ಏಕಕಾಲಕ್ಕೆ ಮೂರೂ ಪಕ್ಷಗಳನ್ನು ‘ಬ್ಲಾಕ್ ಮೇಲ್’ ಮಾಡುತ್ತಿರೋ ಜಾರಕಿಹೊಳಿ ಬ್ರದರ್ಸ್!

ಕಳೆದ ವಾರ ಬೆಳಗಾವಿಯಿಂದ ಶುರುವಾದ ರಾಜಕೀಯ ಹಗ್ಗಜಗ್ಗಾಟ ಇದೀಗ ಬಳ್ಳಾರಿ ಸುತ್ತಿಕೊಂಡು ಬಂದು ಬೆಂಗಳೂರು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕುಣಿದಾಡುತ್ತಿದೆ. ತಮ್ನ ಪ್ರತಿಷ್ಠೆಗಾದ ಸೋಲಿಗೆ ಸಮ್ಮಿಶ್ರ ಸರಕಾರವನ್ನೇ ಬಲಿಪೀಠ ಮಾಡಿರುವ ರಮೇಶ್ ಮತ್ತು ಸತೀಶ್ ಜಾರಕಿಹೊಳಿ ಸಹೋದರರನ್ನು ಏಣಿ ಮಾಡಿಕೊಂಡು ಅಧಿಕಾರ ಹಿಡಿಯಲು ಬಿಜೆಪಿ ನಾಯಕ ಯಡಿಯೂರಪ್ಪ ಹವಣಿಸುತ್ತಿದ್ದಾರೆ.

ಆದರೆ ಜಾರಕಿಹೊಳಿ ಸಹೋದರರು ಮುಂದಿಟ್ಟಿರುವ ಬೇಡಿಕೆ ಪಟ್ಟಿ ಕಂಡು ಹೌಹಾರಿರುವ ಯಡಿಯೂರಪ್ಪನವರು ಮುಂದಡಿ ಇಡುವ ಬಗ್ಗೆ ಯೋಚಿಸುತ್ತಿದ್ದಾರೆ. ಬೀಗತನದ ಮೂಲಕ ಒಂದಾಗುತ್ತಿರುವ ರಮೇಶ್ ಜಾರಕಿಹೊಳಿ ಹಾಗೂ ತಮ್ಮದೇ ಪಕ್ಷದ ಶ್ರೀರಾಮುಲು ಎರಡೂ ಪಕ್ಷದ ನಾಯಕ ಸಮುದಾಯದ ಶಾಸಕರ ತಂಡ ಕಟ್ಟುತ್ತಿರುವುದು ಮುಂದೇನಾದರೂ ತಮಗೇ ಮುಳುಗು ನೀರಾಗಬಹುದೇ ಎಂಬುದರ ಬಗ್ಗೆಯೂ ಚಿಂತನೆ ನಡೆಸುತ್ತಿದ್ದಾರೆ.

ಅರ್ಜೆಂಟಾಗಿ ಪರ್ಯಾಯ ಸರಕಾರ ಮಾಡಬೇಕೆನ್ನುವ ಯಡಿಯೂರಪ್ಪನವರ ಆಸೆಗೆ ಲೋಕಸಭೆ ಚುನಾವಣೆ ದೂರಗಾಮಿ ಸಾಧಕ-ಬಾಧಕಗಳ ಲೆಕ್ಕಾಚಾರದಲ್ಲಿರುವ ಹೈಕಮಾಂಡ್ ಸಮ್ಮತಿ ಕೊಟ್ಟಿಲ್ಲ. ಆದರೂ ರಾಜ್ಯ ರಾಜಕಾರಣದಲ್ಲಿ ಒಂದಷ್ಟು ಗೊಂದಲಗಳನ್ನು ಸೃಷ್ಟಿಸಿ ಹೈಕಮಾಂಡ್ ಮೇಲೆ ಒತ್ತಡ ತರುವ ಪ್ರಯತ್ನ ಮಾಡುತ್ತಿದ್ದಾರೆ. ತನ್ನಿಮಿತ್ತ ಯಡಿಯೂರಪ್ಪನವರ ನಿವಾಸದಲ್ಲಿ ಬಿಜೆಪಿ ಮುಖಂಡರ ನಿವಾಸದಲ್ಲಿ ತುರ್ತು ಸಭೆಯೂ ನಡೆದಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್-ಜೆಡಿಎಸ್ ಪಾಳೆಯದಲ್ಲೂ ಪ್ರತಿತಂತ್ರಗಳು ನಡೆದಿದ್ದೂ ಖುದ್ದು ದೇವೇಗೌಡರೇ ಅಖಾಡಕ್ಕಿಳಿದಿದ್ದಾರೆ. ಸರಕಾರ ರಕ್ಷಣೆ ಬಗ್ಗೆ ಪುತ್ರರಾದ ಕುಮಾರಸ್ವಾಮಿ, ರೇವಣ್ಣ ಹಾಗೂ ಕಾಂಗ್ರೆಸ್ ಮುಖಂಡರ ಜತೆ ಸಮಾಲೋಚನೆ ನಡೆಸಿದ್ದಾರೆ.

