ರಾಜ್ಯ ಸರ್ಕಾರಕ್ಕೆ ಕಂಟಕವಾಗಿರೋ ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಗೆಲ್ಲೋದ್ಯಾರು?

ಡಿಜಿಟಲ್ ಕನ್ನಡ ಟೀಮ್:

ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಸಾಕಷ್ಟು ಗಮನ ಸೆಳೆದಿದೆ. ಈ ಚುನಾವಣೆಯಲ್ಲಿ ಬೆಳಗಾವಿಯ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ರಮೇಶ್ ಜಾರಕಿಹೊಳಿ ಸಹೋದರರ ನಡುವೆ ಜಿದ್ದಾಜಿದ್ದಿ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸುವ ಮಟ್ಟಕ್ಕೆ ಬಂದು ನಿಂತಿದೆ.

ಇಂದು ಮಧ್ಯಾಹ್ನ ಚುನಾವಣೆ ನಡೆಯಲಿದ್ದು, ಯಾವ ಬಣಕ್ಕೆ ಗೆಲುವು ಧಕ್ಕಲಿದೆ ಅನ್ನೋದು ಕುತೂಹಲ ಮೂಡಿಸಿದೆ. ಮೇಲ್ನೋಟಕ್ಕೆ ಪಿಎಲ್‌ಡಿ ಬ್ಯಾಂಕ್‌ನಲ್ಲಿ ಒಟ್ಟು 14 ನಿರ್ದೇಶಕರಿದ್ದು, ಅದರಲ್ಲಿ‌ಲಕ್ಷ್ಮೀ ಹೆಬ್ಬಾಳ್ಕರ್ ಪರವಾಗಿ 9 ಮಂದಿ ಹಾಗು ಜಾರಕಿಹೊಳಿ ಸಹೋದರರ ಪರವಾಗಿ 5 ಮಂದಿ ಇದ್ದಾರೆ. ಆದರೂ ಚುನಾವಣೆ ರಾಜ್ಯದ ಗಮನ ಸೆಳೆದಿದೆ.

ಅಧ್ಯಕ್ಷ, ಉಪಾಧ್ಯಕ್ಷರನ್ನು ತಮ್ಮ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು ಅನ್ನೋ‌ ಹಠಕ್ಕೆ ಬಿದ್ದು ರಮೇಶ್ ಜಾರಕಿಹೊಳಿ ಹಾಗೂ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಮಾತಿನ ಸಮರವನ್ನೇ ನಡೆಸಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಕೂಡ ಇಬ್ಬರನ್ನೂ ಕೂರಿಸಿ ಮಾತನಾಡಿದ್ರು. ಈ ವೇಳೆ ಬೆಳಗಾವಿ ವಿಚಾರಕ್ಕೆ ತಲೆ ಹಾಕದಂತೆ ಸೂಚಿಸಿದ್ದ ರಮೇಶ್ ಜಾರಕಿಹೊಳಿ, ಬಳಿಕ ನೇರವಾಗಿಯೇ ಮಾಧ್ಯಮಗಳ ಮೂಲಕ ಎಚ್ಚರಿಕೆ ರವಾನಿಸಿದ್ರು.

ನಾವು ಬೆಂಗಳೂರು ವಿಚಾರಕ್ಕೆ ಹೋಗುವುದಿಲ್ಲ, ಬೇರೆ ಯಾರೂ ಬೆಳಗಾವಿ ವಿಚಾರಕ್ಕೆ ಬರುವುದು ಬೇಡ ಎಂದು ಎಚ್ಚರಿಕೆ ನೀಡಿದ್ದರು. ಒಂದು ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಹದ್ದುಬಸ್ತಿನಲ್ಲಿ ಹಿಡದೇ ಹೋದರೆ ನಾವು ಕಠಿಣ ನಿರ್ಧಾರ ಕೈಗೊಳ್ಳಬೇಕಾಗುತ್ತೆ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.

