆಸಿಕೊಂಡು ಹೋಗುತ್ತಾರೆ. ಪಕ್ಷದ ನಾಯಕರು ಈಗಾಗಲೇ ಯಾರ್ಯಾರಿಗೆ ಏನೇನು ಬುದ್ಧಿವಾದ ಹೇಳಬೇಕೋ ಅದನ್ನು ಹೇಳಿ ಆಗಿದೆ.’

ಡಿಕೆಶಿ ಪರ ಸಹೋದರ ಸುರೇಶ್ ಬ್ಯಾಟಿಂಗ್!

ಇನ್ನು ಈ ವಿಚಾರವಾಗಿ ಡಿ.ಕೆ ಶಿವಕುಮಾರ್ ಅವರ ಸಹೋದರ‌ ಹಾಗೂ ಸಂಸದ ಡಿ.ಕೆ. ಸುರೇಶ್, ಕಾಂಗ್ರೆಸ್ ಮುಖಂಡ, ಸಚಿವ ರಮೇಶ್ ಜಾರಕಿಹೊಳಿ ಅವರ ಜತೆ ದೂರವಾಣಿ ಮೂಲಕ ಮಾತಾನಾಡಿದ್ದು, ‘ಬೆಳಗಾವಿ ಚುನಾವಣೆ ರಾಜಕೀಯದಲ್ಲಾಗಲಿ, ಪಕ್ಷದ ಚಟುವಟಿಕೆಯಲ್ಲಾಗಲಿ ಶಿವಕುಮಾರ್ ಯಾವತ್ತೂ ತಲೆ ಹಾಕಿಲ್ಲ. ಅಲ್ಲಿನವರ ಯಾರ ಮಾತನ್ನೂ ಕೇಳಿಲ್ಲ. ಇದು ಯಾರೋ ಸೃಷ್ಟಿಸಿರುವ ಕೇವಲ ಕಪೋಲ ಕಲ್ಪಿತ ಸಂಗತಿ. ಈ ವದಂತಿಯನ್ನು ಮನಸ್ಸಿಗೆ ತೆಗೆದುಕೊಳ್ಳುವ ಅಗತ್ಯವಿಲ್ಲ.
ನೀವು ಮಂತ್ರಿ ಪದವಿಗೆ ರಾಜೀನಾಮೆ ನೀಡಲು ಮುಂದಾಗಿದ್ದೀರಿ ಎಂಬ ಮಾತುಗಳಿವೆ. ಅಂತ ಯೋಚನೆಗಳಿದ್ದರೆ ಮನಸ್ಸಿನಿಂದ ತೆಗೆದುಬಿಡಿ. ನಮ್ಮಿಂದಾಗಲಿ, ನಿಮ್ಮಿಂದಾಗಲಿ ಸಮ್ಮಿಶ್ರ ಸರಕಾರದಲ್ಲಿ ಯಾವುದೇ ಗೊಂದಲಗಳಾಗುವುದು ಬೇಡ’ ಎಂದು ಹೇಳಿದ್ದಾರೆ. ಇದಕ್ಕೆ ರಮೇಶ್ ಜಾರಕಿಹೊಳಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ‘ರಾಜೀನಾಮೆ ಕೊಡುವ ವಿಚಾರ ಕೇವಲ ವದಂತಿಯಷ್ಟೇ. ಆದರೆ ಬೆಳಗಾವಿ ವಿಚಾರದಲ್ಲಿ ಯಾರ ಹಸ್ತಕ್ಷೇಪವನ್ನೂ ಸಹಿಸುವುದಿಲ್ಲ. ಯಾರಿಗಾದರೂ, ಏನಾದರೂ ಸಮಸ್ಯೆ ಇದ್ದರೆ ಹೈಕಮಾಡ್ ಬಳಿ ಹೋಗಬಹುದು’ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾಗಿ ಮೂಲಗಳು ಮಾಹಿತಿ ನೀಡಿವೆ.

Leave a Reply