ಚೀನಾಗೆ ಬ್ರೇಕ್ ಹಾಕಲು ಭಾರತದ ಜತೆ ಅಮೆರಿಕ ‘ಕೋಮ್ ಕಾಸ’ ರಕ್ಷಣಾ ಒಪ್ಪಂದ! ಏನಿದರ ಮಹತ್ವ?

ಡಿಜಿಟಲ್ ಕನ್ನಡ ಟೀಮ್:
ಚೀನಾದ ಕುತಂತ್ರಕ್ಕೆ ಭಾರತ ಈಗ ಸೆಡ್ಡು ಹೊಡೆದು ನಿಲ್ಲಲಿದೆ. ಇನ್ನು ಮುಂದೆ ಚೀನಾದ ಷಡ್ಯಂತ್ರಗಳು ನಡೆಯೋದಿಲ್ಲ. ಕಾರಣ ಭಾರತ ಹಾಗೂ ಅಮೆರಿಕ ನಡುವಣ ಮೊದಲ 2+2 ಉನ್ನತ ಮಟ್ಟದ ಸಭೆಯಲ್ಲಿ ಮಾಡಿಕೊಳ್ಳಲಾದ ಕೋಮ್ ಕಾಸ (COMCASA) ಒಪ್ಪಂದ.
ಹೌದು, ಭಾರತ ಹಾಗೂ ಅಮೆರಿಕದ ವಿದೇಶಾಂಗ ಹಾಗೂ ರಕ್ಷಣಾ ಸಚಿವರುಗಳ ಈ ಸಭೆಯಲ್ಲಿ ಭಾರತ ಹಾಗೂ ಅಮೆರಿಕ ಈ ಮಹತ್ವದ ಮಿಲಿಟರಿ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಒಪ್ಪಂದ ಭಾರತದ ಪಾಲಿಗೆ ಎಷ್ಟು ಮಹತ್ವ ಎಂದರೆ, ಈ ಒಪ್ಪಂದದಿಂದ ಭಾರತ ಬಹುತೇಕ ನ್ಯಾಟೋ ಸದಸ್ಯ ರಾಷ್ಟ್ರಗಳ ಮಿಲಿಟರಿ ಸ್ಥಾನ ಪಡೆದುಕೊಂಡಿದೆ. ಅದರೊಂದಿಗೆ ಭಾರತದೊಂದಿಗೆ ಅಮೆರಿಕ ಮಿಲಿಟರಿ ತಂತ್ರಜ್ಞಾನ, ಗುಪ್ತಚರ ಇಲಾಖೆಯ ಮಾಹಿತಿ, ಇಂಡೋ ಫೆಸಿಫಿಕ್ ಪ್ರದೇಶದಲ್ಲಿ ಸಹಕಾರ ಸೇರಿದಂತೆ ಅನೇಕ ಪ್ರಮುಖ ಅಂಶಗಳನ್ನು ಹಂಚಿಕೊಳ್ಳಲಿದೆ.
ಕೋಮ್ ಕಾಸ ಒಪ್ಪಂದದ ಮುಖ್ಯಅಂಶಗಳು…
  • ಇರಾನ್ ನಲ್ಲಿ ಭಾರತದ ಚಬಹರ್ ಬಂದರು ಅಭಿವೃದ್ಧಿಗೆ ಅಮೆರಿಕದಿಂದ ಆಕ್ಷೇಪವಿಲ್ಲ.
  • ಅಮೆರಿಕ ತನ್ನ ಗುಪ್ತಚರ ಇಲಾಖೆಗಳ ಪ್ರಮುಖ ಮಾಹಿತಿಗಳನ್ನು ಭಾರತದೊಂದಿಗೆ ವಿನಿಮಯ.
  • ಇಷ್ಟು ದಿನಗಳ ಕಾಲ ಅಮೆರಿಕದಿಂದ ಖರೀದಿಸಿದ ಯುದ್ಧ ವಿಮಾನಗಳಲ್ಲಿ ಇಲ್ಲದ ಅತ್ಯಾಧುನಿಕ ಸಂಪರ್ಕ ವ್ಯವಸ್ಥೆ ತಂತ್ರಜ್ಞಾನ ಮುಂದಿನ ದಿನಗಳಲ್ಲಿ ಲಭ್ಯ.
  • ಇಂಡೋ-ಫೆಸಿಫಿಕ್ ಪ್ರದೇಶದಲ್ಲಿ ಅಮೆರಿಕ ಹಾಗೂ ಭಾರತದ ಯುದ್ಧ ನೌಕೆಗಳು ಪರಸ್ಪರ ಮಾಹಿತಿ ವಿನಿಮಯಕ್ಕೆ ಅವಕಾಶ.
  • ಸಮುದ್ರ ಗಡಿ ಕಾಯಲು ಬಳಸುವ ದೊಡ್ಡ ತಂತ್ರಜ್ಞಾನದ ಡ್ರೋನ್ ಸೇರಿದಂತೆ ಪ್ರಮುಖ ಸ್ಪೈ ಸಾಧನಗಳ ಖರೀದಿಗೆ ಅವಕಾಶ.
  • ಎಸ್-400 ಸೇರಿದಂತೆ ರಷ್ಯಾದಿಂದ ಇತರೆ ಮಿಲಿಟರಿ ಶಸ್ತ್ರಾಸ್ತ್ರ ಖರೀದಿಗೆ ಅಮೆರಿಕ ಅವಕಾಶ.
ಈ ಎಲ್ಲಾ ಅಂಶಗಳು ಭಾರತೀಯ ಸೇನಾ ಪಡೆಗಳಿಗೆ ದೊಡ್ಡ ನೆರವಾಗಲಿದ್ದು, ಚೀನಾ ಕಣ್ಣು ಕೆಂಪಾಗಿಸಿದೆ. ಜಾಗತಿಕ ಮಟ್ಟದಲ್ಲಿ ಅಮೆರಿಕಕ್ಕೆ ಪರ್ಯಾಯ ಶಕ್ತಿಯಾಗಿ ಬೆಳೆಯಲು ಪ್ರಯತ್ನಿಸುತ್ತಿರುವ ಚೀನಾಕ್ಕೆ ಬ್ರೇಕ್ ಹಾಕಲು ಟ್ರಂಪ್ ಸರ್ಕಾರ ಭಾರತದ ಜತೆಗೆ ಇಷ್ಟು ದೊಡ್ಡ ಮಿಲಿಟರಿ ಒಪ್ಪಂದಕ್ಕೆ ಮುಂದಾಗಿದೆ.

Leave a Reply