ಸಹೋದರ ಸತೀಶ್ ಸಿಎಂ ಆಗೋವರೆಗೂ ಶ್ರಮಿಸುತ್ತೇನೆ: ರಮೇಶ್ ಜಾರಕಿಹೊಳಿ ಶಪಥ!

ಡಿಜಿಟಲ್ ಕನ್ನಡ ಟೀಮ್:

‘ಸಹೋದರ, ಶಾಸಕ ಸತೀಶ ಜಾರಕಿಹೊಳಿ ಮುಖ್ಯಮಂತ್ರಿ ಪಟ್ಟಕ್ಕೇರುವ ತನಕ ತಾವು ವಿಶ್ರಮಿಸುವುದಿಲ್ಲ…’ ಇದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಶಪಥ!

ಹೌದು, ಪಿಎಲ್ ಡಿ ಬ್ಯಾಂಕ್ ಚುನಾವಣೆ ವಿಚಾರದಲ್ಲಿ ತಮ್ಮ ವೈಮನಸ್ಸು ದೂರಮಾಡಿ ಒಂದಾಗಿರುವ ಜಾರಕಿಹೊಳಿ ಸಹೋದರರು ಈಗ ರಾಜ್ಯ ರಾಜಕಾರಣದಲ್ಲಿ ಪ್ರಬಲ ಶಕ್ತಿಯಾಗಿ ಬೆಳೆಯುವತ್ತ ಗಮನ ಹರಿಸಲು ಮುಂದಾಗಿದ್ದಾರೆ.

ಗೋಕಾಕ ನಿವಾಸದಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಜಾರಕಿಹೊಳಿ ಕುಟುಂಬ ಮೊದಲಿನಿಂದಲೂ ಮುಖ್ಯಮಂತ್ರಿ ಹುದ್ದೆಯ ರೇಸ್ ನಲ್ಲಿದೆ. ಹೀಗಾಗಿ ಪಕ್ಷದಲ್ಲಿಯೇ ಕೆಲವು ಕಾಣದ “ಕೈ“ಗಳು ನಮ್ಮ ಕುಟುಂಬದ ವಿರುದ್ಧ ಪಿತೂರಿ ನಡೆಸಿವೆ’ ಎಂದು ಪರೋಕ್ಷವಾಗಿ ಹೆಬ್ಬಾಳ್ಕರ್ ವಿರುದ್ದ ವಾಗ್ದಾಳಿ ನಡೆಸಿದರು.

‘ಜಿಲ್ಲೆಯಲ್ಲಿ ಇಂಥ ಪಿತೂರಿಯಿಂದ ನೋವಾಗಿದೆ. ಆದರೆ, ಯಾವ ಪಿತೂರಿಗಳಿಗೂ ತಾವು ಜಗ್ಗುವುದಿಲ್ಲ. ಸತೀಶ ಜಾರಕಿಹೊಳಿಯವರನ್ನು ಮುಖ್ಯಮಂತ್ರಿ ಪಟ್ಟದಲ್ಲಿ ಕೂರಿಸುವ ತನಕ ವಿಶ್ರಮಿಸುವುದೇ ಇಲ್ಲ’ ಎಂದು ಸವಾಲು ಹಾಕಿದರು.

ಇನ್ನು ಪಕ್ಷ ತ್ಯಜಿಸುವ ವದಂತಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ತಾವು ಪಕ್ಷ ಬಿಡುವುದಿಲ್ಲ. ಹದಿಮೂರು ಶಾಸಕರೊಂದಿಗೆ ಬಿಜೆಪಿಗೆ ಹೋಗುತ್ತಾರೆಂಬ ವದಂತಿ ಮಾಧ್ಯಮಗಳ ಸೃಷ್ಟಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Leave a Reply