ಉತ್ತರ ಕರ್ನಾಟಕಕ್ಕೆ ಕೆಲ ಸರ್ಕಾರಿ ಕಚೇರಿ ಶಿಫ್ಟ್! ಸಚಿವ ಸಂಪುಟದ ಪ್ರಮುಖ ತೀರ್ಮಾನಗಳು ಹೀಗಿವೆ

ಡಿಜಿಟಲ್ ಕನ್ನಡ ಟೀಮ್:

ಹಲವು ಸರ್ಕಾರಿ ಕಚೇರಿಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರಗೊಳಿಸಲು ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ತಾತ್ವಿಕವಾಗಿ ಒಪ್ಪಿಗೆ ನೀಡಲಾಗಿದೆ. ಆ ಮೂಲಕ ಉತ್ತರ ಕರ್ನಾಟಕದ ಅಭಿವೃದ್ಧಿಯ ದೃಷ್ಟಿಕೋನದಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ.

ಗುರುವಾರ ಸಂಜೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆದಿದ್ದು, ಈ ಸಭೆಯ ನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ಕಾನೂನು, ಸಂಸದೀಯ ವ್ಯವಹಾರ ಸಚಿವ ಕೃಷ್ಣಬೈರೇಗೌಡ ರವರು ಮಾಹಿತಿಕೊಟ್ಟು ಹೇಳಿದ್ದಿಷ್ಟು…

‘ಉತ್ತರ ಕರ್ನಾಟಕ ಯಾವ ಜಿಲ್ಲೆಗಳಲ್ಲಿ ಯಾವ ಇಲಾಖೆಗಳನ್ನು ಸ್ಥಳಾಂತರಿಸಬೇಕು ಎಂಬುದರ ಬಗ್ಗೆ ಅಂತಿಮವಾಗಿ ತೀರ್ಮಾನಗಳ ಕೈಗೊಳ್ಳಲು ಸಚಿವ ಸಂಪುಟದ ಉಪ ಸಮಿತಿಯನ್ನು ರಚಿಸಲಾಗುವುದು. ಮೊದಲ ಹಂತದಲ್ಲಿ ಕೆಬಿಜೆಎನ್‍ಎಲ್ (ಕೃಷ್ಣ ಭಾಗ್ಯ ಜಲ ನಿಗಮ) ಕರ್ನಾಟಕ ನೀರಾವರಿ ನಿಗಮ, ಕರ್ನಾಟಕ ಕಬ್ಬು ಅಭಿವೃದ್ಧಿ ನಿರ್ದೇಶನಾಲಯ, ಕರ್ನಾಟಕ ವಿದ್ಯುತ್ ಮಗ್ಗ ನಿರ್ದೇಶನಾಲಯ, ಕೆಯುಎಸ್‍ಡಬ್ಲ್ಯೂಡಿಬಿ (ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ) ಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇಬ್ಬರು ಮಾಹಿತಿ ಆಯುಕ್ತರಲ್ಲಿ ಒಬ್ಬ ಮಾಹಿತಿ ಆಯುಕ್ತರನ್ನು ಹಾಗೂ ಮಾನವಹಕ್ಕುಗಳ ಒಬ್ಬ ಸದಸ್ಯರನ್ನು ಉತ್ತರ ಕರ್ನಾಟಕ ಜಿಲ್ಲೆಗೆ ಸ್ಥಳಾಂತರಿಸಲು ನಿರ್ಣಯ ಕೈಗೊಳ್ಳಲಾಗಿದೆ. ಈ ವಿಷಯ ಸಂಪುಟ ಸಭೆಯ ಪಟ್ಟಿಯಲ್ಲಿ ಇಲ್ಲದಿದ್ದರು, ಮುಖ್ಯ ಕಾರ್ಯದರ್ಶಿಗಳು ಮಂಡಿಸಿದ ನಿರ್ಣಯದ ಮೇಲೆ ನಿರ್ಧಾರ ಕೈಗೊಳ್ಳಲಾಯಿತು.’

ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಇತರೆ ನಿರ್ಧಾರಗಳು:

