ಡಿಕೆಶಿ ಸಹೋದರರ ವಿರುದ್ಧ ಐಟಿಗೆ ಬಿಎಸ್‍ವೈ ಪತ್ರ: ಸುರೇಶ್ ವಾಗ್ದಾಳಿ

ಡಿಜಿಟಲ್ ಕನ್ನಡ ಟೀಮ್:

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಮತ್ತು ತಮ್ಮ ಸಹೋದರ, ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಿದ್ದಾರೆಂದು ಗಂಭೀರವಾಗಿ ಆರೋಪಿಸಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್, ಈ ಸಂಬಂಧ ಬಿಎಸ್‍ವೈ ತೆರಿಗೆ ಇಲಾಖೆ ಮುಖ್ಯಸ್ಥರಿಗೆ ಬರೆದಿರುವ ಪತ್ರದ ಪ್ರತಿಯನ್ನು ಬಿಡುಗಡೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸುರೇಶ್, ‘ನನ್ನ ಮತ್ತು ನನ್ನ ಸಹೋದರ ಶಿವಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಯಡಿಯೂರಪ್ಪ ಅವರು 2017 ರ ಜನವರಿ 10 ರಂದು ನವದೆಹಲಿಯ ಕೇಂದ್ರೀಯ ನೇರ ತೆರಿಗೆ ಮಂಡಳಿಯ ಅಧ್ಯಕ್ಷ ಸುಶೀಲ್ ಚಂದ್ರ ಅವರಿಗೆ ಪತ್ರ ಬರೆದಿದ್ದಾರೆ’ ಎಂದು ಆರೋಪಿಸಿದರು.

ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ, ಕೇಂದ್ರ ತನಿಖಾ ಸಂಸ್ಥೆ ಸಿಬಿಐ ಸೇರಿದಂತೆ ಇನ್ನಿತರೆ ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲೆ ಒತ್ತಡ ತಂದು ತಮ್ಮನ್ನು ಮತ್ತು ತಮ್ಮ ಸಹೋದರ ಸಚಿವ ಡಿಕೆಶಿ ಅವರನ್ನು ಬಂಧಿಸಲು ರಾಜ್ಯದ ಕೆಲ ಬಿಜೆಪಿ ನಾಯಕರು ಸಂಚು ನಡೆಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಪ್ರಧಾನಿ ಭೇಟಿಗೆ ಪತ್ರ!

ರಾಜ್ಯದ ಬಿಜೆಪಿಯ ಕೆಲ ನಾಯಕರು ದೆಹಲಿ ವರಿಷ್ಠರ ಮೂಲಕ ಈ ಪಿತೂರಿ ನಡೆಸಿದ್ದು, ಇದು ಪ್ರಧಾನಿ ಮೋದಿ ಅವರ ಗಮನಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಹೀಗಾಗಿ ಈ ಬಗ್ಗೆ ಗಮನ ಸೆಳೆಯಲು ಅವಕಾಶ ನೀಡುವಂತೆ ಪತ್ರ ಬರೆದು ಪ್ರಧಾನಿ ಅವರನ್ನು ಕೇಳುವುದಾಗಿ ಸುರೇಶ್ ತಿಳಿಸಿದರು.