ಬಿಜೆಪಿ ಆಪರೇಷನ್ ಕಮಲ ಮಾಡಲಿದೆ ಅನ್ನೋ ಸುದ್ದಿ ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ನಾವಾಗೇ ಸರಕಾರ ಉರುಳಿಸೋಲ್ಲ. ಅದಾಗೆ ಉರುಳಿದರೆ ಅಧಿಕಾರ ಹಿಡಿಯದೇ ಸುಮ್ಮನೆ ಕೂರಲ್ಲ ಅಂತ ಸಿ.ಟಿ. ರವಿ, ಶೋಭಾ ಕರಂದ್ಲಾಜೆ, ಜಗದೀಶ ಶೆಟ್ಟರ್ ಸೇರಿದಂತೆ ಬಿಜೆಪಿ ಮುಖಂಡರು ಹೇಳಿದ್ದಾರೆ. ಆದರೆ ಸಚಿವ ರಮೇಶ್ ಜಾರಕಿಹೊಳಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಬಿಜೆಪಿಗೆ ಹೋಗೋದು, ಡಿಸಿಎಂ ಸ್ಥಾನದ ಬೇಡಿಕೆ ಇಟ್ಟಿರೋದು, ಬಿಜೆಪಿ ಮುಖಂಡರನ್ನು ಭೇಟಿ ಮಾಡಿದ್ದೇನೆ ಅನ್ನೋ ಚರ್ಚೆ ಎಲ್ಲವೂ ಸುಳ್ಳು ಎಂದು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ.

ಅಷ್ಟೇ ಅಲ್ಲ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪಿಎಲ್‌ಡಿ ಬ್ಯಾಂಕ್ ವಿಚಾರದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಪಾತ್ರವೇ ಇರಲಿಲ್ಲ. ಎಲ್ಲವೂ ಮಾಧ್ಯಮಗಳ ಸೃಷ್ಟಿ. 12 ಸ್ಥಾನಗಳು ಅವಿರೋಧ ಆಯ್ಕೆಯಾಗಿವೆ. ಹೀಗಿರುವಾಗ ಅಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಗೆಲುವು ಹೇಗಾಗುತ್ತೆ ಎಂದು ಮಾಧ್ಯಮಗಳನ್ನೇ ಪ್ರಶ್ನಿಸಿದ್ದಾರೆ. ಡಿಸಿಎಂ ಪರಮೇಶ್ವರ, ಪಕ್ಷದ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಎಲ್ಲವನ್ನೂ ಬಗೆಹರಿಸಿದ್ದು, ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಆದರೆ ಅವರ ಸಹೋದರ ಸತೀಶ ಜಾರಕಿಹೊಳಿಗೆ ಕಳೆದ ಮೂರು ವರ್ಷಗಳಿಂದ ಅನ್ಯಾಯವಾಗಿದೆ. ಅವರಿಗೆ ಅವಮಾನ ಆದ್ರೆ ನಾವು ಸುಮ್ಮನಿರಲ್ಲ. ನಮ್ಮ ಮನೇಲಿ ಸಿಎಂ ಅಭ್ಯರ್ಥಿ ಸತೀಶ ಜಾರಕಿಹೊಳಿ, ಅವರನ್ನು ಮುಂದಿನ ದಿನಗಳಲ್ಲಿ ಸಿಎಂ ಮಾಡ್ತೇವೆ ಎಂದಿದ್ದಾರೆ. ಇಲ್ಲೂ ಗೊಂದಲ.

