ಡಿಜಿಟಲ್ ಕನ್ನಡ ಟೀಮ್:
‘ಕೊಡಗಿನ ಜನ ಬಿಜೆಪಿಗೆ 25 ವರ್ಷಗಳಿಂದ ಮತ ಹಾಕುತ್ತಲೇ ಬಂದಿದ್ದಾರೆ. ಆದರೆ ಅವರಿಗೆ ಬಿಜೆಪಿ ಕೊಟ್ಟಿರುವುದಾದರೂ ಏನು?’ ಇದು ಕೊಡಗಿನ ಪ್ರವಾಹಕ್ಕೆ ಕೇಂದ್ರದಿಂದ ಹೆಚ್ಚುವರಿ ಪರಿಹಾರ ಕೊಡಿಸುವಲ್ಲಿ ವಿಫಲವಾದ ಬಿಜೆಪಿ ನಾಯಕರಿಗೆ ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಕೇಳಿರುವ ಪ್ರಶ್ನೆ.
ಶೀಘ್ರದಲ್ಲೇ ವಿಧಾನಸೌಧ ಹಾಸನಕ್ಕೆ ಶಿಫ್ಟ್ ಆದರೆ ಅನುಮಾನವಿಲ್ಲ ಎಂದು ಬಿಜೆಪಿ ನಾಯಕರು ಟೀಕೆ ಮಾಡಿರುವ ಬೆನ್ನಲ್ಲೇ ಕಟುವಾಗಿ ಟೀಕಿಸಿರುವ ರೇವಣ್ಣ ಹೇಳಿದ್ದಿಷ್ಟು…
‘ಕೊಡಗಿನ ಬಗ್ಗೆ ಕೇಂದ್ರಕ್ಕೆ ಹೋಗಿ ಮಾತಾಡಲು ಇವರಿಗೆ ಆಗಲಿಲ್ಲ. ಬಿಜೆಪಿ ಸಂಸದರಿಗೆ ಫೀಜ್ ಆಫ್ ಆಗಿದೆ. ಕೊಡಗಿನ ಜನ 25 ವರ್ಷ ಬಿಜೆಪಿಗೆ ಮತ ಹಾಕಿದ್ದಾರೆ. ಆದರೆ ಅವರಿಗಾಗಿ ಬಿಜೆಪಿ ನಾಯಕರು ಏನನ್ನೂ ಮಾಡಿಲ್ಲ. ಅವರು ಕೊಡಗಿಗೆ ಒಂದೇ ಒಂದು ಪೈಸೆ ಹಣ ಬಿಡುಗಡೆ ಮಾಡಿಲ್ಲ. ಬಿಜೆಪಿ ಮುಖಂಡರಿಗೆ ನೈತಿಕತೆ ಇಲ್ಲ. ಬೆಂಗಳೂರಿನಲ್ಲಿ ಕೆಲವರಿಂದ ಹಣ ಎತ್ತಿ ಕೊಡಗಿಗೆ ಹಂಚುತ್ತಿದ್ದಾರೆ. ಹೀಗಾಗಿ ಬಿಜೆಪಿಯವರಿಂದ ನಾನು ಪಾಠ ಕಲಿಯಬೇಕಾ?
ಬಿಜೆಪಿಯವರು ಶಿವಮೊಗ್ಗಕ್ಕೆ ಏನೇನು ಮಾಡಿದ್ದಾರೆ ಎನ್ನುವುದನ್ನು ನೋಡಿಕೊಂಡು ಬರಲಿ. ಬಿಜೆಪಿಯವರ ಬಂಡವಾಳ ನನಗೆ ಗೊತ್ತಿಲ್ಲವಾ. ಇನ್ನೂ ನಾವು ಕೆಶಿಪ್ ಕಚೇರಿ ಸ್ಥಳಾಂತರ ಮಾಡಿಲ್ಲ. ಅದು ತಾತ್ಕಾಲಿಕ ಕಚೇರಿಯಾಗಿದೆ. ನಾನು ವಿಧಾನಸೌಧ ಸ್ಥಳಾಂತರ ಮಾಡಲ್ಲ. ಬಿಜೆಪಿಯವರು ಕೆಲಸ ಮಾಡಲ್ಲ ಬರೀ ಆರೋಪ ಮಾಡುತ್ತಾರೆ ಅಷ್ಟೆ. ಬೆಳಗ್ಗೆ ಎದ್ದರೆ ಭಜನೆ ಮಾಡದೇ ಸಿಎಂ ಮತ್ತು ನನ್ನ ಬಗ್ಗೆ ಟೀಕೆ ಮಾಡುತ್ತಿರುತ್ತಾರೆ.
ಕೇಂದ್ರ ಸರ್ಕಾರ ಕೊಡಗಿಗೆ ಹಣ ಕೊಡದೇ ಇದ್ದರೂ ಪರವಾಗಿಲ್ಲ ರಾಜ್ಯ ಸರ್ಕಾರದಿಂದ ಅಭಿವೃದ್ಧಿ ಮಾಡುತ್ತೇವೆ. ಕೊಡಗಿನ ರಸ್ತೆಗಳನ್ನು ಸರಿಪಡಿಸುತ್ತೇವೆ.’