ಗೆದ್ದು ಬೀಗಿದ ಲಕ್ಷ್ಮಿ ಹೆಬ್ಬಾಳ್ಕರ್! ಸಂಧಾನ ಸೂತ್ರಕ್ಕೆ ಮಣಿದ ಜಾರಕಿಹೊಳಿ ಬ್ರದರ್ಸ್!

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ರಾಜಕೀಯವನ್ನೇ ಬದಲಿಸುವ ಆತಂಕಕ್ಕೆ ಕಾರಣವಾಗಿದ್ದ ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಬಣ ಗೆಲುವು ಸಾಧಿಸಿದೆ.

ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮಹಾದೇವ್ ಪಾಟೀಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನು ಉಪಾಧ್ಯಕ್ಷ ಸ್ಥಾನಕ್ಕೂ ಲಕ್ಷ್ಮಿ ಅವರ ಬಣದ ಅಭ್ಯರ್ಥಿ ಬಾಪು ಸಾಬ ಜಮಾದಾರ್ ಆಯ್ಕೆಯಾಗಿದ್ದಾರೆ.

ಮಹಾದೇವ್ ಪಾಟೀಲ್

ಈ ಚುನಾವಣೆಯಲ್ಲಿ ಸಚಿವ ಜಾರಕಿಹೊಳಿ ಸಹೋದರರು ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಅವರ ನಡುವೆ ತೀವ್ರ ಜಿದ್ದಾಜಿದ್ದಿನ ವಾಕ್ಸಮರ ರಾಜ್ಯ ಮೈತ್ರಿ ಸರ್ಕಾರದ ಬುಡ ಅಲುಗಾಡುವಂತೆ ಮಾಡಿತ್ತು. ಆದರೆ ಇಂದು ಸಂಧಾನ ನಡೆದ ನಂತರ ಸಚಿವ ರಮೇಶ್ ಜಾರಕಿಹೊಳಿ ಅವರ ಬಣದ ಅಭ್ಯರ್ಥಿಗಳು ಚುನಾವಣೆ ಯಿಂದ ಹಿಂದೆ ಸರಿದ ಪರಿಣಾಮ ಲಕ್ಷ್ಮಿ ಹೆಬ್ಬಾಳ್ಕರ್ ಬಣದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ರಾಜಿ ಸೂತ್ರದೊಂದಿಗೆ ಚುನಾವಣೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಜಾರಕಿಹೊಳಿ ಸಹೋದರರ ನಡುವನ ಭಿನ್ನಾಭಿಪ್ರಾಯ ಬಗೆಹರಿಸಲಾಗಿದ್ದು, ಮೈತ್ರಿ ಸರ್ಕಾರಕ್ಕೆ ಬೆಟ್ಟವಾಗಿ ಕಾಡಿದ್ದ ಸಮಸ್ಯೆ ಮಂಜಿನಂತೆ ಕರಗಿದೆ. ಹೀಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಮತ್ತೊಂದು ಅಗ್ನಿ ಪರೀಕ್ಷೆಯಲ್ಲಿ ಪಾಸಾಗಿದೆ.

ಬಾಪು ಸಾಬ ಜಮಾದಾರ್

ಚುನಾವಣೆ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷರು ಈಶ್ವರ್ ಖಂಡ್ರೆ, ‘ಬೆಳಗಾವಿ ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಕೆಲವು ಅಭಿಪ್ರಾಯ ಭೇದ ಸಹಜವಾಗಿರುತ್ತದೆ. ಇದನ್ನು ಸ್ಥಳೀಯ ನಾಯಕರು ಕೂತು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಾಗಿದೆ. ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರಾಗಿ ಮಹಾದೇವ್ ಪಾಟೀಲ್ ಅವರು ಆಯ್ಕೆಯಾಗಿದ್ದು, ಉಪಾಧ್ಯಕ್ಷರನ್ನೂ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಈ ವಿಚಾರದಲ್ಲಿ ಬೆಳಗಾವಿ ಕಾಂಗ್ರೆಸ್ ನ ಎಲ್ಲಾ ನಾಯಕರ ಬೆಂಬಲವಿದೆ. ಈ ವಿಚಾರದಲ್ಲಿ ಸಹಕರಿಸಿದ ಎಲ್ಲಾ ನಾಯಕರಿಗೂ ಧನ್ಯವಾದಗಳು’ ಎಂದರು.

Leave a Reply