ಇದರ ಬೆನ್ನಲ್ಲೇ ಸತೀಶ್ ಜಾರಕಿಹೊಳಿ ಜೆಡಿಎಸ್ ಸಚಿವ ರೇವಣ್ಣ ಅವರನ್ನು 15 ನಿಮಿಷಗಳ ಕಾಲ ಭೇಟಿ ಮಾಡಿ ತಮ್ಮಿಡನೆ 23 ಶಾಸಕರಿದ್ದು, ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ. ಸರಕಾರ ಉರುಳಿ ಬಿಜೆಪಿ ಸರಕಾರ ಬಂದರೆ ನಮ್ಮನ್ನು ಹೊಣೆ ಮಾಡಬೇಡಿ ಎಂದು  ಹೇಳಿರುವುದಾಗಿ ವದಂತಿಗಳು ಹಬ್ಬಿವೆ. ರಮೇಶ್ ಮತ್ತು ಜಾರಕಿಹೊಳಿ ಅವರ ಹೇಳಿಕೆ ಹಾಗೂ ವರದಿಗಳು ಭಿನ್ನವಾಗಿದ್ದು, ಇದರ ಹಿಂದೆ ಬಿಜೆಪಿ ಆಮಿಷಗಳು ಕೆಲಸ ಮಾಡುತ್ತಿರಬಹುದು ಎನ್ನಲಾಗಿದೆ. ಇದಕ್ಕೆ ಪೂರಕವಾಗಿ ಮಹಾರಾಷ್ಟ್ರ ಬಿಜೆಪಿ ಮುಖ್ಯಮಂತ್ರಿಯನ್ನು ರಮೇಶ್ ಭೇಟಿ ಮಾಡಿದ್ದಾರೆ. ಅವರನ್ನು ಭೇಟಿ ಆಗಿದ್ದೇನೆ, ಆಗ್ತೇನೆ. ಅದರಲ್ಲಿ ತಪ್ಪೇನಿದೆ..? ಎಂದಿರುವ ರಮೇಶ್ ಜಾರಕಿಹೊಳಿ, ಮಹಾರಾಷ್ಟ್ರದಲ್ಲಿ ನನ್ನ ಒಡೆತನದ ಸಕ್ಕರೆ ಕಾರ್ಖಾನೆಗಳಿವೆ, ಆ ವಿಚಾರವಾಗಿ ನಾನು ಭೇಟಿಯಾಗಿದ್ದೇನೆ ಎಂದು ಸಬೂಬು ನೀಡಿದ್ದಾರೆ.