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ತಮ್ಮ ರಾಜಕೀಯ ವಿರೋಧಿಗಳನ್ನು ಸದೆ ಬಡಿಯಲು ಬಿಜೆಪಿ ಮುಖಂಡರು ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿರುವುದು ಈಗಾಗಲೇ ಸಾಬೀತಾಗಿರುವ ವಿಚಾರ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲು ಹಾಗೂ ಉಳಿಯಲು ಬಂಡೆಗಲ್ಲಿನಂತೆ ನಿಂತಿರುವ ಶಿವಕುಮಾರ್ ಅವರನ್ನು ರಾಜಕೀಯವಾಗಿ ಮುಗಿಸುವ ಹುನ್ನಾರ ಚಾಲ್ತಿಯಲ್ಲಿದೆ. ಗುಜರಾತ್ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಮತ್ತು ಈವರೆಗೂ ರಾಜ್ಯದಲ್ಲಿ ನಮ್ಮ ಪಕ್ಷದ ಶಾಸಕರನ್ನು ಸೆಳೆದುಕೊಳ್ಳಲು ಬಿಜೆಪಿಯು ನಡೆಸಿದ ಸಂಚುಗಳನ್ನು ಶಿವಕುಮಾರ್ ವಿಫಲಗೊಳಿಸಿದ್ದರು. ಈ ಕಾರಣದಿಂದಲೇ ಬಿಜೆಪಿ ನಾಯಕರು ಶಿವಕುಮಾರ್ ಅವರನ್ನು ರಾಜಕೀಯವಾಗಿ ಮುಗಿಸಲು ಕೇಂದ್ರದ ಸಂಸ್ಥೆಗಳನ್ನು ಬಳಸಿಕೊಳ್ಳಲು ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಆದರೆ, ಜನತಾ ನ್ಯಾಯಾಲಯ ಹಾಗೂ ಸಂವಿಧಾನ ತಮ್ಮ ಪರವಾಗಿರುವುದರಿಂದ ಯಾರೇನು ಮಾಡಲು ಸಾಧ್ಯವಿಲ್ಲ ಎಂದು ಗುಡುಗಿದರು. ಗುಜರಾತ್ ರಾಜಕೀಯ ಪ್ರಹಸನ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ಶಿವಕುಮಾರ್ ಹಾಗೂ ಅವರ ಬಂಧು ಬಳಗದವರ ಮೇಲೆ ನಡೆದ ಐಟಿ ದಾಳಿಗಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ನಾಲ್ಕು ಮೊಕದ್ದಮೆಗಳ ತನಿಖೆಗೆ ಸಂಪೂರ್ಣ ಸಹಕಾರ ನೀಡಲಾಗುತ್ತಿದೆ. ಈ ನೆಲದ ಕಾನೂನಿನ ಮೇಲೆ ನಮಗಿರುವ ಗೌರವಕ್ಕೆ ಇದು ಸಾಕ್ಷಿಯಾಗಿದೆ. ಐಟಿ ಪ್ರಕರಣದಲ್ಲಿ ತಮ್ಮನ್ನು ಏನೂ ಮಾಡಲು ಸಾಧ್ಯವಾಗಲಿಲ್ಲ ಎಂದು ದೃಢಪಟ್ಟಿರುವ ರಾಜ್ಯ ಬಿಜೆಪಿ ಮುಖಂಡರು ಅನಗತ್ಯವಾಗಿ ಇಡಿಯಲ್ಲಿ ಪ್ರಕರಣ ದಾಖಲಿಸುವಂತೆ ಒತ್ತಡ ಹಾಕುತ್ತಿದ್ದಾರೆ. ಇದನ್ನು ನಮಗೆ ಅಲ್ಲಿನ ಕೆಲವು ಅಧಿಕಾರಿಗಳೇ ಮತ್ತು ಬಿಜೆಪಿ ಮುಖಂಡರೇ ತಿಳಿಸಿದ್ದಾರೆ ಎಂದು ಹೇಳಿದರು. ಹೇಗಾದರೂ ಮಾಡಿ ಈ ಸರ್ಕಾರವನ್ನು ಉರುಳಿಸಬೇಕು ಮತ್ತು ಲೋಕಸಭೆ ಚುನಾವಣೆಯಲ್ಲಿ ಅವರು ಹಾಕಿಕೊಂಡಿರುವ ಮಿಷನ್-25 ಗುರಿ ಮುಟ್ಟಬೇಕೆಂಬ ವಿಫಲ ಆಸೆಯನ್ನು ಹೊಂದಿದ್ದಾರೆ.

