ಆಪರೇಷನ್ ಕಮಲಕ್ಕೆ ಕಿಂಗ್ ಪಿನ್ ಗಳ ಬಳಕೆ: ಕುಮಾರಸ್ವಾಮಿ ಮಾಹಿತಿ ಸ್ಫೋಟ, ಐಟಿಗೆ ಕಾಂಗ್ರೆಸ್ ಕಂಪ್ಲೆಂಟ್!

ಡಿಜಿಟಲ್ ಕನ್ನಡ ಟೀಮ್:

ಲಾಟರಿ, ಇಸ್ಪೀಟ್, ಬೆಟ್ಟಿಂಗ್ ದಂಧೆಕೋರರನ್ನು ಮುಂದಿಟ್ಟಿಕೊಂಡು ಮೈತ್ರಿ ಸರಕಾರ ಉರುಳಿಸಲು  ಬಿಜೆಪಿ ಆಪರೇಷನ್ ಕಮಲಕ್ಕೆ ಇಳಿದಿರುವ ಸ್ಫೋಟಕ ಮಾಹಿತಿಯನ್ನು ಸಿಎಂ ಕುಮಾರಸ್ವಾಮಿ ಬಹಿರಂಗ ಮಾಡಿದ್ದರೆ, ಇನ್ನೊಂದೆಡೆ ಈ ಕಿಂಗ್ ಪಿನ್ ಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಕಾಂಗ್ರೆಸ್ ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದೆ. ಇದರೊಂದಿಗೆ ಆಪರೇಷನ್ ಕಮಲ ಕಾರ್ಯಾಚರಣೆ ಹೊಸತಿರುವು ಪಡೆದಿದೆ.

ಕಾಂಗ್ರೆಸ್-ಜೆಡಿಎಸ್ ಸರಕಾರ ಉರುಳಿಸಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸಿದೆ. ಆಡಳಿತ ಪಕ್ಷದ ಶಾಸಕರಿಗೆ ಕೋಟಿ, ಕೋಟಿ ರುಪಾಯಿಗಳ ಆಮಿಷ ಒಡ್ಡಿದೆ. ಈ ಕಾರ್ಯಾಚರಣೆಗೆ ಲಾಟರಿ, ಇಸ್ಪೀಟ್, ಬೆಟ್ಟಿಂಗ್ ಕಿಂಗ್ ಪಿನ್ ಗಳನ್ನು ಬಳಸಿಕೊಂಡಿದೆ. ಸಕಲೇಶಪುರದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದು, ಬೆಂಗಳೂರಲ್ಲಿ ರೆಸಾರ್ಟ್ ತೆರೆಯಲು ಯತ್ನಿಸಿ ಕೈಸುಟ್ಟುಕೊಂಡು ಪತ್ನಿ, ಮಗನಿಗೆ ಗುಂಡಿಕ್ಕಿ ಜೈಲು ಸೇರುವಂತೆ ಮಾಡಿದವರು, ಒಂದಂಕಿ ಲಾಟರಿ, ಬೆಟ್ಟಿಂಗ್ ದಂಧೆ ನಡೆಸಿ ಪೊಲೀಸರಿಂದ ಅರೆಸ್ಟ್ ಆದವರು, ರೌಡಿ ಶೀಟರ್ ಗಳನ್ನು ಶಾಸಕರ ಮನೆಗೆ ಕಳುಹಿಸಿ ಕೋಟಿ ಕೋಟಿ ರುಪಾಯಿ ಆಡ್ವಾನ್ಸ್ ಕೊಡಲು ಮುಂದಾಗಿದ್ದಾರೆ. ಇದೆಲ್ಲ ತಮಗೆ ಗೊತ್ತಿಲ್ಲ ಎಂದು ತಿಳಿದುಕೊಂಡಿದ್ದಾರೆ. ಇದಕ್ಕೆ ತಿರುಗೇಟು ನೀಡಲು ತಮಗೂ ಗೊತ್ತಿದೆ ಎಂದು ಕುಮಾರಸ್ವಾಮಿ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಗುರುವಾರ ತಿಳಿಸಿದರು.