ಇನ್ನೊಂದೆಡೆ ಕ್ಷೇತ್ರದ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿಯ ಶ್ರೀರಾಮುಲು, ರೇಣುಕಾಚಾರ್ಯ ಬಂದು ಭೇಟಿ ಮಾಡಿದ್ರು ಅಂತಾನೂ ತಿಳಿಸಿದ್ದಾರೆ. ಆದರೆ ಡಿಸಿಎಂ ಸ್ಥಾನ ಕೊಡ್ತೇವೆ ಎಂದಿದ್ದ ಬಿಜೆಪಿ ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿಯೋದಕ್ಕೆ ಮುಂದಾಗಿದೆ ಅನ್ನೋದು ಸುದ್ದಿ. ಆದ್ರೆ ಈ ಎಲ್ಲಾ ವಿಚಾರಗಳ ಹರಿಗೋಲಾಗಿರುವ ರಮೇಶ್ ಜಾರಕಿಹೊಳಿ, ಇದರಲ್ಲಿ ಸತ್ಯವಿಲ್ಲ ಎಂದಿದ್ದಾರೆ.
ಇನ್ನೊಂದೆಡೆ ಶ್ರೀರಾಮುಲು ಜತೆ ಹಳೇ ಸಂಬಂಧ ಸುಧಾರಿಸಿಕೊಂಡಿರುವ ಶಾಸಕರಾದ ಆನಂದ್ ಸಿಂಗ್ ಮತ್ತು ನಾಗೇಂದ್ರ ಇದ್ದಕ್ಕಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದರ ಹಿಂದೆ ರಮೇಶ್ ಜಾರಕಿಹೊಳಿ ಬೀಗರಾಗುತ್ತಿರೋ ಶ್ರೀರಾಮುಲು ಕೈವಾಡವಿದೆ. ‘ಕಳ್ಳನಿಗೊಂದು ಪಿಳ್ಳೆ ನೆಪ’ ಎಂಬಂತೆ ಬಿಜೆಪಿಗೆ ಪಲಾಯನ ಮಾಡಲು ಅನಗತ್ಯ ಕಾರಣಗಳನ್ನು ಹುಡುಕುತ್ತಿದ್ದಾರೆ. ಹಾಗೆ ನೋಡಿದರೆ ಮೂರು ತಿಂಗಳ ಹಿಂದೆ ಯಡಿಯೂರಪ್ಪ ವಿಶ್ವಾಸ ಮತ ಯಾಚಿಸುವಾಗ ಆನಂದ್ ಸಿಂಗ್ ನಾಪತ್ತೆಯಾಗಿದ್ದರು. ಆಗ ಜಿಲ್ಲಾ ಉಸ್ತುವಾರಿ ಸಚಿವರೂ ಇರಲಿಲ್ಲ, ಬಿಜೆಪಿಗೆ ಪಕ್ಷಾಂತರ ಮಾಡಿ ಅಧಿಕಾರ ಹಿಡಿಯುವುದೊಂದು ಬಿಟ್ಟು ಬೇರೆ ಯಾವುದೇ ಕಾರಣಗಳೂ ಇರಲಿಲ್ಲ. ಈಗಲೂ ಅಷ್ಟೆ.

ಈ ಎಲ್ಲದರ ನಡುವೆ ಹೊರಬಂದಿರುವ ಮಾಹಿತಿ ಅಂದ್ರೆ ರಮೇಶ್ ಜಾರಕಿಹೊಳಿ ಇಟ್ಟಿರುವ ಬೇಡಿಕೆ ಬಗ್ಗೆ ಬಿಜೆಪಿ ಇನ್ನೂ ಅಂತಿಮ ನಿರ್ಧಾರ ಮಾಡಿಲ್ಲ. ಒಬ್ಬರಿಗೆ ಡಿಸಿಎಂ ಸ್ಥಾನ, ಐವರು ಸಚಿವರು, ಉಳಿದವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಬೇಡಿಕೆ ಇಟ್ಟಿದ್ದು, ಈ ಬೇಡಿಕೆಗಳನ್ನು ಬಿಜೆಪಿ ಪರಿಶೀಲನೆ ಮಾಡಲು ನಿರ್ಧಾರ ಮಾಡಿದೆ. ಆದರೆ ಏಕಾಏಕಿ ಇಷ್ಟೊಂದು ದೊಡ್ಡ ಪ್ರಮಾಣದ ಬೇಡಿಕೆ ಈಡೇರಿಸೋದು ಸಾಧ್ಯವಿಲ್ಲ. ಹೈಕಮಾಂಡ್ ಜೊತೆ ಚರ್ಚಿಸಿ ತಿಳಿಸುತ್ತೇವೆ ಎಂದಿದ್ದಾರಂತೆ ಬಿಜೆಪಿ ಮುಖಂಡರು.
ಇನ್ನೊಂದೆಡೆ ಸಿಎಂ ಕುಮಾರಸ್ವಾಮಿ, ನಮಗೂ ಆಪರೇಷನ್ ಮಾಡಲು ಬರುತ್ತೆ. ಬಿಜೆಪಿಯಿಂದ ಒಂದೈದು ಮಂದಿ ಕರೆದುಕೊಂಡು ಬಂದು ತೋರಿಸಬೇಕಾ ಎಂದಿದ್ದಾರೆ. ಬರೀ ವದಂತಿಗಳು, ಗೊಂದಲಗಳಲ್ಲಿ ಮುಳುಗೇಳುತ್ತಿರುವ ರಾಜ್ಯ ರಾಜಕಾರಣ ಕುತೂಹಲದ ಸವಾರಿ ಮಾಡುತ್ತಿದೆ.

Leave a Reply