ಲೋಕಸಭೆ ಚುನಾವಣೆಗೆ ಅಮಿತ್ ಶಾ ನೇತೃತ್ವ! ಬಿಜೆಪಿಯದ್ದು’ಅಜೇಯ’ ಮಂತ್ರ!

ಡಿಜಿಟಲ್ ಕನ್ನಡ ಟೀಮ್:

2019ರ ಲೋಕಸಭೆ ಚುನಾವಣೆಯನ್ನು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಎದುರಿಸಲು ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಜತೆಗೆ ಲೋಕಸಭಾ ಚುನಾವಣೆಗಾಗಿ ‘ಅಜೇಯ ಬಿಜೆಪಿ’ ಎಂಬ ಘೋಷವಾಕ್ಯವನ್ನು ಬಳಸಲು ನಿರ್ಧರಿಸಲಾಗಿದೆ.

ಶನಿವಾರ ನವದೆಹಲಿಯ ಡಾ.ಅಂಬೇಡ್ಕರ್ ಇಂಟರ್ ನ್ಯಾಷನಲ್ ಸೆಂಟರ್ ನಲ್ಲಿ ಎರಡು ದಿನಗಳ ಬಿಜೆಪಿ ಕಾರ್ಯಕಾರಿ ಸಮಿತಿ ಸಭೆ ಆರಂಭವಾಗಿದ್ದು ಈ ಸಭೆಗೂ ಮುನ್ನ ಪಕ್ಷದ ಪದಾಧಿಕಾರಿಗಳ ಸಭೆ ನಡೆಯಿತು. ಮುಂದಿನ ವರ್ಷ ಜನವರಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಮಿತ್ ಶಾ ಅವರ ಅಧಿಕಾರ ಅವಧಿ ಮುಕ್ತಾಯವಾಗಲಿದೆ. ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಯನ್ನು ಅಮಿತ್ ಶಾ ನೇತೃತ್ವದಲ್ಲಿ ನಡೆಸಲು ತೀರ್ಮಾನಿಸಲಾಯಿತು.

ಇತ್ತೀಚೆಗೆ ಎಸ್ಸಿ ಎಸ್ಟಿ ಕಾಯಿದೆ ತಿದ್ದುಪಡಿ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಈ ಸಮುದಾಯದವರ ಮನವೊಲಿಸಲು ಅಂಬೇಡ್ಕರ್ ಕೇಂದ್ರದಲ್ಲಿ ಅವರ ಪ್ರತಿಮೆಗೆ ಗೌರವ ಸಲ್ಲಿಸಲಾಯಿತು. ಜತೆಗೆ ಪೆಟ್ರೋಲ್ ಬೆಲೆ ಏರಿಕೆ, ರೈತರ ಪ್ರತಿಭಟನೆಯಂತಹ ಸವಾಲಿನ ಬಗ್ಗೆ ಚರ್ಚಿಸಲಾಯಿತು.

ಈ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ, ‘ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಲಿದ್ದು, 2014ರ ಚುನಾವಣೆಗಿಂತ ಹೆಚ್ಚು ಸ್ಥಾನ ಗಳಿಸಲಿದೆ’ ಎಂದು ತಿಳಿಸಿದರು.

ಕಾರ್ಯಕಾರಣಿಯಲ್ಲಿ ತಂತ್ರಗಾರಿಕೆ: ಪದಾಧಿಕಾರಿಗಳ ಸಭೆ ನಂತರ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ಈ ವರ್ಷ ನಡೆಯಲಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆ ತಯಾರಿ ಹಾಗೂ ತಂತ್ರಗಾರಿಕೆ ಕುರಿತು ಚರ್ಚಿಸಲಾಯಿತು.

Leave a Reply