ಕುಮಾರಸ್ವಾಮಿ ಆಪರೇಷನ್ ಕಮಲ ಕಾರ್ಯಾಚರಣೆಗೆ ಇಳಿದವರು ಹೆಸರು ಬಹಿರಂಗಪಡಿಸದಿದ್ದರೂ ಅವರು ನೀಡಿರುವ ಮಾಹಿತಿ ಪರೋಕ್ಷವಾಗಿ ಸಕಲೇಶಪುರದ ಬಿಜೆಪಿ ಪರಾಜಿತ ಆಭ್ಯರ್ಥಿ, ಬೆಂಗಳೂರು ತಿಲಕನಗರ ಪೊಲೀಸ್ ಠಾಣೆ ರೌಡಿ ಶೀಟರ್, ಸೋಮಶೇಖರ್ ಅಲಿಯಾಸ್ ಜಿಮ್ ಸೋಮ, ಗೋವಾ, ಶ್ರೀಲಂಕಾದಲ್ಲಿ ಕ್ಯಾಸಿನೋ ನಡೆಸುತ್ತಿರುವ ಬೆಂಗಳೂರಿನ ಶೇಷಾದ್ರಿಪುರದ ಉದಯ್ ಗೌಡ, ಕ್ರಿಕೆಟ್ ಬೆಟ್ಟಿಂಗ್, ಒಂದಂಕಿ ಲಾಟರಿ ದಂಧೆ ನಡೆಸುತ್ತಿರುವ ವೈಯಾಲಿ ಕಾವಲ್ ಪೊಲೀಸ್ ಠಾಣೆ ರೌಡಿಶೀಟರ್ ಫೈಟರ್ ರವಿ ಹಾಗೂ ವಿಜಯ್ ಕಿರಗಂದೂರು ಅವರೆಡೆಗೆ ಬೆರಳು ತೋರಿದೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಅಣತಿ ಮೇರೆಗೆ ಮಾಜಿ ಸಚಿವ ಸಿ.ಪಿ.ಯೋಗೀಶ್ವರ, ಹಾಲಿ ಶಾಸಕ ಡಾ. ಅಶ್ವತ್ಧನಾರಾಯಣ ಅವರ ಕುಮ್ಮಕ್ಕಿನಿಂದ ಇವರೆಲ್ಲರೂ ಆಪರೇಷನ್ ಕಮಲಕ್ಕೆ ಇಳಿದಿದ್ದಾರೆ ಎಂಬುದು ಕುಮಾರಸ್ವಾಮಿ ಆರೋಪದ ತಿರುಳು.

ಯಾರ್ಯಾರು ಯಾರ್ಯಾರನ್ನು ಎಲ್ಲೆಲ್ಲಿ ಭೇಟಿ ಮಾಡಿದ್ದಾರೆ, ಯಾವ ಯಾವ ಶಾಸಕರಿಗೆ ಎಷ್ಟೆಟ್ಟು ಕೋಟಿ ರುಪಾಯಿ ಆಮಿಷವೊಡ್ಡಿದ್ದಾರೆ, ಮುಂಗಡವಾಗಿ ಎಷ್ಟು ಹಣ ಕೊಡಲು ಮುಂದಾಗಿದ್ದಾರೆ ಎಂಬೆಲ್ಲ ಮಾಹಿತಿ ತಮ್ಮ ಬಳಿ ಇದೆ. ತಾವೇನೂ ಸುಮ್ಮನೆ ಕುಳಿತಿಲ್ಲ. ಇದಕ್ಕೆ ತಿರುಗೇಟು ನೀಡಲು ತಮಗೂ ಬರುತ್ತದೆ. ಸರಕಾರ ಉರುಳಿಸಿ, ಪರ್ಯಾಯ ಸರಕಾರ ತರಲು ಯಡಿಯೂರಪ್ಪನವರು ಸಾಕಷ್ಟು ಶ್ರಮ ಪಡುತ್ತಿದ್ದಾರೆ. ಅನೇಕ ಮುಹೂರ್ತಗಳನ್ನು ನಿಗದಿ ಮಾಡಿ, ಮುಂದೂಡುತ್ತಾ ಬಂದಿದ್ದಾರೆ. ವರಮಹಾಲಕ್ಷ್ಮಿ ಹಬ್ಬ ಆಯ್ತು, ಗಣೇಶನ ಹಬ್ಬ ಕಳೆಯಿತು, ಈಗ ದಸರಾ ಮುಹೂರ್ತ ಫಿಕ್ಸ್ ಮಾಡಿಕೊಂಡಿದ್ದಾರೆ. ಪಾಪ, ಮಾಡಿಕೊಳ್ಳಲಿ. ನಮ್ಮ ಪಾಡಿಗೆ ನಾವು ರಾಜ್ಯದ ಪ್ರಗತಿ ಕಡೆ ಗಮನ ಹರಿಸುತ್ತೇವೆ. ಸರಕಾರಕ್ಕೆ ಕಿರುಕುಳ ಕೊಡಲು ಬಂದರೆ ರಕ್ಷಣೆ ಮಾಡಿಕೊಳ್ಳಬೇಕಲ್ಲಾ. ನಮ್ಮ ಬಳಿ ಇರುವ ತಂತ್ರಗಳನ್ನು ಪ್ರಯೋಗಿಸುತ್ತೇವೆ. ನಾವಾಗಿ ಹೋಗುವುದಿಲ್ಲ. ಅವರಾಗಿ ಬಂದರೆ ಬಿಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

ಈ ಮಧ್ಯೆ, ಕುಮಾರಸ್ವಾಮಿ ಈ ಮಾಹಿತಿ ಸ್ಫೋಟಿಸುತ್ತಿದ್ದಂತೆ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ನೇತೃತ್ವದ ಪ್ರದೇಶ ಕಾಂಗ್ರೆಸ್ ನಿಯೋಗ ಆಪರೇಷನ್ ಕಮಲಕ್ಕೆ ಹಣ, ಅಧಿಕಾರದ ಆಮಿಷವೊಡ್ಡಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಬಿಜೆಪಿ ಕುಮ್ಮಕ್ಕಿನಿಂದ ಕೆಲವು ಸಮಾಜಘಾತುಕ ಶಕ್ತಿಗಳು ತಮ್ಮ ಪಕ್ಷದ ಐದಾರು ಶಾಸಕರಿಗೆ ಕೋಟ್ಯಂತರ ರುಪಾಯಿ ಆಮಿಷವೊಡ್ಡಿ ಸರಕಾರ ಕೆಡವಲು ಕುತಂತ್ರ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Leave a Reply