  • ಮೊಬೈಲ್ ಆಪ್ ಮೂಲಕ ಬೆಳೆ ಸಮೀಕ್ಷೆ ಮಾಡಲು ಯೋಜನೆ ರೂಪಿಸಲಾಗಿದೆ. ಸರ್ಕಾರಿ ಮತ್ತು ಖಾಸಗಿ ರೈತರು ಒಳಗೊಂಡಂತೆ ಮೊಬೈಲ್ ಆಪ್‍ಗಳ ಮೂಲಕ ರೈತರು ಯಾವ ಸಂಗಾಮಿ ಬೆಳೆಗಳನ್ನು ಹಾಕಿದ್ದಾರೆ ಎಂಬುದನ್ನು ಈ ಮೂಲಕ ಮೊಬೈಲ್ ಆಪ್ ಮೂಲಕ ಖಚಿತ ಅಂಕಿ ಅಂಶಗಳನ್ನು ಸಂಗ್ರಹಿಸಬಹುದಾಗಿದೆ.
  • ಬೆಟ್ತಿ ನದಿಗೆ ನಿರ್ಮಾಣ ಮಾಡಲಾಗುತ್ತಿರುವ ಸೇತುವೆಗೆ ₹ 14 ಕೋಟಿ ವೆಚ್ಚಕ್ಕೆ ಅನುಮೋದನೆ ನೀಡಲಾಗಿತ್ತು. ಇದನ್ನು ₹ 23.06 ಕೋಟಿಗೆ ಒಪ್ಪಿಗೆ ನೀಡಲಾಗಿದೆ.
  • ಐಇಎಸ್‍ಎ (ಇಂಡಿಯಾ ಎಲೆಕ್ಟ್ರಾನಿಕ್ ಮತ್ತು ಸೆಮಿಕಂಡ್ಟಕರ್ ಅಸೋಷಿಯೇಷನ್ ಸಂಸ್ಥೆಯ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ಸೆಮಿಕಂಡ್ಟಕರ್ ಫಾಭ್ಯಲೆಸ್ ಆಕ್ಸಲರೇಟರ್ ಲ್ಯಾಬ್ (ಎಸ್‍ಎಫ್‍ಎಎಲ್) ಸ್ಥಾಪನೆ. ಇದು ದೇಶದಲ್ಲೇ ಪ್ರಥಮವಾಗಿದ್ದು ಒಟ್ಟು ₹ 56.31 ಕೋಟಿ ರೂ ವೆಚ್ಚದಲ್ಲಿ ಸ್ಥಾಪನೆಯಾಗುತ್ತದೆ. ಇದರಲ್ಲಿ ₹21.53 ಕೋಟಿ ಕರ್ನಾಟಕ ಸರ್ಕಾರದ ಪಾಲು.
  • ರಾಮನಗರ ಪಟ್ಟಣದಲ್ಲಿ ವಿವಿಧ ಇಲಾಖೆಗಳ ಕಚೇರಿ ಸಂಕೀರ್ಣಕ್ಕಾಗಿ ₹30 ಕೋಟಿ ವೆಚ್ಚದ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿತ್ತು. ಅದನ್ನು ಪರಿಷ್ಕರಿಸಿ ₹40.17 ಕೋಟಿ ವೆಚ್ಚದ ಕಾಮಗಾರಿಗಳಿಗೆ ಒಪ್ಪಿಗೆ.
  • ರಾಮನಗರ ಮತ್ತು ಚನ್ನಪಟ್ಟಣ ನಡುವೆ ಬರುವ 16 ಗ್ರಾಮಗಳಿಗೆ ನೆಟ್‍ಕಲ್ ಜಲಾಶಯದಿಂದ ಕುಡಿಯುವ ನೀರು ಸರಬರಾಜು ಮಾಡಲು ₹ 450 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ.
  • ಹಲವು ಖಾಸಗಿ ಸಂಸ್ಥೆಗಳಿಗೆ ಸೋಲಾರ್ ಪ್ಲಾಂಟ್ ನಿರ್ಮಾಣ ಮಾಡಲು ನೇರವಾಗಿ ರೈತರಿಂದ ಜಮೀನು ಖರೀದಿಸಲು ನಿರ್ಧಾರ.
  • ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಟಗರಾಪುರ ಮತ್ತು ಇತರೆ 19 ಗ್ರಾಮಗಳಿಗೆ ಹಾಗೂ ಯಳ್ಳಂದೂರು ತಾಲ್ಲೂಕಿನ 44 ಗ್ರಾಮಗಳಿಗೆ ಬಹುಗ್ರಾಮ ಯೋಜನೆಯಡಿ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಅನುಷ್ಠಾನಗೊಳಿಸಲು ಅನುಮೋದನೆ.
  • ಹಾಸನದಲ್ಲಿ ಹೊಳೇನರಸಿಪುರದ ಹರದನಹಳ್ಳಿಯಲ್ಲಿ ವಸತಿಯುಕ್ತ ಸರ್ಕಾರಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆಗೆ ₹15 ಕೋಟಿ ಯೋಜನೆ.
  • ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಯಲಗಟ್ಟ ಮತ್ತು ಇತರೆ 10 ಗ್ರಾಮಗಳಿಗೆ “ಬಹುಗ್ರಾಮ ಯೋಜನೆ” ಯಡಿ ಶಾಶ್ವತ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಅನುಷ್ಟಾನಗೊಳಿಸಲು ಅನುಮೋದನೆ.

Leave a Reply