ತೆಲಂಗಾಣದಲ್ಲಿ ಬಿಜೆಪಿ ತಂತ್ರಕ್ಕೆ ಕಾಂಗ್ರೆಸ್ ಪ್ರತಿತಂತ್ರ!

ಡಿಜಿಟಲ್ ಕನ್ನಡ ಟೀಮ್:

ಒಂದು ವರ್ಷ ಬಾಕಿ ಇರುವಂತೆ ವಿಧಾನಸಭೆ ವಿಸರ್ಜನೆ ಮಾಡಿರುವ ತೆಲಂಗಾಣ ಸಿಎಂ ಬಿಜೆಪಿ ಜೊತೆ ಮೈತ್ರಿ ಕುದುರಿಸ್ತಾರೆ ಅನ್ನೋ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬಂದಿವೆ. ಇದೀಗ ಬಿಜೆಪಿ ಹಾಗೂ ಟಿಆರ್ ಎಸ್ ತಂತ್ರಕ್ಕೆ ಕಾಂಗ್ರೆಸ್ ಪ್ರತಿತಂತ್ರ ಹಾಕಿದೆ.

ಹೌದು, ತೆಲಂಗಾಣ ವಿಧಾನಸಭೆಯಲ್ಲಿ ಬಿಜೆಪಿ – ಟಿಆರ್ ಎಸ್ ಮೈತ್ರಿ ಮಾಡಿಕೊಂಡು ಮತ್ತೊಮ್ಮೆ ಅಧಿಕಾರ ಹಿಡಿಯಲು ಯೋಜನೆ ರೂಪಿಸಿವೆ. ಇದಕ್ಕೆ ಕಾಂಗ್ರೆಸ್ ತೆಲುಗು ದೇಶಂ ಪಕ್ಷದೊಂದಿಗೆ ಮೈತ್ರಿಗೆ ಮುಂದಾಗಿದೆ.

ಟಿಆರ್ ಎಸ್ ಹಾಗು ಬಿಜೆಪಿ ಹೊಂಣದಾಣಿಕೆ ಮಾಡಿಕೊಳ್ಳೋದು ಪಕ್ಕಾ ಆಗ್ತಿದ್ದ ಹಾಗೆ ತೆಲಂಗಾಣದಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಾರ್ಟಿ ಹಾಗೂ ಕಾಂಗ್ರೆಸ್ ಮತ್ತು ಎಡಪಕ್ಷಗಳು ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ಸಜ್ಜಾಗಿವೆ. ಈ ಬಗ್ಗೆ ಈಗಾಗಲೇ ಮಹತ್ವದ ಯೋಜನೆ ರೂಪಿಸಿರುವ ಮೈತ್ರಿ ಪಕ್ಷಗಳು, ಇಂದು ರಾಜ್ಯಪಾಲರನ್ನು ಭೇಟಿ ಮಾಡಿ ವಿಧಾನಸಭೆ ವಿಸರ್ಜನೆ ಮಾಡಿ, ಕೂಡಲೇ ರಾಜ್ಯಪಾಲರ ಆಳ್ವಿಕೆ ಜಾರಿ ಮಾಡುವಂತೆ ಒತ್ತಾಯ ಮಾಡಿವೆ. ಒಂದು ವೇಳೆ ತೆಲಂಗಾಣದಲ್ಲಿ ಕೆ ಚಂದ್ರಶೇಖರ್ ರಾವ್ ಅವರೇ ಹಂಗಾಮಿ ಸಿಎಂ ಆಗಿ ಮುಂದುವರಿದರೆ ನ್ಯಾಯಸಮ್ಮತ ಚುನಾವಣೆ ಅಸಾಧ್ಯ ಎಂದಿದ್ದಾರೆ.

ಜೊತೆಗೆ ಅವಧಿಗೂ ಮುನ್ನವೇ ಚುನಾವಣೆಗೆ ಹೋಗುತ್ತಿರುವ ನಿರ್ಧಾರವನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನೆ ಮಾಡಲು ಮುಂದಾಗಿರುವ ಮೈತ್ರಿ ಪಕ್ಷಗಳು, ಲೋಕಸಭೆಗೂ ಮುನ್ನವೇ ಈ ವರ್ಷಾಂತ್ಯಕ್ಕೆ ಚುನಾವಣೆ ನಡೆಸಿ ಮತ್ತೆ ಅಧಿಕಾರ ಹಿಡಿಯುವ ಕೆಸಿಆರ್ ಕನಸಿಗೆ ಮಣ್ಣೆರೆಚಲು ತಯಾರಿ ನಡೆಸಿವೆ.

ದೇಶದಲ್ಲಿ ಈಗಾಗಲೇ 22 ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಈ ವರ್ಷದ ಅಂತ್ಯಕ್ಕೆ ನಡೆಯುವ ಪಂಚ ರಾಜ್ಯಗಳ ಚುನಾವಣೆಯಲ್ಲಿ ತನ್ನ ಪ್ರಾಬಲ್ಯ ಮುಂದುವರೆಸಿಕೊಂಡು ಹೋಗುವ ಲೆಕ್ಕಾಚಾರಗಳಿವೆ. ಈ ರಾಜ್ಯಗಳ ಜತೆಗೆ ಮೈತ್ರಿ ಸಾಧಿಸುವ ಮೂಲಕ ತೆಲಂಗಾಣದಲ್ಲೂ ಅಧಿಕಾರ ಪಡೆಯುವ ಕನಸು ಕಂಡಿದ್ದ ಬಿಜೆಪಿಗೆ ಕಾಂಗ್ರೆಸ್, ಟಿಡಿಪಿ, ಸಿಪಿಐ ನಿರ್ಧಾರ ಸಡ್ಡು ಹೊಡೆದಂತಾಗಿದೆ.

Leave a Reply