ಕೆಸಿಆರ್ ರಾಹುಲ್ ಗಾಂಧಿ ತೆಗಳಿದ್ದು ಬಿಜೆಪಿ ಜತೆ ಮೈತ್ರಿ ಕುದುರಿಸಲೆಂದೇ?!

ಡಿಜಿಟಲ್ ಕನ್ನಡ ಟೀಮ್:

ತೆಲಂಗಾಣ ರಾಜಕಾರಣದಲ್ಲಿ ಈಗ ದಿಢೀರ್ ಚುನಾವಣಾ ಕಾವು. ಅಚ್ಚರಿ ನಡೆ ಮೂಲಕ ವಿಧಾನಸಭೆ ವಿಸರ್ಜಿಸಿದ ಟಿಆರೆಸ್ ನಾಯಕ ಕೆ. ಚಂದ್ರಶೇಖರ್ ರಾವ್, ಚುನಾವಣೆಯಲ್ಲಿ ಕಾಂಗ್ರೆಸ್ ನಮ್ಮ ಪ್ರಮುಖ ಎದುರಾಳಿ ಎಂದು ಘೋಷಿಸುವ ಮೂಲಕ ರಣಕಹಳೆ ಮೊಳಗಿಸಿದ್ದಾರೆ. ಆ ಮೂಲಕ ಚುನಾವಣೆಯಲ್ಲಿ ಟಿಆರ್ ಎಸ್ ಬಿಜೆಪಿ ಜತೆ ದೋಸ್ತಿ ಮಾಡಿಕೊಳ್ಳುವ ಅನುಮಾನ ದಟ್ಟವಾಗಿದೆ.

ಆರಂಭದಲ್ಲಿ ಮೋದಿ ಹವಾ ಭಯದಲ್ಲಿ ಅವಧಿಗೂ ಮುನ್ನ ಚುನಾವಣೆಗೆ ಕೆಸಿಆರ್ ನಿರ್ಧರಿಸಿದ್ದಾರೆ ಎಂದು ವಿಶ್ಲೇಷಣೆ ಮಾಡಲಾಗಿತ್ತಾದರೂ ನಂತರದ ಬೆಳವಣಿಗೆಗಳು ಟಿಎಸ್ಆರ್ ಬೇರೆ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ನಿರೂಪಿಸಿದೆ.

ವಿಧಾನಸಭೆ ವಿಸರ್ಜನೆ ಬಳಿಕ ಕೆಸಿಆರ್ ಕಾಂಗ್ರೆಸ್ ತನ್ನ ವಿರೋಧಿ ಎಂದು ಸ್ಪಷ್ಟಪಡಿಸಿದ್ದರು. ಜತೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ‘ದೇಶದ ದೊಡ್ಡ ಕೋಡಂಗಿ’ ಎಂದು ಟೀಕಿಸಿದ್ದರು. ನಂತರ ಪೂರ್ವ ತಯಾರಿ ಮಾಡಿಕೊಂಡು 119 ಕ್ಷೇತ್ರಗಳ ಪೈಕಿ 105 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯನ್ನೂ ಬಿಡುಗಡೆ ಮಾಡಿ ಎಲ್ಲರ ಹುಬ್ಬೇರಿಸಿದ್ದರು. ಇನ್ನು ಬಿಜೆಪಿ ಜತೆಗಿನ ಮೈತ್ರಿ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಕೆಸಿಆರ್, ನಮ್ಮದು ಜಾತ್ಯಾತೀತ ಪಕ್ಷ. ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಏಕಾಂಗಿಯಾಗಿಯೇ ಚುನಾವಣೆ ಎದುರಿಸಿದರೂ ಎಂಐಎಂ ಮಾತ್ರ ತಮ್ಮ ಮಿತ್ರಪಕ್ಷ ಎಂದಿದ್ದರು.