ಬಿಜೆಪಿಯ ಯುವ ಮೋರ್ಚಾ, ಮಹಿಳಾ ಮೋರ್ಚಾದಂತೆ ಐಟಿ ಮೋರ್ಚಾ, ಇಡಿ ಮೋರ್ಚಾ, ಸಿಬಿಐ ಮೋರ್ಚಾದಂತೆ ಕೆಲಸ ಮಾಡಬೇಕಾಗಿ ಬಂದಿರುವ ತಮ್ಮ ದುಸ್ಥಿತಿಯನ್ನು ತನಿಖಾ ಸಂಸ್ಥೆಗಳ ಅಧಿಕಾರಿಗಳೇ ಹರುಳಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರಿಗೆ ಆಪ್ತರಾಗಿದ್ದ ಮುಕುಲ್ ರಾಯ್ ಅವರನ್ನು ಶಾರದ ಚಿಟ್ ಫಂಡ್ ಕೇಸಿನಲ್ಲಿ ಸಿಲುಕಿಸಿ ಬಿಜೆಪಿಗೆ ಎಳೆದುಕೊಂಡು ಹೋದರು. ಅದೇರೀತಿ ಮಹಾರಾಷ್ಟ್ರದಲ್ಲಿ ನಾರಾಯಣ ರಾಣೆ ಅವರನ್ನೂ ಒತ್ತಡದ ಮೂಲಕ ಪಕ್ಷಕ್ಕೆ ಸೆಳೆದರು. ತಮಗೆ ಹಾಗೂ ತಮ್ಮ ಸಹೋದರರಿಗೂ ಬಿಜೆಪಿ ಸೇರುವಂತೆ ಒತ್ತಡ ಹಾಕಲಾಗಿತ್ತು. ಕೇಳದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂಬ ಬೆದರಿಕೆಯನ್ನೂ ಹಾಕಲಾಗಿತ್ತು. ಆ ಬೆದರಿಕೆಯ ಮುಂದುವರಿದ ಭಾಗವೇ ತಮ್ಮ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆಯಾಗಿದೆ ಎಂದು ಆರೋಪಿಸಿದರು.

ಯಾವುದೇ ತನಿಖಾ ಸಂಸ್ಥೆಯ ಅಧಿಕಾರಿಗಳು ಬರಲಿ, ಏನು ಬೇಕಾದರೂ ಮಾಡಿಕೊಳ್ಳಲಿ. ಆದರೆ ಯಾವುದೇ ಪ್ರಮಾದ ಮಾಡದ ನಾವು ಯಾರಿಗೂ ಹೆದರುವುದಿಲ್ಲ ಎಂದು ಹೇಳಿದರು.

ತನಿಖಾ ಸಂಸ್ಥೆಗಳ ದುರ್ಬಳಕೆ ಸಂಬಂಧ ಕುಮಾರಸ್ವಾಮಿಯವರು ಮಾಡಿರುವ ಆರೋಪ ನಿಜ. ಕಾಂಗ್ರೆಸ್‍ನ ಇನ್ನೂ ಮೂರ್ನಾಲ್ಕು ಮುಖಂಡರ ವಿರುದ್ಧ ಕ್ರಮ ತೆಗೆದುಕೊಳ್ಳಲು ಒತ್ತಡ ಹೇರಿರಿವುದೂ ಕೂಡ ನಮ್ಮ ಗಮನಕ್ಕೆ ಬಂದಿದೆ. ಸಂದರ್ಭ ಬಂದಾಗ ಸಾಕ್ಷ್ಯಗಳನ್ನು ಬಿಡುಗಡೆ ಮಾಡುವುದಾಗಿಯೂ ಅವರು ತಿಳಿಸಿದರು.

ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದ ಗೋವಿಂದರಾಜು ಡೈರಿಯಲ್ಲಿದ್ದ ಮಾಹಿತಿಗಳ ಹಾಳೆಯ ಪ್ರತಿಯನ್ನು ಯಡಿಯೂರಪ್ಪನವರು ಬಿಡುಗಡೆ ಮಾಡಿದ್ದೇ ತನಿಖಾ ಸಂಸ್ಥೆಗಳ ಜತೆ ಅವರಿಗೆ ಎಂತಹ ಸಂಬಂಧ ಇದೆ ಎಂಬುದಕ್ಕೆ ಮತ್ತೊಂದು ಉದಾಹರಣೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.

Leave a Reply