ಜಾರಕಿಹೊಳಿ ಸಹೋದರರ ಬೆದರಿಕೆಗೆ ಕಂಗಾಲಾಗಿರುವ ಕಾಂಗ್ರೆಸ್ ಹೈಕಮಾಂಡ್, ಲಕ್ಷ್ಮೀ ಹೆಬ್ಬಾಳ್ಕರ್‌ಗೆ ತಾಳ್ಮೆ ವಹಿಸಲು ಸೂಚಿಸಿದೆ. ಯಾವುದೇ ಮಾತಿನ ದೂಸ್ರಾ ಹಾಕದಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮೂಲಕ ಸಂದೇಶ ಕಳುಹಿಸಿದೆ. ಜೊತೆಗೆ ಲಕ್ಷ್ಮೀ ಹೆಬ್ಬಾಳ್ಕರ್ ಪರ ಬ್ಯಾಟಿಂಗ್ ಮಾಡ್ತಿದ್ದ ಡಿ.ಕೆ ಶಿವಕುಮಾರ್‌ಗೆ ಎಚ್ಚರ ವಹಿಸುವಂತೆ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ. ನಿನ್ನೆ ಸಂಜೆ ಮಾತನಾಡಿರುವ ಸತೀಶ್ ಜಾರಕಿಹೊಳಿ ಚುನಾವಣೆ ನಡೆಯಲಿದ್ದು, ಯಾರು ಗೆಲ್ತಾರೆ ನೋಡೋಣ, ಆ ಬಳಿಕ ಏನು ಮಾಡಬೇಕೆಂದು ನಿರ್ಧಾರ ಮಾಡೋಣ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಲಕ್ಷ್ಮೀ ಹೆಬ್ಬಾಳ್ಕರ್ ಪರವಾಗಿ 9 ಮಂದಿ ನಿರ್ದೇಶಕರು ಇದ್ದರೂ‌ ಸಹ ಜಾರಕಿಹೊಳಿ ಸಹೋದರರ ಬೆಂಬಲಿಗರೇ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗ್ತಾರೆ ಅನ್ನೋ ಮಾತುಗಳು ಕೇಳಿಬಂದಿವೆ. ಒಂದು ವೇಳೆ ಪಿಎಲ್‌ಡಿ ಬ್ಯಾಂಕ್ ವಿಚಾರದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಹಠಕ್ಕೆ ಬಿದ್ದು ತಮ್ಮ ಬೆಂಬಲಿಗರನ್ನು ನಾಮಿನೇಷನ್ ಹಾಕಿಸಿ ಗೆಲ್ಲಿಸಿಕೊಂಡು‌ ಬಿಟ್ರೆ ರಾಜ್ಯ ಸರ್ಕಾರಕ್ಕೆ ಸಮಸ್ಯೆ ಎದುರಾಗಲಿದೆ. ಜಾರಕಿಹೊಳಿ ಸಹೋದರರು ಸಾಕಷ್ಟು ವರ್ಷಗಳಿಂದ ರಾಜಕೀಯ ಮಾಡಿಕೊಂಡು ಬರುತ್ತಿದ್ದು, ಜಿಲ್ಲೆಯಲ್ಲಿ ರಾಜಕೀಯ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಅದಕ್ಕಾಗಿಯೇ ಇಷ್ಟೆಲ್ಲಾ ರಾದ್ಧಾಂತ ಮಾಡಿಕೊಳ್ಳುತ್ತಿದ್ದು, ತಮ್ಮದೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಸಲು ಸ್ಕೆಚ್ ರೆಡಿಯಾಗಿದೆ ಎನ್ನಲಾಗಿದೆ. ಚುನಾವಣೆಗೆ ಕೆಲವೆ ಗಂಟೆಗಳು ಬಾಕಿ ಇದ್ದು ಸಂಜೆ 3 ಗಂಟೆ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ.

Leave a Reply