ಆದರೂ ಟಿಎಸ್ಆರ್ ಹಾಗೂ ಬಿಜೆಪಿ ಮೈತ್ರಿ ವಿಚಾರವಾಗಿ ಅನುಮಾನ ಹುಟ್ಟುಕೊಳ್ಳಲು ಕಾರಣ, ಕೆಸಿಆರ್ ಅಭ್ಯರ್ಥಿ ಘೋಷಣೆ ಮಾಡದೇ ಇರುವ 14 ಕ್ಷೇತ್ರಗಳು!

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಟಿಎಸ್ಆರ್ ಖಾಲಿ ಬಿಟ್ಟಿರುವ 14 ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳು ಬಿಜೆಪಿಯದ್ದಾಗಿವೆ. ಬಿಜೆಪಿ ಗೆದ್ದಿದ್ದ ಉಪ್ಪಲ್ ಕ್ಷೇತ್ರದಲ್ಲಿ ಮಾತ್ರ ತನ್ನ ಅಭ್ಯರ್ಥಿ ಹೆಸರು ಘೋಷಣೆ ಮಾಡಿದ್ದಾರೆ. ಇಲ್ಲಿ ಕೆಸಿಆರ್ ಬಿಜೆಪಿ ಜತೆ ಒಳಗೊಳಗೇ ಕೈ ಮಿಲಾಯಿಸಿಕೊಂಡು ಕಾಂಗ್ರೆಸ್ ಹಾಗೂ ಟಿಡಿಪಿಗೆ ಮಣ್ಣು ಮುಕ್ಕಿಸುವ ತಂತ್ರ ಅಡಗಿದೆಯೇ ಎಂಬುದು ಈಗ ಕಾಡುತ್ತಿರುವ ಪ್ರಶ್ನೆ.

ಬಿಜೆಪಿ ತೆಲಂಗಣದಲ್ಲಿ ಇನ್ನೂ ಬೇರು ಗಟ್ಟಿ ಮಾಡಿಕೊಳ್ಳಬೇಕಿದೆ. ಅಲ್ಲಿ ಪ್ರಾಬಲ್ಯ ಹೊಂದಿರುವ ಪಕ್ಷಗಳೆಂದರೆ ಟಿಎಸ್ಆರ್ ಮತ್ತು ಕಾಂಗ್ರೆಸ್.. ಟಿಡಿಪಿ ಹಿಡಿತ ಸಾಧಿಸುವ ಪ್ರಯತ್ನದಲ್ಲಿದೆ. ಹೀಗಾಗಿ ಬಿಜೆಪಿಗೆ ಈ ರಾಜ್ಯದ ವಿಧಾನಸಭಾ ಚುನಾವಣೆ ಇತರ ರಾಜ್ಯಗಳ ಚುನಾವಣೆಯಷ್ಟು ಪ್ರತಿಷ್ಠೆಯ ಕಣವಾಗಿಲ್ಲ. ಆದರೆ ಮುಂದಿನ ವರ್ಷದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ವಿರೋಧಪಕ್ಷಗಳು ಒಂದಾಗುತ್ತಿರುವಾಗ ತೆಲಂಗಾಣದಲ್ಲಿ ಟಿಆರ್ ಎಸ್ ನಂತಹ ಪ್ರಾದೇಶಿಕ ಪಕ್ಷದ ನಿಲುವು ಮಹತ್ವ ಪಡೆಯುತ್ತವೆ. ಟಿಆರ್ ಎಸ್ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿ ಕೂಟ ಸೇರದಿದ್ದರೂ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿ ಕೂಟ ಸೇರದೆ ತಟಸ್ಥವಾಗುಳಿದರೂ ಅದಕ್ಕೇ ಲಾಭ. ಈ ಎಲ್ಲ ಅಂಶಗಳನ್ನು ಪರಾಮರ್ಶಿಸಿದಾಗ ತೆಲಂಗಾಣದಲ್ಲಿ ಬಿಜೆಪಿ ಜತೆ ಪರೋಕ್ಷವಾಗಿಯಾದರೂ ಕೈ ಜೋಡಿಸುವ ಸಾಧ್ಯತೆ ಹೆಚ್ಚಾಗಿದೆ.

Leave a Reply